Fact Check: ಇಸ್ರೇಲ್​ನಲ್ಲಿ ಕಾಗೆಗಳ ರಾಶಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೇಯದು

ವೈರಲ್ ವೀಡಿಯೊ ಪಾರ್ಕಿಂಗ್ ಸ್ಥಳದಲ್ಲಿ ಸಾವಿರಾರು ಪಕ್ಷಿಗಳು ಕುಳಿತು ಹಾರುತ್ತಿರುವುದನ್ನು ತೋರಿಸುತ್ತದೆ. ಇದು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ನಡೆದಿರುವುದು ಎಂದು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
Fact Check: ಇಸ್ರೇಲ್​ನಲ್ಲಿ ಕಾಗೆಗಳ ರಾಶಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೇಯದು
Published on
2 min read

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಮಧ್ಯೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊ ಒಂದು ವೇಗವಾಗಿ ವೈರಲ್ ಆಗುತ್ತಿದೆ. ಇದು ಪಾರ್ಕಿಂಗ್ ಸ್ಥಳದಲ್ಲಿ ಸಾವಿರಾರು ಪಕ್ಷಿಗಳು ಕುಳಿತು ಹಾರುತ್ತಿರುವುದನ್ನು ತೋರಿಸುತ್ತದೆ. ಇದು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ನಡೆದಿರುವುದು ಎಂದು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಕಾಗೆಗಳ ರಾಶಿ ಕಂಡು ಇಸ್ರೇಲ್ ಜನರಲ್ಲಿ ಆತಂಕ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆದ ವೀಡಿಯೊ ಹಳೆಯದು ಮತ್ತು ಇತ್ತೀಚಿನ ಯುದ್ಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಆಗ ಜುಲೈ 26, 2024 ರಂದು tgstat ಎಂಬ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊ ಯುಎಸ್ ರಾಜ್ಯವಾದ ಟೆಕ್ಸಾಸ್‌ನಿಂದ ಬಂದಿದೆ ಎಂದು ಹೇಳಲಾಗುತ್ತದೆ.

ಜೂನ್ 2024 ರಲ್ಲಿ ಅದೇ ದೃಶ್ಯವನ್ನು ಒಳಗೊಂಡ ರೆಡ್ಡಿಟ್ ಪೋಸ್ಟ್ ಕೂಡ ನಮಗೆ ಸಿಕ್ಕಿತು. ಪೋಸ್ಟ್‌ನಲ್ಲಿ ಆ ದೃಶ್ಯವು ಯುನೈಟೆಡ್ ಸ್ಟೇಟ್ಸ್‌ನ ಟೆಕ್ಸಾಸ್‌ನಿಂದ ಬಂದಿದೆ ಎಂದು ಹೇಳುವ ಶೀರ್ಷಿಕೆ ಇತ್ತು.

ಇನ್ನು ಏಪ್ರಿಲ್ 6, 2024 ರಂದು ಇನ್‌ಸ್ಟಾಗ್ರಾಮ್ ಬಳಕೆದಾರರ ಪ್ರೊಫೈಲ್‌ನಲ್ಲಿ ಕೂಡ ಇದೇ ವೈರಲ್ ವೀಡಿಯೊ ಅಪ್ಲೋಡ್ ಆಗಿದ್ದು, ಇದರಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ, ವೀಡಿಯೊ ಟೆಕ್ಸಾಸ್‌ನ ಸೂಪರ್‌ ಮಾರ್ಕೆಟ್‌ನಿಂದ ಬಂದಿದೆ, ಅಲ್ಲಿ ಸಾವಿರಾರು ಕಾಗೆಗಳು ಕಂಡುಬಂದಿವೆ.

ಟೆಕ್ಸಾಸ್‌ನ ಪಾರ್ಕಿಂಗ್ ಸ್ಥಳದ ಮೇಲೆ ಹಲವಾರು ಕಾಗೆಗಳು ಹಾರುತ್ತಿರುವ ವೀಡಿಯೊವನ್ನು ಜನವರಿ 10, 2022 ರಂದು ಎಬಿಸಿ ನ್ಯೂಸ್‌ ತನ್ನ ಫೇಸ್‌ಬುಕ್ ಪುಟಕ್ಕೆ ಅಪ್‌ಲೋಡ್ ಮಾಡಿದೆ. ಆದಾಗ್ಯೂ, ಈ ವೀಡಿಯೊ ವೈರಲ್ ವೀಡಿಯೊಗಿಂತ ಕೊಂಚ ಭಿನ್ನವಾಗಿದೆ.

