Fact Check: ಧರ್ಮೇಂದ್ರ ಅವರ ಆರೋಗ್ಯದಲ್ಲಿ ಸುಧಾರಣೆ, ಗುಣಮುಖ ಎಂದು ಹಳೇಯ ವೀಡಿಯೊ ವೈರಲ್

ಹಿರಿಯ ನಟ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಏತನ್ಮಧ್ಯೆ, ಅವರು ತಮ್ಮ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಇರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Fact Check: ಧರ್ಮೇಂದ್ರ ಅವರ ಆರೋಗ್ಯದಲ್ಲಿ ಸುಧಾರಣೆ, ಗುಣಮುಖ ಎಂದು ಹಳೇಯ ವೀಡಿಯೊ ವೈರಲ್
Published on
2 min read

ಹಿರಿಯ ನಟ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಏತನ್ಮಧ್ಯೆ, ಅವರು ತಮ್ಮ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಇರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಧರ್ಮೇಂದ್ರ ಅವರು ತಮ್ಮ ಮಕ್ಕಳಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಅವರ ಸಹಾಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದು ಧರ್ಮೇಂದ್ರ ಅವರು ಗುಣಮುಖರಾದ ನಂತರದ ದೃಶ್ಯ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಒಳ್ಳೆಯ ಸುದ್ದಿ! ಧರ್ಮೇಂದ್ರ ಜಿ ಅವರ ಆರೋಗ್ಯದಲ್ಲಿ ಸುಧಾರಣೆ, ನಟ ಗುಣಮುಖರಾಗುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹಳೇಯ ವೀಡಿಯೊ ಆಗಿದ್ದು, ಡಿಸೆಂಬರ್ 2024 ರಲ್ಲಿ ಅವರ 89 ನೇ ಹುಟ್ಟುಹಬ್ಬದ ಸಂದರ್ಭದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಡಿಸೆಂಬರ್ 2024 ರ ಹಲವಾರು ವರದಿಗಳು ಕಂಡುಬಂದವು, ಅವುಗಳು ಈ ವೀಡಿಯೊವನ್ನು ಧರ್ಮೇಂದ್ರ ಅವರ 89 ನೇ ಹುಟ್ಟುಹಬ್ಬದ ಆಚರಣೆ ಎಂದು ಹೇಳುತ್ತವೆ.

ಡಿಸೆಂಬರ್ 8, 2024 ರಂದು ವೈರಲ್ ಭಯಾನಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಅದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಇದು ಹಿರಿಯ ನಟ ಧರ್ಮೇಂದ್ರ ತಮ್ಮ ಪುತ್ರರಾದ ಸನ್ನಿ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ ಎಂದು ಹೇಳಿದೆ.

ಡಿಸೆಂಬರ್ 8, 2024 ರಂದು ಇ-ಟೈಮ್ಸ್‌ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೊದಲ್ಲಿ, ಇದು ಧರ್ಮೇಂದ್ರ ಅವರ 89 ನೇ ಹುಟ್ಟುಹಬ್ಬದಂದು ಎಂದು ಹೇಳುತ್ತದೆ.

ಇದರ ಜೊತೆಗೆ, ಇಂಡಿಯಾ ಟುಡೇ ಮತ್ತು ಟೈಮ್ಸ್ ಆಫ್ ಇಂಡಿಯಾ ಕೂಡ ಡಿಸೆಂಬರ್ 2024 ರಲ್ಲಿ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಧರ್ಮೇಂದ್ರ ಅವರ 89 ನೇ ಹುಟ್ಟುಹಬ್ಬದ ಆಚರಣೆಯನ್ನು ಉಲ್ಲೇಖಿಸಿವೆ. ‘‘ಡಿಸೆಂಬರ್ 8 ರಂದು ಧರ್ಮೇಂದ್ರ ತಮ್ಮ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ತಮ್ಮ 89 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಟ ದೊಡ್ಡ ಕೇಕ್ ಕತ್ತರಿಸಿದರು. ಧರ್ಮೇಂದ್ರ ತಮ್ಮ ಮಗ ಸನ್ನಿ ಡಿಯೋಲ್ ಜೊತೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಸೆರೆಹಿಡಿದಿರುವ ವೀಡಿಯೊ ವೈರಲ್ ಆಗಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಚರಿಸಲಾದ ಧರ್ಮೇಂದ್ರ ಅವರ ಜನ್ಮದಿನದ ಈ ವೀಡಿಯೊವನ್ನು ಆರೋಗ್ಯದಲ್ಲಿ ಗುಣಮುಖರಾಗಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

Related Stories

No stories found.
logo
South Check
southcheck.in