

ಧ್ರುವ್ ರಾಠಿ ಅವರ ಲಂಡನ್ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವ ವಿಡಿಯೊ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲ ಜನರು ಪಾಕಿಸ್ತಾನ ಹಾಗೂ ಭಾರತದ ಧ್ವಜಗಳನ್ನು ಹಿಡಿದುಕೊಡು ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿರುವುದು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಯರು ಕೂಡ ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಧ್ರುವ್ ರಾಠೀ, ಧನ್ಯವಾದಗಳು. ಅವರು ತಮ್ಮ ಅಜ್ಜ-ಅಜ್ಜಿಯರನ್ನು ನೆನಪಿಸಿಕೊಂಡು ಭಾರತೀಯರಾಗುತ್ತಿರಬೇಕು.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊಕ್ಕು ಧ್ರುವ್ ರಾಠಿ ಅವರ ಲಂಡನ್ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಇದು ಆಗಸ್ಟ್ 15 ರಂದು ನಡೆದ ಪಿಕಾಡಿಲಿ ಸರ್ಕಸ್ ಬೀದಿ ಪ್ರದರ್ಶನದ ಹಳೆಯ ವಿಡಿಯೊ.
ನಿಜಾಂಶವನ್ನು ತಿಳಿಯಲು ನಾವು VPN ಬಳಸಿ ವೈರಲ್ ವಿಡಿಯೊದ ಪ್ರಮುಖ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಅಮೀರ್ ಹಾಶ್ಮಿ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ವಿಡಿಯೊದಲ್ಲಿನ ದೃಶ್ಯಗಳಿಗೆ ಹೋಲಿಕೆಯಾಗುವ ಹಲವು ವಿಡಿಯೊಗಳನ್ನು ನಾವು ಕಂಡುಕೊಂಡೆವು. ಆಗಸ್ಟ್ 24 ರಂದು ಹಂಚಿಕೊಂಡು ಈ ವಿಡಿಯೊಗಳಲ್ಲಿಯೂ ಅದೇ ಗಾಯಕ ಹಾಡುತ್ತಿರುವುದನ್ನು ನೋಡಬಹುದು. ವೈರಲ್ ವಿಡಿಯೊದಲ್ಲಿರುವ ಗಾಯಕನದ್ದೇ ಈ ಇನ್ಸ್ಟಾಗ್ರಾಂ ಖಾತೆ ಎಂಬುದು ನಮಗೆ ತಿಳಿಯಿತು.
ಆಗಸ್ಟ್ 17ರಂದು ಈ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಲಾದ ಮತ್ತೊಂದು ವಿಡಿಯೊ ನಮಗೆ ಲಭ್ಯವಾಯಿತು. ಇದರಲ್ಲಿ ಜನರು ಭಾರತದ ಮತ್ತು ಪಾಕಿಸ್ತಾನದ ಧ್ವಜಗಳನ್ನು ಹಿಡಿದುಕೊಂಡು ಒಟ್ಟಾಗಿ ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿರುವುದನ್ನು ಕಾಣಬಹುದು.
ಈ ಪೋಸ್ಟ್ನ ಶೀರ್ಷಿಕೆಯಲ್ಲಿ ಹೀಗೆ ಬರೆಯಲಾಗಿದೆ: ‘‘ಪ್ರತಿ ವರ್ಷ ಆಗಸ್ಟ್ 15ರಂದು, ಶಾಂತಿ, ಏಕತೆ ಮತ್ತು ಮಾನವೀಯತೆಯನ್ನು ಆಚರಿಸಲು ನಾನು ಲಂಡನ್ನಲ್ಲಿ ಪಾಕಿಸ್ತಾನಿಯರು ಮತ್ತು ಭಾರತೀಯರನ್ನು ಒಟ್ಟುಗೂಡಿಸುತ್ತೇನೆ PKIN. ಪಾಕಿಸ್ತಾನಿಯರು ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಾರೆ ಮತ್ತು ಭಾರತೀಯರು ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡುತ್ತಾರೆ. ಪರಸ್ಪರ ಪ್ರೀತಿ ಮತ್ತು ಗೌರವದೊಂದಿಗೆ ಎಲ್ಲರೂ ಒಟ್ಟಾಗಿ ನಿಲ್ಲುತ್ತಾರೆ. ಪಾಕಿಸ್ತಾನ-ಭಾರತ ಏಕತೆಯ ಈ ಸಂದೇಶವನ್ನು ಲಂಡನ್ಗೆ ತರುವುದಕ್ಕೆ ಹೆಮ್ಮೆಪಡುತ್ತೇನೆ.’’
ಅಮೀರ್ ಹಾಶ್ಮಿ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದಾಗ, ಇದರಲ್ಲಿ ಪ್ರಕಟಿಸಲಾದ ಜಾಹೀರಾತೊಂದೂ ನಮಗೆ ಲಭ್ಯವಾಯಿತು. ಅದರ ಪ್ರಕಾರ, ‘ಪಿಕಾಡಿಲಿ ಸರ್ಕಸ್’ ಕಾರ್ಯಕ್ರಮವನ್ನು 2026ರ ಆಗಸ್ಟ್ 15ರಂದು ಆಯೋಜಿಸಲಾಗಿತ್ತು.
ಇನ್ನೂ, ಅಮೀರ್ ಹಾಶ್ಮಿ ಅವರ ಟಿಕ್ಟಾಕ್ ಖಾತೆಯಲ್ಲಿ ವೈರಲ್ ವಿಡಿಯೊವನ್ನು 2026ರ ಆಗಸ್ಟ್ 17ರಂದು ಅಪ್ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡೆವು.
ಅಲ್ಲದೆ ಹುಡುಕದಾಟದ ಸಂದರ್ಭ ಯೂಟ್ಯೂಬ್ ಚಾನೆಲ್ ಒಂದರ ಪ್ರಕಾರ, ಲಂಡನ್ನಲ್ಲಿ ಪಿಕಾಡಿಲಿ ಸರ್ಕಸ್ ಕಾರ್ಯಕ್ರಮವನ್ನು ಅಮೀರ್ ಹಾಶ್ಮಿ ಆ್ಯಂಡ್ ಕಂಪನಿ ಆಯೋಜಿಸಿತ್ತು.
ಇದರಿಂದ ವೈರಲ್ ವಿಡಿಯೊಗೂ ಧ್ರುವ್ ರಾಠಿ ಅವರ ಲಂಡನ್ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ವೈರಲ್ ಹೇಳಿಕೆ ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.