Fact Check: ಈ ವೈರಲ್ ಫೋಟೋ ಬರೇಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪೊಲೀಸ್ ಕ್ರಮದ್ದಲ್ಲ, ನಿಜಾಂಶ ಇಲ್ಲಿದೆ

ಬರೇಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಫೋಟೋ ಹರಿದಾಡುತ್ತಿದೆ. ಈ ಫೋಟೋದಲ್ಲಿ ಗಾಯಗೊಂಡ ಯುವಕನೊಬ್ಬನ ಸೊಂಟದ ಮೇಲೆ ಬ್ಯಾಂಡೇಜ್‌ ಹಾಕಲಾಗಿದ್ದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ.
Fact Check: ಈ ವೈರಲ್ ಫೋಟೋ ಬರೇಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪೊಲೀಸ್ ಕ್ರಮದ್ದಲ್ಲ, ನಿಜಾಂಶ ಇಲ್ಲಿದೆ
Published on
2 min read

ಬರೇಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಫೋಟೋ ಹರಿದಾಡುತ್ತಿದೆ. ಈ ಫೋಟೋದಲ್ಲಿ ಗಾಯಗೊಂಡ ಯುವಕನೊಬ್ಬನ ಸೊಂಟದ ಮೇಲೆ ಬ್ಯಾಂಡೇಜ್‌ ಹಾಕಲಾಗಿದ್ದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಬರೇಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಈ ವ್ಯಕ್ತಿ ಭಾಗಿಯಾಗಿದ್ದಕ್ಕಾಗಿ ಯುಪಿ ಪೊಲೀಸರು ಅವನಿಗೆ ಹೀಗೆ ಮಾಡಿದ್ದಾರೆ ಎಂದು ಫೋಟೋದೊಂದಿಗೆ ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಐ ಲವ್ ಮಹಮ್ಮದ್ ಹೆಸರಲ್ಲಿ ದೊಂಬಿ ಗಲಾಟೆ ಮಾಡಿದವರಿಗೆ ಉತ್ತರ ಪ್ರದೇಶದ ಯೋಗಿ_ಆದಿತ್ಯನಾಥ್ ಪೊಲೀಸ್ ರಿಂದ ಮಸಾಜ್ ಮಾಡಿಸಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

ವಾಸ್ತವವಾಗಿ, "ಐ ಲವ್ ಮೊಹಮ್ಮದ್" ಸುತ್ತಲಿನ ವಿವಾದವು ಸೆಪ್ಟೆಂಬರ್ 26 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಭುಗಿಲೆದ್ದಾಗ ಹಿಂಸಾತ್ಮಕವಾಯಿತು. ವರದಿಗಳ ಪ್ರಕಾರ, ಪ್ರಾರ್ಥನೆಯ ನಂತರ, ಜನರು "ಐ ಲವ್ ಮೊಹಮ್ಮದ್" ಪೋಸ್ಟರ್‌ಗಳನ್ನು ಹಿಡಿದುಕೊಂಡು ಬೀದಿಗಿಳಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಪ್ರತಿಭಟನೆ ಹಿಂಸಾತ್ಮಕವಾಯಿತು ಮತ್ತು ಘರ್ಷಣೆಗಳು ಭುಗಿಲೆದ್ದವು. ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬರೇಲಿ ಹಿಂಸಾಚಾರಕ್ಕೂ ಈ ಫೋಟೋಕ್ಕೂ ಯಾವುದೇ ಸಂಬಂಧವಿಲ್ಲ. ಅಸಲಿಗೆ ಇದು 2023 ರಲ್ಲಿ ಉತ್ತರಕಾಶಿಯಿಂದ ತೆಗೆದ ಫೋಟೋ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜನವರಿ 21 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಇದೇ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂತು. ಇದರಿಂದ ಫೋಟೋ ಹಳೆಯದು ಎಂದು ಸ್ಪಷ್ಟವಾಯಿತು. ಈ ಫೇಸ್‌ಬುಕ್ ಪೋಸ್ಟ್‌ನಲ್ಲಿ ವೈರಲ್ ಫೋಟೋ ಜೊತೆಗೆ ಒಂದು ಪತ್ರಿಕೆಯ ಕ್ಲಿಪ್ಪಿಂಗ್ ಕೂಡ ಸೇರಿದೆ. ಜನವರಿ 12, 2023 ರ ಈ ಸುದ್ದಿ ವರದಿಯ ಪ್ರಕಾರ, ಉತ್ತರಕಾಶಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ಪರಿಶಿಷ್ಟ ಜಾತಿಯ ಯುವಕನನ್ನು ರಾತ್ರೋರಾತ್ರಿ ಸುಟ್ಟ ಕಟ್ಟಿಗೆಯಿಂದ ಥಳಿಸಲಾಯಿತು.

