
ಬಿಹಾರ ಚುನಾವಣೆಗೆ ಮುನ್ನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆ ಜುಲೈ 9 ರಂದು ನಡೆಯಿತು. ಆರ್‌ಜೆಡಿ, ಕಾಂಗ್ರೆಸ್, ಸಿಪಿಐ-ಎಂಎಲ್‌ನಂತಹ ವಿರೋಧ ಪಕ್ಷಗಳ ನೇತೃತ್ವದಲ್ಲಿ ಆಯೋಜಿಸಿತ್ತು. ಅನೇಕ ನಗರಗಳಲ್ಲಿ ಮಾರುಕಟ್ಟೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು, ರೈಲು ಸಂಚಾರ ಕೂಡ ಸ್ಥಗಿತಗೊಂಡಿತ್ತು. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ, ಕೆಲವು ಪೊಲೀಸರು ಲಾಠಿ ಚಾರ್ಜ್ ನಡೆಸಿ ಒಬ್ಬ ವ್ಯಕ್ತಿಯನ್ನು ಕೋಲಿನಿಂದ ಹೊಡೆಯುವುದನ್ನು ಕಾಣಬಹುದು. ಇದು ಬಿಹಾರ ಬಂದ್‌ನ ಇತ್ತೀಚಿನ ವೀಡಿಯೊ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಹಾರ ಬಂದ್‌ನಲ್ಲಿ ಪಾಟ್ನಾ ಪೊಲೀಸರು. ಹೇಗಾದರೂ ಏನು ನಡೆಯುತ್ತಿದೆಯೋ ಅದು ಶಾಂತಿಯುತವಾಗಿ ನಡೆಯುತ್ತಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕೂ ಇತ್ತೀಚಿನ ಬಿಹಾರ ಬಂದ್‌ಗೂ ಯಾವುದೇ ಸಂಬಂಧವಿಲ್ಲ. ಇದು ಆಗಸ್ಟ್ 2024 ರ ಹಳೆಯ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಇದರಲ್ಲಿ ಸುದ್ದಿ ಸಂಸ್ಥೆ ANI ಯ ಲೋಗೋವನ್ನು ಕಾಣಬಹುದು. ಇದರ ಆಧಾರದ ಮೇಲೆ ನಾವು ವೀಡಿಯೊವನ್ನು ಹುಡುಕಿದೆವು. ಈ ಸಂದರ್ಭ, ಆಗಸ್ಟ್ 21, 2024 ರಂದು ANI ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೈರಲ್ ವೀಡಿಯೊ ನಮಗೆ ಕಂಡುಬಂದಿದೆ. "ಬಿಹಾರ: ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮೀಸಲಾತಿ ತೀರ್ಪಿನ ವಿರುದ್ಧ ದಿನವಿಡೀ ನಡೆದ ಭಾರತ್ ಬಂದ್‌ಗೆ ಬೆಂಬಲವಾಗಿ ಪಾಟ್ನಾದಲ್ಲಿ ಜನರು ಪ್ರತಿಭಟನೆ ನಡೆಸುತ್ತಿರುವಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹಾಗೆಯೆ ನ್ಯೂಸ್ ನೈನ್ ಕೂಡ ಇದೇ ಮಾಹಿತಿಯೊಂದಿಗೆ ಈ ಘಟನೆಯ ಪೂರ್ಣ ವೀಡಿಯೊವನ್ನು ಹಂಚಿಕೊಂಡಿದೆ. ಇದರ 15:38 ನಿಮಿಷಗಳ ಸಮಯದಲ್ಲಿ, ವೈರಲ್ ಕ್ಲಿಪ್ ಅನ್ನು ನೋಡಬಹುದು.
ಈ ಘಟನೆಯನ್ನು ಆಗಸ್ಟ್ 21, 2014 ರಂದು ಮನಿ ಕಂಟ್ರೋಲ್ ವರದಿ ಮಾಡಿದ್ದು, ಸುಪ್ರೀಂ ಕೋರ್ಟ್‌ನ ಉಪ-ಕೋಟ್ ತೀರ್ಪಿನ ವಿರುದ್ಧ ಆರ್‌ಜೆಡಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳ ಬೆಂಬಲದೊಂದಿಗೆ ದಲಿತ ಮತ್ತು ಆದಿವಾಸಿ ಗುಂಪುಗಳು ರಸ್ತೆಗಳು ಮತ್ತು ರೈಲುಗಳನ್ನು ತಡೆದ ಕಾರಣ ಆಗಸ್ಟ್ 21, 2024 ರಂದು ಬಿಹಾರದಾದ್ಯಂತ ದೊಡ್ಡ ಪ್ರತಿಭಟನೆಗಳು ಭುಗಿಲೆದ್ದವು ಎಂದು ಹೇಳಿದೆ.
ಈ ವಿಷಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಾವು ಹುಡುಕಿದಾಗ, ದೈನಿಕ್ ಜಾಗರಣ್ ವೆಬ್‌ಸೈಟ್ ಆಗಸ್ಟ್ 21, 2024 ರಂದು ವರದಿ ಮಾಡಿದ ಪ್ರಕಾರ, "ಅಂಚಿನಲ್ಲಿರುವ ಸಮುದಾಯಗಳಿಗೆ ಬಲವಾದ ಪ್ರಾತಿನಿಧ್ಯ ಮತ್ತು ರಕ್ಷಣೆ ನೀಡುವಂತೆ ಒತ್ತಾಯಿಸಿ ದಲಿತ ಮತ್ತು ಬುಡಕಟ್ಟು ಸಂಘಟನೆಗಳು ಬುಧವಾರ ಭಾರತ್ ಬಂದ್‌ಗೆ ಕರೆ ನೀಡಿವೆ. ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST) ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBC) ನ್ಯಾಯ ಮತ್ತು ಸಮಾನತೆ ಸೇರಿದಂತೆ ಬೇಡಿಕೆಗಳ ಪಟ್ಟಿಯನ್ನು ದಲಿತ ಮತ್ತು ಬುಡಕಟ್ಟು ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ (NACDAOR) ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠದ ಇತ್ತೀಚಿನ ತೀರ್ಪಿನ ಬಗ್ಗೆ NACDAOR ಪ್ರತಿಭಟನಾ ನಿಲುವನ್ನು ತೆಗೆದುಕೊಂಡಿದೆ" ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಇತ್ತೀಚಿನ ಬಿಹಾರ ಬಂದ್‌ಗೂ ವೈರಲ್ ವೀಡಿಯೊದಲ್ಲಿನ ಪೊಲೀಸ್ ಲಾಠಿ ಚಾರ್ಜ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಆಗಸ್ಟ್ 2024 ರ ಹಳೆಯ ವೀಡಿಯೊ ಆಗಿದೆ.