Fact Check: ನೇಪಾಳದಲ್ಲಿ ಪ್ರವಾಹ ನಂತರ ಮುಸ್ಲಿಮರಿಂದ ಕುರಾನ್ ಪಠಿಸಿ ಪ್ರಾರ್ಥನೆ ಮಾಡಲಾಗುತ್ತಿದೆಯೇ? ಸುಳ್ಳು, ಸತ್ಯ ಇಲ್ಲಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ನೇಪಾಳದಲ್ಲಿ ಪ್ರವಾಹ ಬಂದ ನಂತರ ಶಾಂತಿಗಾಗಿ ಕುರಾನ್ ಪಠಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
Fact Check: ನೇಪಾಳದಲ್ಲಿ ಪ್ರವಾಹ ನಂತರ ಮುಸ್ಲಿಮರಿಂದ ಕುರಾನ್ ಪಠಿಸಿ ಪ್ರಾರ್ಥನೆ ಮಾಡಲಾಗುತ್ತಿದೆಯೇ? ಸುಳ್ಳು, ಸತ್ಯ ಇಲ್ಲಿದೆ
Published on
2 min read

ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ನೇಪಾಳದಲ್ಲಿ ಪ್ರವಾಹ ಬಂದ ನಂತರ ಶಾಂತಿಗಾಗಿ ಕುರಾನ್ ಪಠಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ 11 ಸೆಕೆಂಡ್‌ಗಳ ವೀಡಿಯೊದಲ್ಲಿ ಹಲವರು ರಸ್ತೆ ಬದಿಯಲ್ಲಿ ಕುಳಿತು ಕುರಾನ್ ಪಠಿಸುತ್ತಿರುವುದು ಕಂಡುಬರುತ್ತದೆ. ಈ ವೇಳೆ ಅಲ್ಲಿ ಹಲವು ಸಮವಸ್ತ್ರಧಾರಿ ಸಿಬ್ಬಂದಿಯೂ ಉಪಸ್ಥಿತರಿರುವುದು ಕಾಣಿಸುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕೆಲವು ದಿನಗಳ ಹಿಂದೆ #Islamophobia ದ್ವೇಷದ ರೋಗಿಗಳಿಂದ ಕುರಾನ್ ಸುಟ್ಟು ಮಸೀದಿಗಳನ್ನು ಕೆಡವಿದ ನೇಪಾಳದಲ್ಲಿ ನೆರೆ ಬಂದ ನಂತರ ದೇಶದ ಶಾಂತಿ ಮತ್ತು ನೆಮ್ಮದಿಗಾಗಿ ಮುಸ್ಲಿಮರಿಂದ ಪವಿತ್ರ ಕುರಾನ್ ಪಠಿಸಿ ಪ್ರಾರ್ಥನೆ ಮಾಡಿಸುತ್ತಿರುವ ದೃಶ್ಯ..ಇಡೀ ಸಾಮಾಜಿಕ ಜಲಾತಾಣಗಳಲ್ಲಿ ಹರಡಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮಧ್ಯ ಏಷ್ಯಾ ದೇಶವಾದ ಕಿರ್ಗಿಸ್ತಾನದ್ದು. ಇಲ್ಲಿ ಆರು ವರ್ಷದ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಸಂದರ್ಭದಲ್ಲಿ, ಆತನ ಸುರಕ್ಷತೆಗಾಗಿ ಜನರು ಪ್ರಾರ್ಥನೆ ಮಾಡುತ್ತಿದ್ದರು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೀಡಿಯೊವನ್ನು ಜೂನ್ 25ರಂದು ಒಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿತು.

ಈ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಬಯೋವನ್ನು ಅನುವಾದಿಸಿ ಪರಿಶೀಲಿಸಿದಾಗ, ಈ ಖಾತೆಯು ಕಿರ್ಗಿಸ್ತಾನದ ಚುಯಿ ಒಬ್ಲಾಸ್ಟ್‌ನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಪತ್ರಿಕಾ ವಿಭಾಗಕ್ಕೆ ಸಂಬಂಧಿಸಿರುವುದು ತಿಳಿದುಬಂದಿತು. ಅಲ್ಲದೆ, ಈ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿರುವ ಹಲವು ವೀಡಿಯೊಗಳಲ್ಲಿ ವೈರಲ್ ವೀಡಿಯೊದಲ್ಲಿ ಕಾಣಿಸುವ ಅದೇ ಸಮವಸ್ತ್ರ ಧರಿಸಿರುವ ಹಲವು ಸಿಬ್ಬಂದಿಯೂ ಕಂಡುಬಂದರು.

ಈ ವೀಡಿಯೊಗಳಲ್ಲಿ ಸಮವಸ್ತ್ರಧಾರಿಗಳು ಧರಿಸಿರುವ ಲೈಫ್ ಜಾಕೆಟ್‌ಗಳ ಮೇಲೆ ‘Kyrgyzstan Rescue’ ಎಂದು ಸ್ಪಷ್ಟವಾಗಿ ಬರೆಯಲಾಗಿರುವುದನ್ನೂ ನೋಡಬಹುದು.

ಇದೇ ವೇಳೆ, ಕಿರ್ಗಿಸ್ತಾನದ ಒಂದು ಮಾಧ್ಯಮ ಪೋರ್ಟಲ್‌ನ ಫೇಸ್‌ಬುಕ್ ಖಾತೆಯಲ್ಲಿ ಜೂನ್ 26ರಂದು ಪೋಸ್ಟ್ ಮಾಡಲಾದ ಮತ್ತೊಂದು ವೀಡಿಯೊವೂ ನಮಗೆ ಲಭ್ಯವಾಯಿತು. ಈ ವೀಡಿಯೊದಲ್ಲಿಯೂ ವೈರಲ್ ವೀಡಿಯೊಗೆ ಹೋಲುವ ದೃಶ್ಯಗಳು ಕಂಡುಬಂದವು.

ವೀಡಿಯೊ ಜೊತೆಗೆ ನೀಡಲಾಗಿದ್ದ ಶೀರ್ಷಿಕೆಯಲ್ಲಿ, ಕಿರ್ಗಿಸ್ತಾನದ ಕೆಗೇಟಿ ಕಣಿವೆಯಲ್ಲಿ ಆರು ವರ್ಷದ ಬಾಲಕನೊಬ್ಬ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಈ ಶೋಧ ಕಾರ್ಯಾಚರಣೆಯಲ್ಲಿ ಹಲವು ದೇಶಗಳ ಸ್ವಯಂಸೇವಕರೂ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿರ್ದಿಕ್ ಗ್ರಾಮದ ಹಾಫಿಜರು ಬಾಲಕನನ್ನು ಪತ್ತೆಹಚ್ಚಲು ಕುರಾನ್ ಪಠಣ ನಡೆಸಿದ್ದರು ಎಂದು ಹೇಳಲಾಗಿತ್ತು.

ಪರಿಶೀಲನೆಯ ವೇಳೆ, ಜೂನ್ 25ರಂದು ಪ್ರಕಟಿಸಲಾದ ಕೆಲವು ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿಯೂ ವೈರಲ್ ವೀಡಿಯೊಗೆ ಹೋಲುವ ದೃಶ್ಯಗಳು ಕಂಡುಬಂದವು. ಈ ಪೋಸ್ಟ್‌ಗಳ ಶೀರ್ಷಿಕೆಯಲ್ಲಿ, ಆರು ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಆತನ ಸುರಕ್ಷತೆಗಾಗಿ ಹಾಫಿಜರು ಕುರಾನ್ ಪಠಣ ನಡೆಸಿದ್ದರು ಎಂದು ತಿಳಿಸಲಾಗಿತ್ತು.

ಈ ಕುರಿತು, ಕಿರ್ಗಿಸ್ತಾನದ ಒಂದು ಸುದ್ದಿ ವೆಬ್‌ಸೈಟ್‌ನಲ್ಲಿ ಜೂನ್ 26ರಂದು ಪ್ರಕಟವಾದ ವರದಿಯೂ ನಮಗೆ ಲಭ್ಯವಾಯಿತು. ವರದಿಯ ಪ್ರಕಾರ, ಜೂನ್ 23ರಂದು ಒಂದು ಕಾರು ಕೆಗೇಟಿ ನದಿಗೆ ಬಿದ್ದಿತ್ತು. ಕಾರಿನಲ್ಲಿ ಇಬ್ಬರು ಮಹಿಳೆಯರು ಮತ್ತು ಐವರು ಮಕ್ಕಳು ಇದ್ದರು. ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಕಾರಿನಿಂದ ಹೊರಬರಲು ಯಶಸ್ವಿಯಾಗಿದ್ದರು. ಆದರೆ ಇಬ್ಬರು ಮಕ್ಕಳು ಕಾರಿನೊಳಗೆ ಸಿಲುಕಿಕೊಂಡಿದ್ದರು. 12 ವರ್ಷದ ಬಾಲಕಿಯ ಮೃತದೇಹವನ್ನು ರಕ್ಷಣಾ ತಂಡವು ಮೊದಲೇ ಪತ್ತೆಹಚ್ಚಿತ್ತು. ಬಳಿಕ ಜೂನ್ 26ರಂದು ಮತ್ತೊಬ್ಬ ಬಾಲಕನ ಮೃತದೇಹವನ್ನೂ ಪತ್ತೆಹಚ್ಚಲಾಯಿತು.

ಹೀಗಾಗಿ ನಮ್ಮ ಪರಿಶೀಲನೆಯಲ್ಲಿ ದೊರೆತ ಸಾಕ್ಷ್ಯಗಳಿಂದ, ನೇಪಾಳದಲ್ಲಿ ಪ್ರವಾಹದಿಂದ ರಕ್ಷಣೆಗಾಗಿ ಕುರಾನ್ ಪಠಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಈ ವೀಡಿಯೊ ಕಿರ್ಗಿಸ್ತಾನದದ್ದು ಎಂಬುದು ಸ್ಪಷ್ಟವಾಗಿದೆ.

logo
South Check
southcheck.in