ಇದೇವೇಳೆ ಜನವರಿ 2023 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಫೋಟೋ ಜೊತೆಗೆ ಗಾಯಗೊಂಡ ಯುವಕನ ಮತ್ತೊಂದು ಫೋಟೋ ಕೂಡ ಹಂಚಿಕೊಂಡಿರುವುದು ಸಿಕ್ಕಿದೆ. ಈ ಫೋಟೋದಲ್ಲಿ ಆ ವ್ಯಕ್ತಿಯ ಮುಖ ಗೋಚರಿಸುತ್ತದೆ. ಇದರಲ್ಲಿ ಕೂಡ ಈ ಫೋಟೋ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಿಂದ ಬಂದಿದೆ ಎಂದು ಹೇಳಿದೆ. ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ದಲಿತ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಪ್ರಾರ್ಥನೆ ಸಲ್ಲಿಸಲು ಯುವಕ ದೇವಾಲಯಕ್ಕೆ ಪ್ರವೇಶಿಸಿದಾಗ, ಕೆಲವರು ಅವನ ಮೇಲೆ ಸುಡುವ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಜನವರಿ 13, 2023 ರಂದು, ಅಮರ್ ಉಜಾಲಾ ವರದಿ ಕಂಡುಬಂತು. ಉತ್ತರಕಾಶಿಯ ಮೋರಿ ಅಭಿವೃದ್ಧಿ ಬ್ಲಾಕ್‌ನಲ್ಲಿರುವ ಸಲ್ರಾ ಗ್ರಾಮದಿಂದ ಜಾತಿ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿ ಮಾಡಿದೆ. ಆಯುಷ್ (22) ಎಂಬ ದಲಿತ ವ್ಯಕ್ತಿ ಐದು ಮೇಲ್ಜಾತಿಯ ಪುರುಷರು ತನ್ನ ಮೇಲೆ ಕೊಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ವೈರಲ್ ಫೋಟೋದಲ್ಲಿರುವ ವ್ಯಕ್ತಿಯ ಫೋಟೋವನ್ನು ಈ ಸುದ್ದಿಯಲ್ಲೂ ಕಾಣಬಹುದು.

ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ರಾತ್ರಿಯಿಡೀ ಸುಟ್ಟ ಕಟ್ಟಿಗೆಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆಯುಷ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆರೋಪಿಗಳನ್ನು ಬಂಧಿಸಲಾಗಿದೆ.

ಬಿಬಿಸಿ ಪ್ರಕಾರ, ಬೈನೋಲ್ ಗ್ರಾಮದ ನಿವಾಸಿ ಆಯುಷ್ ದೇವಾಲಯಕ್ಕೆ ಪ್ರವೇಶಿಸಿ ಶವಪೆಟ್ಟಿಗೆ ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾನೆ ಎಂದು ಸಲ್ರಾ ಗ್ರಾಮಸ್ಥರು ಹೇಳಿದ್ದಾರೆ. ಆ ಸಮಯದಲ್ಲಿ, ಘಟನೆಯು ಮಾಧ್ಯಮಗಳಿಂದ ಸಾಮಾಜಿಕ ಮಾಧ್ಯಮಗಳಿಗೆ ಹರಡಿತು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಎರಡು ವರ್ಷಗಳಿಗಿಂತ ಹಳೆಯದಾದ ಈ ಫೋಟೋವನ್ನು ಬರೇಲಿಯಲ್ಲಿನ ಪೊಲೀಸ್ ಕ್ರಮಕ್ಕೆ ಲಿಂಕ್ ಮಾಡಿ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in