

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥನ ‘Belonging: A Journey of Love’ ಪುಸ್ತಕವನ್ನು ನವೆಂಬರ್ 16ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾವುಕರಾಗುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ನಾಯಕರೂ ಕಾಣಿಸಿಕೊಳ್ಳುತ್ತಾರೆ. ಕಾಂಗ್ರೆಸ್ ನಾಯಕನನ್ನು ಸಮಾಧಾನಪಡಿಸಲು ಕೆಲವರು ಪ್ರಯತ್ನಿಸುತ್ತಿರುವುದನ್ನೂ ನೋಡಬಹುದು.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ‘‘ತಂದೆ ಇಲ್ಲದಿರುವ ಸಂಕಟ ಸುಮ್ಮನೆ ಇದ್ದರೂ ಕಣ್ಣೀರು ಹಾಕದೆ ಇದ್ದರೂ ಕುಸಿಯದೇ ಇದ್ದರೂ ಮಾತುಗಳಿಲ್ಲದಿದ್ದರೂ ಮೌನದ ನೋವಿನ ಸಂದೇಶ ಅಂತರಾತ್ಮಗಳಿಗೆ ಅರ್ಥವಾಗಿಬಿಡುತ್ತದೆ. ಅಲ್ಲವೆ..!!! ನೋಡಿದರೆ ಅರ್ಥವಾಗುತ್ತಿದೆ ಹೇಳುವುದೇ ಬೇಡ. ಪುಸ್ತಕ ಬಿಡುಗಡೆ ವೇಳೆ ಭಾವುಕರಾದರಂತೆ ಕುಸಿದರಂತೆ. ಹೋದವರು ಹೊರಟುಬಿಟ್ಟರು ನಮ್ಮ ಕರ್ಮ ಇನ್ನೂ ನೋಡಬೇಕಿದೆ. ನಗುವ ಹಾಗಿಲ್ಲ ಅಳುವ ಹಾಗಿಲ್ಲ. ಇನ್ನು ಯಾವ ಯಾವ ಪುಸ್ತಕ ಹೊರಬೀಳುತ್ತೋ ಎಷ್ಟು ಕುಸಿಯುತ್ತಾನೋ ನಮ್ಮ ರಾಹುಲ್ ಮಿಯಾ..?’’ ಎಂದು ಬರೆದುಕೊಂಡಿದ್ದಾರೆ. (Archive)
ಸೌತ್ ಚೆಕ್ ನಡೆಸಿದ ಪರಿಶೀಲನೆಯಲ್ಲಿ ಈ ಹೇಳಿಕೆ ಸುಳ್ಳು ಎಂಬುದು ತಿಳಿದುಬಂದಿದೆ. ಈ ವಿಡಿಯೊವನ್ನು ಎಐ ಮೂಲಕ ತಿರುಚಲಾಗಿದೆ.
‘Belonging: A Journey of Love’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ನಮಗೆ ಲಭ್ಯವಾಗಿಲ್ಲ.
ವೈರಲ್ ವಿಡಿಯೊದಲ್ಲಿ ‘BJP4Puducherry’ ಎಂಬ ವಾಟರ್‌ಮಾರ್ಕ್ ಇರುವುದನ್ನೂ ಗಮನಿಸಿದೆವು. ಈ ಸುಳಿವಿನ ಆಧಾರದ ಮೇಲೆ, ವೈರಲ್ ವಿಡಿಯೊದ ವಿಸ್ತೃತ ಮತ್ತು ಕತ್ತರಿಸದ ಆವೃತ್ತಿಯನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪುದುಚೇರಿ ಅಧಿಕೃತ ಖಾತೆಯಲ್ಲಿ ಎಕ್ಸ್‌ನಲ್ಲಿ ಹಂಚಿಕೊಂಡಿರುವುದು ನಮಗೆ ಕಂಡುಬಂದಿದೆ. ಈ ವಿಡಿಯೊವನ್ನು ನವೆಂಬರ್ 16ರಂದು ಇದು ಕೇವಲ ಆರಂಭವಷ್ಟೇ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ವಿಡಿಯೊದಲ್ಲಿರುವ ಪಠ್ಯದಲ್ಲಿ, ತಮ್ಮ ಬಗ್ಗೆ BJP4Puducherry ಮೀಮ್ಸ್‌ಗಳನ್ನು ನೋಡಿದಾಗ ರಾಹುಲ್ ಗಾಂಧಿ ಎಂದು ಬರೆಯಲಾಗಿದೆ. ಅಲ್ಲದೆ, ವಿಡಿಯೊದಲ್ಲಿ ಎಐ ನಿರ್ಮಿತ ಎಂಬ ವಾಟರ್‌ಮಾರ್ಕ್ ಕೂಡ ಇದೆ.
