

ವ್ಯಕ್ತಿಯೊಬ್ಬ ಕೊಳಚೆ ನೀರನ್ನು ಬಳಸಿ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿ ಬೇಯಿಸುತ್ತಿರುವುದನ್ನು ತೋರಿಸುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮುಸ್ಲಿಂ ವ್ಯಕ್ತಿ ಕಲುಷಿತ ನೀರಿನಿಂದ ಆಹಾರವನ್ನು ತಯಾರಿಸುತ್ತಿದ್ದನೆಂದು ಹಲವಾರು ಬಳಕೆದಾರರು ಆರೋಪಿಸಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಈ ಜಿಹಾದಿಗಳ ಹೋಟೆಲ್ ಮತ್ತು ಢಾಬಾಗಳಲ್ಲಿ ಬಿರಿಯಾನಿ ಮತ್ತು ಇನ್ನಿತರ ತಿಂಡಿ ತಿನಿಸುಗಳನ್ನು ತಿನ್ನುವ ಹಿಂದೂಗಳೇ ನೋಡಿ ಸಕತ್ ಆಗಿರುತ್ತದೆ ಅಲ್ವಾ ಇವರು ಮಾಡಿರುವ ಬಿರಿಯಾನಿ ಮತ್ತು ಇನ್ನಿತರ ತಿಂಡಿ ತಿನಿಸುಗಳು ಮತ್ತು ಆಹಾರಗಳು’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾದ ವೀಡಿಯೊ ಅಲ್ಲ ಬದಲಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಿದ ಕ್ಲಿಪ್ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ Sora.AI ವಾಟರ್‌ಮಾರ್ಕ್ ಇರುವುದು ಕಂಡುಕೊಂಡೆವು. Sora ಒಂದು AI ಸಾಧನವಾಗಿದ್ದು, ಇದು ಸರಳ ಪಠ್ಯ ಪ್ರಾಂಪ್ಟ್‌ಗಳಿಂದ ಅಲ್ಟ್ರಾ-ರಿಯಲಿಸ್ಟಿಕ್ ವೀಡಿಯೊಗಳನ್ನು ತಯಾರಿಸುತ್ತದೆ.
ಇಷ್ಟೇ ಅಲ್ಲದೆ ವೀಡಿಯೊದಲ್ಲಿರುವ ವ್ಯಕ್ತಿ ಕೊಳಚೆ ನೀರನ್ನು ಸ್ಪರ್ಶಿಸದೆಯೇ ತೆಗೆಯುತ್ತಿರುವಂತೆ ಕಾಣುತ್ತದೆ, ಆತನ ಕೈ ಚಲನೆಗಳು ಕೂಡ ವಿಚಿತ್ರವಾಗಿದೆ. ವ್ಯಕ್ತಿ ಭಾರವಾದ ಬಿರಿಯಾನಿ ಪಾತ್ರೆಯನ್ನು ಅದು ಏನೂ ತೂಕವಿಲ್ಲದಂತೆ ಸಲೀಸಾಗಿ ಎತ್ತುತ್ತಾನೆ, ಇದು ಅಸ್ವಾಭಾವಿಕ ರೀತಿಯಲ್ಲಿ ಚಲಿಸುತ್ತದೆ. ಇವು AI- ರಚಿತವಾದ ದೃಶ್ಯಗಳ ಸಾಮಾನ್ಯ ಚಿಹ್ನೆಗಳು ಮತ್ತು ವೀಡಿಯೊ ನಿಜವಾದ ಘಟನೆಯಿಂದಲ್ಲ ಎಂದು ಸೂಚಿಸುತ್ತದೆ.
ಕ್ಲಿಪ್‌ನಲ್ಲಿ "@dark.wab48" ಎಂದು ಬರೆಯಲಾದ ಟಿಕ್ಟಾಕ್ನ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ನಾವು ಈ ಬಳಕೆದಾರರ ಹೆಸರನ್ನು ವಿಪಿಎನ್ ಸಹಾಯದಿಂದ ಆನ್‌ಲೈನ್‌ನಲ್ಲಿ ಹುಡುಕಿದಾಗ, @dark.wab48 ಎಂಬ ಟಿಕ್‌ಟಾಕ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೊ ಸಿಕ್ಕಿತು. ವಿವರಣೆಯಲ್ಲಿ, ವೀಡಿಯೊ ಕ್ಲಿಪ್ ಅನ್ನು AI ಬಳಸಿ ರಚಿಸಲಾಗಿದೆ ಎಂದು ಸೃಷ್ಟಿಕರ್ತ ಸ್ಪಷ್ಟವಾಗಿ ಹೇಳಿದ್ದಾರೆ.
ಇದಲ್ಲದೆ, ವೈರಲ್ ಕ್ಲಿಪ್ ಅನ್ನು AI ಬಳಸಿ ರಚಿಸಲಾಗಿದೆಯೇ ಎಂದು ಖಚಿತಪಡಿಸಲು, ನಾವು ಅದನ್ನು AI-ವಿಷಯ ಪತ್ತೆ ಸಾಧನ ಹೈವ್ ಮಾಡರೇಷನ್ನಲ್ಲಿ ವಿಶ್ಲೇಷಿಸಿದ್ದೇವೆ. ಈ ಉಪಕರಣವು ವೀಡಿಯೊವನ್ನು ಶೇ. 99.9 ರಷ್ಟು AI ಎಂದು ಹೇಳಿದೆ. ಇತರ ಅಸಂಗತತೆಗಳೊಂದಿಗೆ ಸಂಯೋಜಿಸಿದಾಗ, ವೈರಲ್ ಕ್ಲಿಪ್ ಸಂಪೂರ್ಣವಾಗಿ AI-ರಚಿತವಾಗಿದೆ ಮತ್ತು ಯಾವುದೇ ನೈಜ ಘಟನೆಯನ್ನು ತೋರಿಸುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮುಸ್ಲಿಂ ವ್ಯಕ್ತಿಯೊಬ್ಬರು ಬಿರಿಯಾನಿಗೆ ಕೊಳಚೆ ನೀರನ್ನು ಬೆರೆಸುತ್ತಿರುವುದನ್ನು ತೋರಿಸುವ ವೀಡಿಯೊ ಕೃತಕ ಬುದ್ಧಿಮತ್ತೆಯಿಂದ ರಚಿಸಲಾಗಿದೆ, ಇದು ನಿಜವಾಗ ಘಟನೆ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.