
ಜೂನ್ 12 ರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ, ಅದರಲ್ಲಿ ಈ ವಿಮಾನ ಅಪಘಾತದಲ್ಲಿ ಇಡೀ ವಿಮಾನ ಸುಟ್ಟುಹೋಗಿದೆ ಆದರೆ ಕುರಾನ್ ಮಾತ್ರ ಸುಟ್ಟುಹೋಗಿಲ್ಲ ಎಂದು ಹೇಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ ಓರ್ವ ವ್ಯಕ್ತಿ ಅವಶೇಷಗಳ ಮಧ್ಯೆ ಕುರಾನ್ ಅನ್ನು ತೆರೆದು ತೋರಿಸುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡು, ‘‘ಎಲ್ಲ ಸುಟ್ಟು ಕರಕಲ್ ವಾದರು ಪವಿತ್ರ ಕುರಾನ್ ಮಾತ್ರ ಹೆಂಗೆ ಇದೆ ನೋಡಿ..!’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ. ವೈರಲ್ ವೀಡಿಯೊ ಅಹಮದಾಬಾದ್ ವಿಮಾನ ಅಪಘಾತಕ್ಕೆ ಸಂಬಂಧಿಸಿಲ್ಲ. ಈ ವೀಡಿಯೊ ಮಾರ್ಚ್ 2025 ರಿಂದ ಅಂತರ್ಜಾಲದಲ್ಲಿದೆ, ಅಹಮದಾಬಾದ್ ವಿಮಾನ ಅಪಘಾತ ಜೂನ್ 12, 2025 ರಂದು ಸಂಭವಿಸಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದೆವು, ಆದರೆ 2025 ರ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಅವಶೇಷಗಳಲ್ಲಿ ಕುರಾನ್ ಕಂಡುಬಂದಿದೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಆದಾಗ್ಯೂ, ಘಟನೆಯ ನಂತರ ಭಗ್ನಾವಶೇಷಗಳಲ್ಲಿ ಶ್ರೀಮದ್ ಭಗವದ್ಗೀತೆ ಸುರಕ್ಷಿತವಾಗಿ ಸಿಕ್ಕಿದೆ ಎಂಬ ಹಲವಾರು ವರದಿಗಳು ನಮಗೆ ಕಂಡುಬಂದಿವೆ. ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇದಾದ ನಂತರ ನಾವು ವೀಡಿಯೊವನ್ನು ಎಚ್ಚರಿಕೆಯಿಂದ ವೀಕ್ಷಿಸಿದೆವು. ಇಡೀ ವೀಡಿಯೊವನ್ನು ನೋಡಿದ ನಂತರ ಇದು ವಿಮಾನದ ವೀಡಿಯೊ ಅಲ್ಲ ಬದಲಾಗಿ ಒಂದು ಕೋಣೆಯ ವೀಡಿಯೊ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹೀಗಾಗಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ ಮಾರ್ಚ್ 2025 ರ ಅದೇ ದೃಶ್ಯಗಳನ್ನು ಒಳಗೊಂಡ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ನಮಗೆ ಸಿಕ್ಕವು, ಇದು ಜೂನ್ 12, 2025 ರ ಏರ್ ಇಂಡಿಯಾ ಅಪಘಾತಕ್ಕೂ ಮೊದಲು ಆನ್‌ಲೈನ್‌ನಲ್ಲಿತ್ತು ಎಂದು ದೃಢಪಡಿಸುತ್ತದೆ. ಪೋಸ್ಟ್‌ಗಳಲ್ಲಿ ಒಂದು ವೀಡಿಯೊ ಲಿಬಿಯಾದಿಂದ ಬಂದಿದೆ ಎಂದು ಹೇಳಲಾಗಿದೆ.
ವೀಡಿಯೊವನ್ನು ಮೂಲತಃ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಲಭ್ಯವಿರುವ ಪುರಾವೆಗಳ ಪ್ರಕಾರ ಇದು ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಮೊದಲು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ದೃಢಪಡಿಸುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಈ ವೈರಲ್ ವೀಡಿಯೊ ಜೂನ್ 2025 ರ ಅಹಮದಾಬಾದ್ ವಿಮಾನ ಅಪಘಾತದ ಅವಶೇಷಗಳಲ್ಲಿ ಕಂಡುಬಂದ ಕುರಾನ್ ಅನ್ನು ತೋರಿಸುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.