Fact Check: ಚಲನ್ ನೀಡಿದ್ದಕ್ಕೆ ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ ಎಂದು ಸುಳ್ಳು ಹೇಳಿಕೆ ವೈರಲ್

ಕೆಲ ಬಳಕೆದಾರರು ಕರ್ನಾಟಕದಲ್ಲಿ ಮುಸ್ಲಿಮರಿಗೆ ಚಲನ್ ನೀಡಿದ್ದಕ್ಕಾಗಿ ಅವರು ಪೊಲೀಸರನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
Fact Check: ಚಲನ್ ನೀಡಿದ್ದಕ್ಕೆ ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆ ಎಂದು ಸುಳ್ಳು ಹೇಳಿಕೆ ವೈರಲ್
Published on
2 min read

ಕರ್ನಾಟಕದ ಹೆಸರಿನಲ್ಲಿ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆ ಸೇರಿ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಕೆಲ ಬಳಕೆದಾರರು ಕರ್ನಾಟಕದಲ್ಲಿ ಮುಸ್ಲಿಮರಿಗೆ ಚಲನ್ ನೀಡಿದ್ದಕ್ಕಾಗಿ ಅವರು ಪೊಲೀಸರನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಅಕ್ಟೋಬರ್ 1 ರಂದು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, “ಕರ್ನಾಟಕ ಸುದ್ದಿ! ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪೊಲೀಸರು ಮುಸ್ಲಿಮರಿಗೆ ಚಲನ್ ನೀಡಿದಾಗ ಥಳಿಸಿದ್ದಾರೆ. ಇದು ಕಾನೂನಿಗೆ ನೇರ ಸವಾಲು. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ, ದೇಶವನ್ನು ಯಾರು ನಡೆಸುತ್ತಾರೆ ಮತ್ತು ಪ್ರತಿಯೊಬ್ಬರ ಭವಿಷ್ಯ ಏನಾಗಬಹುದು ಎಂಬುದನ್ನು ಈ ವೀಡಿಯೊ ಹೇಳುತ್ತದೆ. ಕಹಿ ಸತ್ಯವೆಂದರೆ ದೇಶವು ಹೊರಗಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ.’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪೊಲೀಸರಿಗೆ ಥಳಿಸಿದ ಈ ವೈರಲ್ ವೀಡಿಯೊ ಕರ್ನಾಟಕದ್ದಲ್ಲ ಮತ್ತು 2018 ರಲ್ಲಿ, ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಿಚಾರದಲ್ಲಿ ಗಾಜಿಯಾಬಾದ್‌ನಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ 2021 ರಿಂದಲೂ ಇದೇ ತಪ್ಪು ಹೇಳಿಕೆಯೊಂದಿಗೆ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಜೊತೆಗೆ ಜನವರಿ 21, 2021 ರಂದು, ಎಕ್ಸ್ ಬಳಕೆದಾರರೊಬ್ಬರು ಇದು ಬರೇಲಿಯಲ್ಲಿ ನಡೆದ ಘಟನೆ ಎಂದು ಹೇಳಿರುವ ಪೋಸ್ಟ್ ಕೂಡ ಸಿಕ್ಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಬರೇಲಿ ಪೊಲೀಸರು ಇದು ಗಾಜಿಯಾಬಾದ್‌ನ ಎರಡು ವರ್ಷಗಳ ಹಳೆಯ ವೀಡಿಯೊ ಎಂದು ಕಮೆಂಟ್ ಮಾಡಿರುವುದನ್ನು ನಾವು ಕಂಡಿದ್ದೇವೆ.

ಈ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಶೋಧ ನಡೆಸಿದಾಗ, ಆಗಿನ ಎಸ್‌ಎಸ್‌ಪಿ ವೈಭವ್ ಕೃಷ್ಣ ಅವರ ವೀಡಿಯೊ ಹೇಳಿಕೆಯನ್ನು 27 ಆಗಸ್ಟ್ 2018 ರಂದು ಘಾಜಿಯಾಬಾದ್ ಪೊಲೀಸರ ಎಕ್ಸ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಿರುವುದು ಸಿಕ್ಕಿತು. ‘‘ಈ ಘಟನೆ ಲೋಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಸಿದ್ದು ಎಂದು ತಿಳಿಸಿದ್ದಾರೆ. ವೀಡಿಯೊದಲ್ಲಿ ಮಹಿಳೆ ಮತ್ತು ಇತರರು ಪೊಲೀಸರಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ಬ್ಯಾಂಕ್​ನಲ್ಲಿ ಜಗಳ ನಡೆದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಲ್ಲಿಗೆ ಬಂದ ಪೊಲೀಸರಿಗೆ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದ’’ ಎಂದು ಕೃಷ್ಟ ಅವರು ಹೇಳಿದ್ದಾರೆ.

ಹಾಗೆಯೆ ಈ ಕುರಿತು ಆಗಸ್ಟ್ 27, 2018 ರಂದು ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟ ಆಗಿರುವುದು ನಮಗೆ ಸಿಕ್ಕಿದೆ. ‘‘ಬಲರಾಮ್ ನಗರ ಕಾಲೋನಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊರಗೆ ಮಹಿಳೆ ಮತ್ತು ಆಕೆಯ ಸಹಚರರು ಪೊಲೀಸ್ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಬ್ಯಾಂಕ್​​ನಲ್ಲಿ ಆಧಾರ್ ಕಾರ್ಡ್ ಮಾಡಿಸುವ ವಿಚಾರದಲ್ಲಿ ಯುವಕ ಹಾಗೂ ಬ್ಯಾಂಕ್ ಉದ್ಯೋಗಿಗಳ ನಡುವೆ ಜಗಳ ನಡೆದಿದೆ. ಇದಾದ ನಂತರ ಯುವಕ ತನ್ನ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರೊಂದಿಗೆ ಜಗಳವಾಡಿದ್ದಾನೆ. ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅರುಣ್ ಕುಮಾರ್ ಬಕ್ಷಿ ಅವರ ದೂರಿನ ಮೇರೆಗೆ ಪೊಲೀಸರು ವರದಿ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಶೋಧ ನಡೆಯುತ್ತಿದೆ’’ ಎಂದು ಸುದ್ದಿಯಲ್ಲಿದೆ.

ಈ ಮೂಲಕ ಪೊಲೀಸರಿಗೆ ಥಳಿಸಿದ ಈ ವೈರಲ್ ವೀಡಿಯೊ ಗಾಜಿಯಾಬಾದ್‌ನದ್ದು ಎಂಬುದು ಸ್ಪಷ್ಟವಾಗಿದೆ. 2018 ರಲ್ಲಿ, ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಿವಾದದಲ್ಲಿ ಕೆಲವರು ಪೊಲೀಸರಿಗೆ ಥಳಿಸಿದ ಘಟನೆ ಇದಾಗಿದೆ. ಈ ವೀಡಿಯೊಕ್ಕು ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in