ವಿಡಿಯೊದ ಹಿನ್ನೆಲೆಯಲ್ಲಿರುವ ಪೋಸ್ಟರ್‌ನಲ್ಲಿ ‘MM’ ಲೋಗೊದೊಂದಿಗೆ ಮಹಿಳೆ ಮತ್ತು ಪುರುಷನ ಚಿತ್ರ ಕಾಣಿಸುತ್ತದೆ. ವಿಡಿಯೊದಲ್ಲಿರುವ ಪೋಸ್ಟರ್‌ನ ಭಾಗವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, ಇದೇ ರೀತಿಯ ಚಿತ್ರವೊಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ. ಆ ಚಿತ್ರದಲ್ಲಿ ಇದೇ ವ್ಯಕ್ತಿಗಳಿರುವ ಪೂರ್ಣ ಸಿನಿಮಾದ ಪೋಸ್ಟರ್ ಇದೆ.
ಅಕ್ಟೋಬರ್ 5ರಂದು ಪ್ರಕಟವಾದ ಈ ವರದಿಯ ಶೀರ್ಷಿಕೆ, ವೆಟ್ರಿ ಅವರ ‘ಬ್ಲ್ಯಾಕ್ ಗೋಲ್ಡ್’ ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದಿದೆ. ವರದಿಯ ಪ್ರಕಾರ, ಈ ಚಿತ್ರವು ನಟ ವೆಟ್ರಿ ಅಭಿನಯದ ತಮಿಳು ಸಿನಿಮಾ ‘ಬ್ಲ್ಯಾಕ್ ಗೋಲ್ಡ್’ನ ಪೋಸ್ಟರ್ ಆಗಿದೆ. ಈ ಸಿನಿಮಾವನ್ನು ಎಂಎಂ ಸ್ಟುಡಿಯೋಸ್ ನಿರ್ಮಿಸಿದೆ. ಬಿಜೆಪಿ ವಿಡಿಯೊದಲ್ಲಿನ ಸ್ಕ್ರೀನ್‌ಶಾಟ್ ಮತ್ತು ಸಿನಿಮಾದ ಪೋಸ್ಟರ್ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು.
ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಬಿಜೆಪಿ ವಿಡಿಯೊದ ಹಿನ್ನೆಲೆಯಲ್ಲಿರುವ ವ್ಯಕ್ತಿಗಳನ್ನು ಹೋಲುವ ಜನರು ಕಾಣಿಸುವ ಮತ್ತೊಂದು ವಿಡಿಯೊ ನಮಗೆ ಲಭ್ಯವಾಯಿತು. ಈ ವಿಡಿಯೊದಲ್ಲಿ ಭಾವುಕರಾಗಿ ಕಣ್ಣೀರು ಹಾಕುತ್ತಿರುವಂತೆ ಕಾಣುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ಅಲ್ಲದೆ, ಈ ವಿಡಿಯೊದಲ್ಲಿ ಕಾಂಗ್ರೆಸ್‌ನ ಯಾವುದೇ ಹಿರಿಯ ನಾಯಕರು ಕಾಣಿಸುವುದಿಲ್ಲ.
ಈ ವಿಡಿಯೊವನ್ನು ನವೆಂಬರ್ 12ರಂದು ಅಪ್‌ಲೋಡ್ ಮಾಡಲಾಗಿದ್ದು, ಅದರ ವಿವರಣೆಯಲ್ಲಿ, ಬ್ಲ್ಯಾಕ್ ಗೋಲ್ಡ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾವುಕ ಕ್ಷಣಗಳು. ನಿರ್ಮಾಪಕ ಎಂ. ಮೂರ್ತಿ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಣ್ಣೀರು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿನ ಅವರ ಭಾವುಕ ಭಾಷಣ ಮತ್ತು ಅನಿರೀಕ್ಷಿತ ಕ್ಷಣಗಳನ್ನು ವೀಕ್ಷಿಸಿ ಎಂದು ಬರೆಯಲಾಗಿದೆ.
ತಮಿಳು ಸಿನಿಮಾ ‘ಬ್ಲ್ಯಾಕ್ ಗೋಲ್ಡ್’ನ ನಿರ್ಮಾಪಕ ಎಂ. ಮೂರ್ತಿ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದನ್ನು ತೋರಿಸುವ ಮತ್ತೊಂದು ವಿಡಿಯೊವನ್ನು ಇಲ್ಲಿಯೂ ನೋಡಬಹುದು.
ಸೋನಿಯಾ ಗಾಂಧಿ ಅವರ ಆತ್ಮಕಥನದಲ್ಲಿ ರಾಜೀವ್ ಗಾಂಧಿ ಅವರ ಬಗ್ಗೆ ಬರೆದಿರುವುದನ್ನು ಓದಿ ರಾಹುಲ್ ಗಾಂಧಿ ಕಣ್ಣೀರು ಹಾಕುತ್ತಿರುವುದನ್ನು ಈ ವಿಡಿಯೊ ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ವೈರಲ್ ಹೇಳಿಕೆಗಳು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.