ಕರ್ನಾಟಕದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಂಡ ಸುದ್ದಿ ಕೇಳುತ್ತಲೇ ಇರುತ್ತೇವೆ. ಎರಡು ದಿನಗಳ ದಿಂದೆಯಷ್ಟೆ ಧಾರಾವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣಕ್ಕೆ ಚಿರತೆ ಬಂದಿದ್ದು ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
raghunmurthy07 ಎಂಬ ಎಕ್ಸ್ ಖಾತೆಯಿಂದ ಈ ವೀಡಿಯೊ ಅಪ್ಲೋಡ್ ಆಗಿದ್ದು ದೇವಸ್ಥಾನದ ಮುಂಭಾಗದಲ್ಲಿ ಹುಲಿಯಂತೆ ಕಾಣುವ ಪ್ರಾಣಿ ನಡೆದಾಡಿಕೊಂಡು ಹೋಗುತ್ತಿದೆ. ಇವರು ಈ ಫೋಸ್ಟ್ಗೆ ‘ಬೆಂಗಳೂರು ರಾಜಾಜಿನಗರ ಮಧ್ಯರಾತ್ರಿ 1 ಘಂಟೆ’ ಎಂಬ ಶೀರ್ಷಿಕೆ ನೀಡಿದ್ದಾರೆ.
ಹಾಗೆಯೆ ಸಾಯಿ ಮೋಹನ್ ಎಂಬವರು ಕೂಡ ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ಭಯವಿಲ್ಲದ ಹುಲಿ ಇಂದು ಕರ್ನಾಟಕದ ರಸ್ತೆಗಳಲ್ಲಿ ತಿರುಗಾಟ ಎಂಬ ಶೀರ್ಷಿಕೆ ನೀಡಿದ್ದಾರೆ.
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಅಸಲಿಗೆ ಈ ವೀಡಿಯೊ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಮತ್ತು ಈ ವೀಡಿಯೊದಲ್ಲಿರುವುದು ಹುಲಿ ಅಲ್ಲ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಸಿಂಹ. ಈ ಘಟನೆ ಗುಜರಾತ್‌ನ ರಾಜುಲಾದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ನಡೆದಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಮಾರ್ಚ್ 26, 2024 ರಂದು ಅಮಿತಾಭ್ ಚೌಧರಿ ಎಂಬ ಎಕ್ಸ್ ಬಳಕೆದಾರರು ಇದೇ ವೀಡಿಯೊವನ್ನು ಹಂಚಿಕೊಂಡಿರುವುದನ್ನು ಎಂದು ನಾವು ಕಂಡುಕೊಂಡಿದ್ದೇವೆ. ಆ ವಿಡಿಯೋದಲ್ಲಿ ಗುಜರಾತ್‌ನ ರಾಜುಲಾದ ಲಕ್ಷ್ಮಿ ನಾರಾಯಣ ಮಂದಿರದ ಆವರಣದಲ್ಲಿ ಸಿಂಹ ತಿರುಗಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ‘Lion Laxmi Narayan Mandir Gujarat’ ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ಮಾರ್ಚ್ 9, 2024 ರಂದು ಟಿವಿ9 ಗುಜರಾತಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಿದ ವೀಡಿಯೊ ವರದಿ ನಮಗೆ ಸಿಕ್ಕಿದೆ. “ರಾಜುಲಾ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಸಿಂಹ ಪತ್ತೆ’’ ಶೀರ್ಷಿಕೆಯೊಂದಿಗೆ ವೀಡಿಯೊ ಅಪ್‌ಲೋಡ್ ಮಾಡಲಾಗಿದೆ.
ಹಾಗೆಯೆ ದಿವ್ಯಭಾಸ್ಕರ್ ವೆಬ್ಸೈಟ್ನಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ. ರಾಜುಲಾ-ಜಾಫರಾಬಾದ್ ಪ್ರದೇಶದಲ್ಲಿ ಸಿಂಹಗಳ ಓಡಾಟ ಗಣನೀಯವಾಗಿ ಹೆಚ್ಚಿದೆ. ಕೋವಾಯಮ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ಸಿಂಹ ಕಾಣಿಸಿಕೊಂಡಿದೆ. ಇಲ್ಲಿನ ರಸ್ತೆಗಳಲ್ಲಿ ಕೆಲವು ಸಿಂಹಗಳು ತಿರುಗಾಡುತ್ತಿರುವುದು ಕಂಡುಬರುತ್ತದೆ ಎಂದು ಬರೆಯಲಾಗಿದೆ.
ಇನ್ನು ಇದೇ ವೀಡಿಯೊ ಆಂಧ್ರಪ್ರದೇಶದಲ್ಲೂ ವೈರಲ್ ಆಗಿರುವುದನ್ನು ಕೂಡ ನಾವು ಕಂಡಿದ್ದೇವೆ. ವಿಜಯವಾಡದ ದೇವಸ್ಥಾನದ ಬಳಿ ದುರ್ಗಾದೇವಿಯ ವಾಹನವಾದ ಸಿಂಹವು ