
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕೆಲವರು ಒಂದು ಮನೆಯವರ ಮೇಲೆ ದಾಳಿ ಮಾಡಿ, ಆ ಮನೆಯವರನ್ನು ಹೊರಗೆ ಹಾಕಿ ಅವರಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಬಳಿಕ ಮನೆಯೊಳಗಿದ್ದ ಮಹಿಳೆಯನ್ನೂ ಹೊರಗೆ ಎಳೆದುಕೊಂಡು ಬರುತ್ತಾರೆ. ಈ ವೀಡಿಯೊಕ್ಕೆ, ಮದುವೆ ತಯಾರಿಯಲ್ಲಿದ್ದ ಹಿಂದೂ ಕುಟುಂಬದ ಮೇಲೆ ಮುಸ್ಲಿಂ ಗುಂಪುಗಳು ಹಲ್ಲೆ ನಡೆಸಿವೆ ಎಂದು ಕ್ಯಾಪ್ಶನ್ ನೀಡಿ ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 5, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಬ್ಕಾ ನಂಬರ್ ಆಯೇಗಾ! ಮೋದಿ ನಗರ, ಗಾಜಿಯಾಬಾದ್: ಮದುವೆ ತಯಾರಿಯಲ್ಲಿ ನಿರತರಾಗಿದ್ದ ಹಿಂದೂ ಕುಟುಂಬದ ಮೇಲೆ ನೂರಾರು ಮುಸ್ಲಿಮರ ಗುಂಪು ಹಲ್ಲೆ ನಡೆಸಿದೆ. ಒಂದು ಸಣ್ಣ ಅಪಘಾತದ ಬಗ್ಗೆ ವಾದದ ನಂತರ, ಮುಸ್ಲಿಂ ಗುಂಪು ಬಂದು ಕುಟುಂಬದ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿತು. ದಾಳಿಯು ಎಷ್ಟು ಕ್ರೂರವಾಗಿತ್ತು ಎಂದರೆ ಹಲವರು ಗಂಭೀರವಾಗಿ ಗಾಯಗೊಂಡರು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಉತ್ತರಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿ ಎರಡು ಮುಸ್ಲಿಂ ಕುಟುಂಬದ ನಡುವೆ ನಡೆದ ಜಗಳದ ವೀಡಿಯೊ ಇದಾಗಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮುಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ವೈರಲ್ ವೀಡಿಯೊದಲ್ಲಿನ ಸ್ಕ್ರೀನ್ ಶಾಟ್ನೊಂದಿಗೆ 28 ಫೆಬ್ರವರಿ 2025 ರಂದು ನ್ಯೂಸ್ 24 ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಹಣದ ವಿಚಾರಕ್ಕೆ ಗಾಜಿಯಾಬಾದ್‌ನಲ್ಲಿ ಕುಟುಂಬದ ಮಧ್ಯೆ ಹಲ್ಲೆ, ಮನೆಯಿಂದ ಎಳೆದೊಯ್ದ ಘಟನೆ; ನಾಲ್ವರ ಬಂಧನ’’ ಎಂದು ಶೀರ್ಷಿಕೆ ನೀಡಲಾಗಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆ 25 ಫೆಬ್ರವರಿ 2025ನ ಉತ್ತರ ಪ್ರದೇಶ್ ಘಜಿಯಾಬಾದ್ ಜಿಲ್ಲೆಯಲ್ಲಿ ಗಲ ಲೋನಿ ಬಾರ್ಡರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷ್ಮೀ ನಗರ್ ಸ್ಟ್ರೀಟ್ ನಂಬರ್ 14 ರಲ್ಲಿ ಸಂಭವಿಸಿದೆ. ಘಜಿಯಾಬಾದ್‌ನ ಲೋನಿ ಬೋರ್ಡರ್ ಪ್ರದೇಶದಲ್ಲಿ, ಬುಲೆಟ್ ಮೋಟಾರ್‌ಸೈಕಲ್ ಅನ್ನು ಓರ್ವ ವ್ಯಕ್ತಿ ಮೋಡಿಫೈಡ್ ಮಾಡಿ ಸೈಲೆನ್ಸರ್ ನಿಂದ ದೊಡ್ಡ ಶಬ್ದ ಬರುವಂತೆ ಓಡಿಸಿಕೊಂಡು ಬರುತ್ತಿದ್ದ. ಆಗ ಆತನನ್ನು ಓರ್ವ ವ್ಯಕ್ತಿ ಅಡ್ಡಗಟ್ಟುತ್ತಾನೆ. ಇದಕ್ಕೆ ಬೈಕರ್ ತನ್ನ ಕುಟುಂಬದ ಕೆಲವು ವ್ಯಕ್ತಿಗಳನ್ನು ಒಟ್ಟಿಗೆ ಕರೆತಂದು ದಾಳಿ ಮಾಡಿದ್ದಾನೆ. ಆದರೆ ನಂತರ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಇದು ಕೌಟುಂಬಿಕ ಕಲಹ ಆಗಿದೆ. ಇರ್ಷಾದ್ ಎಂಬ ವ್ಯಕ್ತಿ ತನ್ನ ಸೋದರಸಂಬಂಧಿ ಸಾದ್ ಅವರನ್ನು ರಿಜ್ವಾನ್, ಅರ್ಮಾನ್ ಅಯೂಬ್ ಪೆಹ್ಲ್ವಾನ್ ಮತ್ತು ಇತರರು ಹಳೆಯ ಹಣದ ವ್ಯವಹಾರಕ್ಕಾಗಿ ಥಳಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ’’ ಎಂದು ಬರೆಯಲಾಗಿದೆ.
