

ವ್ಯಕ್ತಿಯೊಬ್ಬ ವೃದ್ಧ ವ್ಯಕ್ತಿಯನ್ನು ಹೊಡೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ವೃದ್ಧ ವ್ಯಕ್ತಿಯೊಬ್ಬ ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಆಗ ಮತ್ತೊಬ್ಬ ವ್ಯಕ್ತಿ ಬಂದು ಆತನನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ಅನೇಕ ಬಳಕೆದಾರರು ಈ ಪೋಸ್ಟ್ ಅನ್ನು ಹಂಚಿಕೊಂಡು, ವೃದ್ಧ ವ್ಯಕ್ತಿ ತನ್ನ ಸೊಸೆ ಮತ್ತು ಮೊಮ್ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು, ಆದ್ದರಿಂದ ಅವರ ಮಗ ಆತನನ್ನು ಹೊಡೆದಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಮುಲ್ಲಾ ಜಿ ಅವರನ್ನು ರಸ್ತೆಯ ಮಧ್ಯದಲ್ಲಿ ಕ್ರೂರವಾಗಿ ಥಳಿಸಲಾಯಿತು. ಮತ್ತು ಅವರನ್ನು ಹೊಡೆದ ವ್ಯಕ್ತಿ ಬೇರೆ ಯಾರೂ ಅಲ್ಲ ಅವರ ಸ್ವಂತ ಮಗ. ಸಹಾರನ್‌ಪುರದ ಕಸಾಯಿ ಮೊಹಲ್ಲಾದ ಈ ಮುಲ್ಲಾ ಜಿ ಈ ಹಿಂದೆ ತನ್ನ ಮಗನ ಹೆಂಡತಿಯ ಮೇಲೆ ಬಲವಂತವಾಗಿ ವರ್ತಿಸುತ್ತಿದ್ದ ಎಂದು ವರದಿಯಾಗಿದೆ; ಮಗ ಮೌನವಾಗಿದ್ದ. ಆದರೆ ನಂತರ, ಅವನು ತನ್ನ 6 ವರ್ಷದ ಮೊಮ್ಮಗಳ ಮೇಲೆ ಬಲವಂತವಾಗಿ ಹಲ್ಲೆ ಮಾಡಿದನು. ಮೊಮ್ಮಗಳು ಕಿರುಚಿದಾಗ, ಅವಳ ತಾಯಿ ಓಡಿ ಬಂದಳು. ನಂತರ ಅವಳು ಮುಲ್ಲಾ ಜಿಯ ಮಗನಿಗೆ ಕರೆ ಮಾಡಿದಳು, ಅವನು ಬಂದು ಮುಲ್ಲಾ ಜಿಯನ್ನು ಹೊಡೆದನು. ನಿಮ್ಮ ದೃಷ್ಟಿಯಲ್ಲಿ, ಯಾರು ಸರಿ ಮತ್ತು ಯಾರು ತಪ್ಪು?’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಂದೆಯ ಮೇಲೆ ಮಗ ಹಲ್ಲೆ ನಡೆಸಿದ ಘಟನೆ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಯುಪಿ ತಕ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಹಕ್ಕು ಹೇಳಿಕೆಗೆ ಸಂಬಂಧಿಸಿದ ಪೋಸ್ಟ್ ನಮಗೆ ಕಂಡುಬಂದಿದೆ. ಜೂನ್ 9 ರಂದು ವೈರಲ್ ಆಗಿರುವ ವೀಡಿಯೊವನ್ನು ಪೋಸ್ಟ್ ಹಂಚಿಕೊಂಡಿದ್ದು, ಈ ವೀಡಿಯೊ ಸಹರಾನ್‌ಪುರದಲ್ಲಿ ನಡೆದಿದೆ ಎಂದು ಹೇಳುತ್ತದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೊಬ್ಬ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊ ವೈರಲ್ ಆದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
NDTV ವೆಬ್‌ಸೈಟ್‌ನಲ್ಲಿ ವೈರಲ್ ವೀಡಿಯೊ ಜೊತೆಗಿನ ವರದಿಯನ್ನು ಜೂನ್ 9 ರಂದು ಪ್ರಕಟಿಸಲಾಯಿತು. ವರದಿಯ ಪ್ರಕಾರ, ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕುತುಬ್‌ಶೇರ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮಂಕಮೌದಲ್ಲಿ, ಒಬ್ಬ ಮಗ ತನ್ನ ವೃದ್ಧ ತಂದೆಯನ್ನು ಸಾರ್ವಜನಿಕವಾಗಿ ಹೊಡೆದು, ನಿಂದಿಸಿ, ಕಪಾಳಮೋಕ್ಷ ಮಾಡಿ, ಕತ್ತು ಹಿಸುಕಲು ಪ್ರಯತ್ನಿಸಿದನು. ಈ ನಾಚಿಕೆಗೇಡಿನ ಕೃತ್ಯವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಹಾಕಲು ಪ್ರೇರೇಪಿಸಿತು. ಈಗ, ವೃದ್ಧ ತಂದೆ ತನ್ನ ಮಗನನ್ನು ಬಿಡುಗಡೆ ಮಾಡುವಂತೆ ಪೊಲೀಸರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಜೂನ್ 9 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವೃದ್ಧ ತಂದೆಯ ಹೆಸರು ತಹ್ಸೀನ್ ಮತ್ತು ಆರೋಪಿ ಮಗನ ಹೆಸರು ಗಲ್ಫಿಶನ್. ಕುಟುಂಬದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಗ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಯಾರೋ ಅದನ್ನು ವೈರಲ್ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಈ ಅಮಾನವೀಯ ಕೃತ್ಯವನ್ನು ತಕ್ಷಣ ಗುರುತಿಸಿ ಆರೋಪಿ ಮಗನನ್ನು ವಶಕ್ಕೆ ಪಡೆದರು.
ಜೂನ್ 9 ರಂದು ಲೈವ್ ಹಿಂದೂಸ್ಥಾನ್ನಲ್ಲಿ ಪ್ರಕಟವಾದ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆ ಆಸ್ತಿ ವಿವಾದಕ್ಕೆ ಸಂಬಂಧಿಸಿದೆ ಎಂದು ಇದರಲ್ಲಿ ಹೇಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವಯಸ್ಸಾದ ತಂದೆಯನ್ನು ಮಗ ಕ್ರೂರವಾಗಿ ಥಳಿಸಿದ್ದು ಸೊಸೆಯನ್ನು ಕೆಟ್ಟದಾಗಿ ನೋಡಿದ್ದಕ್ಕಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.