Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್

ರಶ್ಮಿಕಾ ಮಂದಣ್ಣ ಅವರ ಹೇಳಿಕೆಯ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಬಂದ ಬಳಿಕ ಅವರ ಪ್ರತಿಕ್ರಿಯೆ ಎಂದು ಹೇಳಲಾಗುತ್ತಿದೆ.
Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್
Published on
2 min read

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ: ಚಾಪ್ಟರ್ 1 ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕೇವಲ ಐದು ದಿನಕ್ಕೆ ಸಿನಿಮಾ 300 ಕೋಟಿ ಕಲೆಕ್ಷನ್ ದಾಟಿದೆ. ಅನೇಕ ದಿಗ್ಗಜ ನಟರು ಕೂಡ ಸಿನಿಮಾ ವೀಕ್ಷಣೆ ಮಾಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ರಶ್ಮಿಕಾ ಮಂದಣ್ಣ ಅವರ ಹೇಳಿಕೆಯ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಬಂದ ಬಳಿಕ ಅವರ ಪ್ರತಿಕ್ರಿಯೆ ಎಂದು ಹೇಳಲಾಗುತ್ತಿದೆ.

ವೀಡಿಯೊದಲ್ಲಿ ರಶ್ಮಿಕಾ ಹೇಳಿರುವುದೇನು?

‘‘ಕಾಂತಾರ ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರಾ? ಎಂದು ಕೇಳಿದ್ದರು. ಆಗ ನಾನು ನೋಡಿರಲಿಲ್ಲ. ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆ ನಂತರ ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು. ಈತರಹದ ಮಾತುಕತೆಯಾಗಲಿ ಅಥವಾ ನಟರ ನಡುವೆ ಏನಾಗುತ್ತಿದೆ ಎಂಬುದಾಗಲಿ ಹೊರಗಿನವರಿಗೆ ಗೊತ್ತಾಗುವುದಿಲ್ಲ. ನನ್ನ ಖಾಸಗಿ ವಿಷಯಗಳನ್ನು ಕ್ಯಾಮೆರಾದಲ್ಲಿ ಇಟ್ಟುಕೊಂಡು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ.’’

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಂತಾರ 1 ನೊಡ್ದೆ ತುಂಬಾ ಚೆನ್ನಾಗಿದೆ- ರಶ್ಮಿಕಾ ಮಂದಣ್ಣ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. 2022 ರಲ್ಲಿ ಕಾಂತಾರ- ಎ ಲೆಜೆಂಡ್ ಸಿನಿಮಾ ಬಿಡುಗಡೆ ಆದ ಬಳಿಕ ರಶ್ಮಿಕಾ ನೀಡಿದ ಪ್ರತಿಕ್ರಿಯೆ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಕಾಂತಾರ ಚಾಪ್ಟರ್ -1 ಸಿನಿಮಾ ಹಾಗೂ ರಶ್ಮಿಕಾ ಮಂದಣ್ಣ ಎಂಬ ಕೀವರ್ಡ್ ಬಳಸಿ ಗೂಗಲ್​ನಲ್ಲಿ ಇತ್ತೀಚಿನ ಸುದ್ದಿ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಕಂಡುಬಂದಿಲ್ಲ. ಅಲ್ಲದೆ ರಶ್ಮಿಕಾ ಕಾಂತಾರ ಚಾಪ್ಟರ್- 1 ಸಿನಿಮಾ ವೀಕ್ಷಿಸಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿ ಸಿಕ್ಕಿಲ್ಲ.

ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೈರಲ್ ವಿಡಿಯೊವನ್ನು ತೆಲುಗಿನ ಎಂಟರ್​ಟೈನ್ಮೆಂಟ್​ ಯೂಟ್ಯೂಬ್ ಚಾನೆಲ್ Daily Culture ನಲ್ಲಿ ಡಿಸೆಂಬರ್ 8, 2022 ರಂದು ಹಂಚಿಕೊಂಡಿರುವುದು ಸಿಕ್ಕಿತು. ಇದಕ್ಕೆ ‘‘ಕಾಂತಾರ ಸಿನಿಮಾ ನೋಡಿದ ಬಳಿಕ ರಶ್ಮಿಕಾ ಮಂದಣ್ಣ ಅವರ ಪ್ರತಿಕ್ರಿಯೆ’’ ಎಂಬ ಕ್ಯಾಪ್ಶನ್ ನೀಡಲಾಗಿದೆ.

ಕರ್ನಾಟಕ ಟಾಕ್ ಕೂಡ ಡಿಸೆಂಬರ್ 9, 2022 ರಂದು ‘‘ಕಾಂತಾರ ಸಿನಿಮಾ ಕೊನೆಗೂ ನೋಡಿದ್ರಾ ರಶ್ಮಿಕಾ?’’ ಎಂಬ ಶೀರ್ಷಿಕೆಯೊಂದಿಗೆ ಇದೇ ವೀಡಿಯೊವನ್ನು ಹಂಚಿಕೊಂಡಿದೆ.

ಈ ಮಾಹಿತಿಯ ಆಧಾರದ ಮೇಲೆ ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಡಿಸೆಂಬರ್ 2022 ರಲ್ಲಿ ರಶ್ಮಿಕಾ ಮಂದಣ್ಣ ಕಾಂತಾರ ಸಿನಿಮಾ ನೋಡಿದ ಬಳಿಕ ಕೊಟ್ಟ ರಿಯಾಕ್ಷನ್ ಬಗ್ಗೆ ಅನೇಕ ಸುದ್ದಿ ವರದಿಗಳು ಕಂಡುಬಂದವು. ಇದರಲ್ಲೆಲ್ಲ ವೈರಲ್ ವೀಡಿಯೊದಲ್ಲಿ ರಶ್ಮಿಕಾ ಅವರು ಮಾಡಿದ ಮಾತುಗಳೇ ಇವೆ. ಈ ಕುರಿತ ಸುದ್ದಿಯನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕಾಂತಾರ ಚಾಪ್ಟರ್-1 ಸಿನಿಮಾ ನೋಡಿದ ಬಳಿಕ ರಶ್ಮಿಕಾ ಅವರ ರಿಯಾಕ್ಷನ್ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು 2022 ರಲ್ಲಿ ಕಾಂತಾರ- ಎ ಲೆಜೆಂಡ್ ಸಿನಿಮಾ ಬಿಡುಗಡೆ ಆದ ಬಳಿಕ ರಶ್ಮಿಕಾ ಆಡಿದ ಮಾತಾಗಿದೆ.

Related Stories

No stories found.
logo
South Check
southcheck.in