IBC 24 ಕೂಡ ಫೆಬ್ರವರಿ 27, 2025 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಮಾಧ್ಯಮ ವರದಿಗಳ ಪ್ರಕಾರ, ಬುಲೆಟ್ ಬೈಕ್‌ನ ಸೈಲೆನ್ಸರ್‌ನಿಂದ ಬರುತ್ತಿದ್ದ ಶಬ್ದವನ್ನು ವಿರೋಧಿಸಿ ಈ ಜಗಳ ನಡೆದಿದೆ. ಆದರೆ ಪೊಲೀಸರು ಹೇಳಿರುವ ಪ್ರಕಾರ, ಇದು ಕೌಟುಂಬಿಕ ಕಲಹದ ಪ್ರಕರಣವಾಗಿದೆ. ಬೈಕ್‌ನಿಂದ ಬರುತ್ತಿದ್ದ ಸೌಂಡ್ನ ಬಗ್ಗೆ ಪೊಲೀಸರು ಯಾವುದೇ ಉಲ್ಲೇಖ ಮಾಡಿಲ್ಲ. ಪೊಲೀಸರ ಪ್ರಕಾರ, ಈ ಘಟನೆ ಲೋನಿ ಗಡಿಯ ಲಕ್ಷ್ಮಿ ನಗರದ 14 ನೇ ಲೇನ್‌ನಲ್ಲಿ ನಡೆದಿದೆ. ಹಳೆಯ ಹಣದ ವಿವಾದಕ್ಕೆ ಸಂಬಂಧಿಸಿದಂತೆ ಇರ್ಷಾದ್ ಅವರ ಸೋದರಸಂಬಂಧಿ ಸಾದ್ ಮತ್ತು ಕೆಲವರು ಮನೆಗೆ ನುಗ್ಗಿ ಅವರನ್ನು ಥಳಿಸಿದ್ದಾರೆ. ಮೊದಲು ಅವರು ಸಾದ್‌ನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ನಂತರ ಕೋಲುಗಳಿಂದ ಕ್ರೂರವಾಗಿ ಹೊಡೆದರು. ಈ ಸಂಬಂಧ, ಸಾದ್ ಕಡೆಯ ಜನರು ಸಹ ಗಾಯಗೊಂಡರು. ಈ ವಿಷಯದಲ್ಲಿ ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಈ ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ರೂರಲ್ ಆಯುಕ್ತ ಘಜಿಯಾಬಾದ್ ಪೊಲೀಸರು X ನಲ್ಲಿ ಮಾಡಿದ ಪೋಸ್ಟ್ ಕೂಡ ನಮಗೆ ಸಿಕ್ಕಿದೆ. ಎಸಿಪಿ ಅಜಯ್ ಕುಮಾರ್ ಸಿಂಗ್ ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ‘‘ಇರ್ಷಾದ್ ಎಂಬ ವ್ಯಕ್ತಿ ತನ್ನ ಸೋದರಸಂಬಂಧಿ ಸಾದ್ ಅವರನ್ನು ಅಯೂಬ್ ಪೈಲ್ವಾನ್ ಕುಟುಂಬದ ಸದಸ್ಯರು ಅವರ ಮನೆಯಲ್ಲಿ ಬಂಧಿಸಿ ದಾಳಿ ಮಾಡಿದ್ದಾರೆ ಆರೋಪಿಸಿಕೊಂಡು ಲೋನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎರಡು ಕುಟುಂಬಗಳ ನಡುವಿನ ಆರ್ಥಿಕ ವಿವಾದದ ಕಾರಣ ಈ ದಾಳಿ ಸಂಭವಿಸಿದೆ, ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಸಂಬಂಧಿತ BNS ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದೇವೆ’’ ಎಂದು ಹೇಳಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮುಸ್ಲಿಮರು ಹಿಂದೂ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಎರಡು ಮುಸ್ಲಿಂ ಕುಟುಂಬದ ನಡುವೆ ನಡೆದ ಘಟನೆ ಆಗಿದ್ದು, ಇದರಲ್ಲಿ ಯಾವುದೇ ಕೋಮು ಕೋನವಿಲ್ಲ.