Fact Check: ಭಾರತದ ದಾಳಿಯ ನಂತರ ಪಾಕಿಸ್ತಾನದ ಕರಾಚಿ ಏರ್ಪೋರ್ಟ್ ಎಂದು ಯುಎಸ್ ವಿಮಾನ ಅಪಘಾತದ ವೀಡಿಯೊ ವೈರಲ್
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ, ಪಾಕಿಸ್ತಾನವು ಮೇ 8, 2025 ರ ರಾತ್ರಿ ಭಾರತದ ಪಶ್ಚಿಮ ಗಡಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ಆದರೆ ಭಾರತೀಯ ಸಶಸ್ತ್ರ ಪಡೆಗಳು ಕ್ಷಿಪ್ರವಾಗಿ ಅವುಗಳನ್ನು ತಡೆದು ಗಾಳಿಯಲ್ಲಿಯೇ ನಾಶಪಡಿಸಿದವು. ಏತನ್ಮಧ್ಯೆ, ಪಾಕಿಸ್ತಾನದ ಕರಾಚಿಯ ಮೇಲೆ ಭಾರತ ನಡೆಸಿದ ದಾಳಿಯಿಂದ ಉಂಟಾದ ವಿನಾಶವನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ರಸ್ತೆಯಾದ್ಯಂತ ಅವಶೇಷಗಳು ಚಲ್ಲಾಪಿಪ್ಪಿ ಆಗಿರುವುದನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದ ಕರಾಚಿ ಏರ್ಪೋರ್ಟ್’’ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ಇದೇ ವೀಡಿಯೊವನ್ನು ಹಂಚಿಕೊಂಡು, ‘‘ಲಾಹೋರ್‌ನ ಜಿನ್ನಾ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಕರಾಚಿ ಬಂದರಿನಲ್ಲಿ 12 ಭಾರಿ ಸ್ಫೋಟಗಳು ಸಂಭವಿಸಿವೆ ಮತ್ತು ಹಡಗುಗಳು ಧಗಧಗ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ವೀಡಿಯೊ ಅಲ್ಲ. ಇದು ಅಮೆರಿಕದ ಫಿಲಡೆಲ್ಫಿಯಾದಲ್ಲಿ ಲಿಯರ್ಜೆಟ್ ವಿಮಾನ ಅಪಘಾತವನ್ನು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ಫೆಬ್ರವರಿ 1, 2025 ರಂದು ಹಕನ್ ತುಲುಹಾನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡೆವು. ಇದಕ್ಕೆ "ಫಿಲಡೆಲ್ಫಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದ ಕುರಿತು ಹೊಸ ಅಪ್ಡೇಟ್! ಏನು ನಡೆಯುತ್ತಿದೆ?" ಎಂಬ ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊದಲ್ಲಿ 28 ಸೆಕೆಂಡ್ಗಳ ನಂತರ ವೈರಲ್ ಕ್ಲಿಪ್ ಅನ್ನು ನೋಡಬಹುದು.
The Normal News ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಫೆಬ್ರವರಿ 1, 2025 ರಂದು ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಹಂಚಿಕೊಳ್ಳಲಾಗಿದ್ದು, ‘‘ಇಂದು ಸಂಜೆ ಫಿಲಡೆಲ್ಫಿಯಾದಲ್ಲಿ ಲಿಯರ್ಜೆಟ್ ವಿಮಾನ ಅಪಘಾತಕ್ಕೀಡಾಗಿ, ಹಲವಾರು ಮನೆಗಳಿಗೆ ಡಿಕ್ಕಿ ಹೊಡೆದಿದೆ. ಈ ವಿಮಾನವು ವೈದ್ಯಕೀಯ ವಿಮಾನವಾಗಿದ್ದು, ರೋಗಿ, ವೈದ್ಯರು ಮತ್ತು ರೋಗಿಯ ಕುಟುಂಬ ಸದಸ್ಯರು ಸೇರಿದಂತೆ ಹಲವಾರು ಜನರನ್ನು ಹೊತ್ತೊಯ್ಯುತ್ತಿತ್ತು. ಇದರಿಂದ ಹೆಚ್ಚುವರಿ ಸಾವುನೋವುಗಳು ವರದಿಯಾಗಿವೆ. ಲಿಯರ್‌ಜೆಟ್‌ನಲ್ಲಿ 6 ಜನರು ಇದ್ದರು ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ದೃಢಪಡಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, The Economic Times ಫೆಬ್ರವರಿ 1, 2025 ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದ್ದು, ಶುಕ್ರವಾರ ರಾತ್ರಿ ಈಶಾನ್ಯ ಫಿಲಡೆಲ್ಫಿಯಾದ ಶಾಪಿಂಗ್ ಸೆಂಟರ್ ಬಳಿ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವೈದ್ಯಕೀಯ ವಿಮಾನವೊಂದು ಪತನಗೊಂಡು, ಯಾರೂ ಬದುಕುಳಿದಿಲ್ಲ ಎಂದು ಹೇಳಿದೆ. ಜೆಟ್ ರೆಸ್ಕ್ಯೂ ಏರ್ ಆಂಬ್ಯುಲೆನ್ಸ್ ನಿರ್ವಹಿಸುವ ಲಿಯರ್‌ಜೆಟ್ 55 ಅನ್ನು ಒಳಗೊಂಡ ಈ ದುರಂತ ಘಟನೆಯು ಜನವರಿ 31, 2025 ರಂದು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಂಭವಿಸಿದೆ. ಈ ದುರಂತ ಘಟನೆಯು ಹಡಗಿನಲ್ಲಿದ್ದ ಆರು ಜನರ ಸಾವಿಗೆ ಕಾರಣವಾಯಿತು ಮತ್ತು ನೆಲದ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿತು ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ, ವೈರಲ್ ವೀಡಿಯೊವು ಕರಾಚಿಯ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಿಂದ ಉಂಟಾದ ವಿನಾಶವನ್ನು ತೋರಿಸುವುದಿಲ್ಲ, ಬದಲಿಗೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ಸಂಭವಿಸಿದ ಲಿಯರ್‌ಜೆಟ್ ವಿಮಾನ ಅಪಘಾತವನ್ನು ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.