ಬಳಿಕ ನಾವು ಕೀವರ್ಡ್ ಹುಡುಕಾಟ ನಡೆಸಿದಾಗ, ಟೆಕ್ಸಾಸ್‌ನಲ್ಲಿ ಒಂದೇ ರೀತಿಯ ಪಕ್ಷಿ ಚಟುವಟಿಕೆಯನ್ನು ಒಳಗೊಂಡ ಹಲವಾರು US-ಆಧಾರಿತ ವರದಿ ಕಂಡುಬಂತು. ಜನವರಿ 4, 2024 ರಂದು ಫಾಕ್ಸ್ ವೆದರ್‌ನ ಲೇಖನವು "ಟೆಕ್ಸಾಸ್ ಪಾರ್ಕಿಂಗ್ ಸ್ಥಳದಲ್ಲಿ ನೂರಾರು ಪಕ್ಷಿಗಳು ಇಳಿದು, ಭಯಾನಕ ಚಲನಚಿತ್ರವನ್ನು ಹೋಲುವ ದೃಶ್ಯವನ್ನು ಸೃಷ್ಟಿಸಿದವು" ಎಂದು ವರದಿ ಮಾಡಿದೆ.

ಗ್ರೇಟ್-ಟೈಲ್ಡ್ ಗ್ರ್ಯಾಕಲ್ಸ್ ಎಂದು ಕರೆಯಲ್ಪಡುವ ಕಪ್ಪುಹಕ್ಕಿಗಳು ಸಾಮಾನ್ಯವಾಗಿ ಮರಗಳನ್ನು ಹೊಂದಿರುವ ಮಾನವ ವಾಸಿಸುವ ಪ್ರದೇಶಗಳಲ್ಲಿ ಕಂಡುಬರುತ್ತವೆ ಮತ್ತು ವಿಶೇಷವಾಗಿ ಟೆಕ್ಸಾಸ್‌ನ ಹೂಸ್ಟನ್ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿವೆ ಎಂದು ವರದಿ ತಿಳಿಸಿದೆ.

ಟೆಲ್ ಅವಿವ್‌ನಲ್ಲಿ ಕಾಗೆಗಳ ಹಿಂಡು ಕಂಡುಬಂದಿದೆಯೇ?

ಮಾರ್ಚ್ 25, 2026 ರಂದು ಡೈಲಿ ಮೇಲ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಮಾರ್ಚ್ 24 ರಂದು, ಟೆಲ್ ಅವಿವ್‌ನ ಆಕಾಶದಲ್ಲಿ ಕಾಗೆಗಳ ಬೃಹತ್ ಹಿಂಡು ತುಂಬಿತ್ತು. ಎತ್ತರದ ಕಟ್ಟಡಗಳನ್ನು ಸುತ್ತುವರೆದಿರುವ ಸಾವಿರಾರು ಕಾಗೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಅನೇಕರು ಈ ದೃಶ್ಯವನ್ನು ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ್ದಾರೆ. ಆದಾಗ್ಯೂ, ಪಕ್ಷಿ ವಿಜ್ಞಾನಿಗಳು ಇದು ಅಲೌಕಿಕ ವಿದ್ಯಮಾನವಲ್ಲ, ಆದರೆ ವಿಶ್ವದ ಅತ್ಯಂತ ಜನನಿಬಿಡ ಪಕ್ಷಿ ಮಾರ್ಗಗಳಲ್ಲಿ ಒಂದಾದ ನಿಯಮಿತ ಕಾಲೋಚಿತ ವಲಸೆಯ ಭಾಗವಾಗಿದೆ ಎಂದು ಹೇಳುತ್ತಾರೆ. ವಸಂತ ವಲಸೆಯ ಸಮಯದಲ್ಲಿ ಪ್ರತಿ ವರ್ಷ ಸುಮಾರು 500 ಮಿಲಿಯನ್ ಪಕ್ಷಿಗಳು ಇಸ್ರೇಲ್ ಮೂಲಕ ಹಾದು ಹೋಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ಹೂಡೆಡ್ ಕಾಗೆಗಳು ಸಾಮಾನ್ಯವಾಗಿ ತಮ್ಮ ಗೂಡುಕಟ್ಟುವ ಋತುವಿನಲ್ಲಿ ನಗರ ಪ್ರದೇಶಗಳಲ್ಲಿ ಸೇರುತ್ತವೆ." ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಸಮಯದಲ್ಲಿ ಇಸ್ರೇಲ್​ನಲ್ಲಿ ಕಾಗೆಗಳ ರಾಶಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೆಯದು, ಇದಕ್ಕೂ ಇತ್ತೀಚಿನ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

logo
South Check
southcheck.in