

ಏಪ್ರಿಲ್ 2 ರಂದು ಉತ್ತರ ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಉರುಳಿಬಿದ್ದಿವೆ. ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಉತ್ತರ ಸುಲವೇಸಿ ಪ್ರಾಂತ್ಯದ ಬಿಟುಂಗ್ ಹಾಗೂ ನೆರೆಯ ಉತ್ತರ ಮಾಲುಕು ಪ್ರಾಂತ್ಯದ ಟೆರ್ನೇಟ್ ನಗರದಲ್ಲಿ 10 ರಿಂದ 20 ಸೆಕೆಂಡುಗಳ ಕಾಲ ಬಲವಾದ ಕಂಪನ ಸಂಭವಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಇದು ಇಂಡೋನೇಷ್ಯಾದ ಭೂಕಂಪಕ್ಕೆ ಸಂಬಂಧಪಟ್ಟಿದ್ದು ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಕಟ್ಟಡವೊಂದರ ಒಳಗೆ ಕಂಪನದಿಂದ ಉಂಟಾದ ಪ್ರಕ್ಷುಬ್ಧತೆಯ ಮಟ್ಟವನ್ನು ತೋರಿಸಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಅಕ್ಟೋಬರ್ 2025 ರಲ್ಲಿ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂಪದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಎಕಾನಿಮಿಕ್ ಟೈಮ್ಸ್ ಅಕ್ಟೋಬರ್ 10, 2025 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು.
‘‘ಶುಕ್ರವಾರ (ಅಕ್ಟೋಬರ್ 10, 2025) ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಹಾನಿಗೊಳಗಾದ ಕಟ್ಟಡಗಳು ಮತ್ತು ಮುರಿದ ಪೀಠೋಪಕರಣಗಳನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಮಿಂಡಾನಾವೊ ಪ್ರದೇಶದ ದಾವೊ ಓರಿಯಂಟಲ್‌ನಲ್ಲಿರುವ ಮನಾಯ್ ಪಟ್ಟಣದ ನೀರಿನಲ್ಲಿ ಸಂಭವಿಸಿದ ಪ್ರಬಲವಾದ ಕಡಲಾಚೆಯ ಭೂಕಂಪದಿಂದ ಹಾನಿ ಮತ್ತು ನಂತರದ ಕಂಪನಗಳ ಬಗ್ಗೆ ಫಿಲಿಪೈನ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (ಫಿವೊಲ್ಕ್ಸ್) ಎಚ್ಚರಿಕೆ ನೀಡಿದೆ. ಭೂಕಂಪವು 10 ಕಿಮೀ (6 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.’’ ಎಂಬ ಮಾಹಿತಿ ಇದರಲ್ಲಿದೆ.
ಹಿಂದೂಸ್ಥಾನ್ ಟೈಮ್ಸ್ ಕೂಡ ಅಕ್ಟೋಬರ್ 10, 2025 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದ್ದು, ‘‘ಶುಕ್ರವಾರ ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಾರು ಜನರು ಬೀದಿಗಳಿಗೆ ಓಡಿಹೋಗಿ ಮಿಂಡಾನಾವೊದಾದ್ಯಂತ ವ್ಯಾಪಕ ಭೀತಿಯನ್ನು ಸೃಷ್ಟಿಸಿದ್ದಾರೆ. ವೀಡಿಯೊವೊಂದರಲ್ಲಿ, ಕಂಪನದ ಅನುಭವವಾಗುತ್ತಿದ್ದಂತೆ ಭಯಭೀತರಾದ ನಿವಾಸಿಗಳು ಕಟ್ಟಡಗಳಿಂದ ಹೊರಗೆ ಓಡಿಹೋಗಿ ಸುರಕ್ಷತೆಗಾಗಿ ಪರದಾಡುತ್ತಿರುವುದನ್ನು ತೋರಿಸಿವೆ.’’ ಎಂದು ಬರೆಯಲಾಗಿದೆ.
ಅಕ್ಟೋಬರ್ 10, 2025 ರಂದು ಸುದ್ದಿ ಮಾಧ್ಯಮಗಳು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಏಪ್ರಿಲ್ 2 ರಂದು ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.