ಮುಸ್ಲಿಂ ಸಮುದಾಯದವರೆಂದು ಹೇಳಲಾದ ಹಲವಾರು ಪುರುಷರು ಸ್ಕಲ್ ಕ್ಯಾಪ್‌ಗಳನ್ನು ಧರಿಸಿ ಕಲ್ಲು ತೂರಾಟ ನಡೆಸಿ ನೀಲಿ ಬಣ್ಣದ ಬಸ್ ಅನ್ನು ಧ್ವಂಸಗೊಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಳಕೆದಾರರು ಇದು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಹೇಳುತ್ತಿದ್ದು, ಮುಸ್ಲಿಂ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ಕೇಳಿದಾಗ ಚಾಲಕ ಆಕೆಯ ಮನೆ ಬಳಿ ಬಸ್ ನಿಲ್ಲಿಸದ ಕಾರಣ ಮುಸ್ಲಿಮರು ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಪೋಸ್ಟ್ ಹೇಳುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ನವೆಂಬರ್ 18, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಾಕ ಇನ್ನು ಬೇಕಾ. ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ವಿನಂತಿಸಿದಳು ಚಾಲಕ ಮತ್ತು ಕಂಡಕ್ಟರ್ ಬಸ್ ಅನ್ನು ನಿಗದಿತ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವುದು ನಿಮ್ಗೆ ಏಲ್ಲಿ ಬೇಕು ಅಲ್ಲಿ ನಿಲ್ಲಿಸಲ್ಲ ಅಂತ ಹೇಳಿದರು. ಅವಳ ಒತ್ತಾಯಕ್ಕೆ ಮಣಿಯಲಿಲ್ಲ. ಆಗ ಈ ಮುಸ್ಲಿಂ ಮಹಿಳೆ ತನ್ನ ಜನರನ್ನು ಕರೆತಂದು ಈ ದೃಶ್ಯವನ್ನು ಸೃಷ್ಟಿಸಿದ್ದಾಳೆ. ಈ ಕೊಂಗ್ರೇಸ್ ಸರ್ಕಾರ ಸಿದ್ದುವಿನ ತುಷ್ಠಿಕರಣದಿಂದ ಎಂತಹ ದಯನೀಯ ಪರಿಸ್ಥಿತಿಯಲ್ಲಿದೆ ನಮ್ಮ ಬೆಂಗಳೂರು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿರವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ಬೆಂಗಳೂರು ಅಥವಾ ಕರ್ನಾಟಕದಲ್ಲಿ ನಡೆದ ಘಟನೆಯೇ ಅಲ್ಲ, ಬದಲಾಗಿ 2019 ರ ಸೂರತ್‌ನಲ್ಲಿ ನಡೆದ ವೀಡಿಯೊವನ್ನು ಇತ್ತೀಚಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಜುಲೈ 2019 ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಇದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ಪೋಸ್ಟ್ ಪ್ರಕಾರ, ವೀಡಿಯೊ ಸೂರತ್‌ನಿಂದ ಬಂದಿದೆ.
ಹೆಚ್ಚುವರಿಯಾಗಿ, ಜುಲೈ 5, 2019 ರಂದು ‘‘ದಿವ್ಯಾಂಗ್ ನ್ಯೂಸ್’’ ಚಾನೆಲ್ ಯೂಟ್ಯೂಬ್ ಚಾನೆಲ್ನಲ್ಲಿ ಅದೇ ಸ್ಥಳದಿಂದ ಇದೇ ರೀತಿಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಚಾನಲ್ ಪ್ರಕಾರ, ಗುಂಪು ಹತ್ಯೆ ಘಟನೆಗಳ ವಿರುದ್ಧದ ರ್ಯಾಲಿಯಲ್ಲಿ ಸೂರತ್‌ನಲ್ಲಿ ನಡೆದ ಘರ್ಷಣೆಯನ್ನು ವೀಡಿಯೊ ಇದಾಗಿದೆ.
TV9 ಗುಜರಾತಿ ಮತ್ತು ABP ಅಸ್ಮಿತಾ ಕೂಡ ಇದೇ ರೀತಿಯ ವೀಡಿಯೊಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅದೇ ದಿನ, ಜುಲೈ 5, 2019 ರಂದು ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಸೂರತ್‌ನಲ್ಲಿ ಗುಂಪು ಹತ್ಯೆ ಘಟನೆಗಳ ವಿರುದ್ಧದ ರ್ಯಾಲಿ ಎಂದು ವರದಿ ಮಾಡಿದ್ದಾರೆ.
ಜುಲೈ 5, 2019 ರಂದು, ಬಹುಮುಖ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ವಕೀಲ ಬಾಬು ಪಠಾಣ್ ಮತ್ತು ಅವರ ಸಹಚರರು ತಬ್ರೇಜ್ ಅನ್ಸಾರಿಯವರ ಗುಂಪು ಹತ್ಯೆಯನ್ನು ಖಂಡಿಸಲು ರ್ಯಾಲಿಯನ್ನು ನಡೆಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
''ನಾನ್ಪುರದ ಮಕ್ಕೈ ಪೂಲ್ವರೆಗೆ ರ್ಯಾಲಿ ನಡೆಸಲು ಅನುಮತಿ ನೀಡಲಾಯಿತು. ಆದಾಗ್ಯೂ, ಗುಂಪಿನ ಒಂದು ವಿಭಾಗವು ಮುಂದೆ ಸಾಗಿ ಪೊಲೀಸರ ವಿನಂತಿಗಳನ್ನು ನಿರ್ಲಕ್ಷಿಸಿತು. ಕೆಲವು ವ್ಯಕ್ತಿಗಳು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು, ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಮತ್ತು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಈ ಗಲಭೆಯಲ್ಲಿ ರೆಸ್ಟೊರೆಂಟ್ ಬಳಿಯಿದ್ದ ಸಿಟಿ ಬಸ್ ಅನ್ನು ಗುರಿಯಾಗಿಸಿಕೊಂಡ ಗುಂಪು ಅದರ ಗಾಜುಗಳನ್ನು ಒಡೆದು ಹಾಕಿದೆ. ಲಾಠಿ ಚಾರ್ಜ್ ಕೂಡ ನಡೆದಿದೆ. ಕಾಂಗ್ರೆಸ್ ಕೌನ್ಸಿಲರ್ ಅಸ್ಲಾಂ ಸೈಕಲ್ ವಾಲಾ ಸೇರಿದಂತೆ ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ,’’ ಎಂದು ವರದಿಯಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸೂರತ್‌ನಲ್ಲಿ ನಡೆದ ಘಟನೆಯ ಹಳೆಯ ವೀಡಿಯೊವನ್ನು ಕರ್ನಾಟಕದಲ್ಲಿ ನಡೆದ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.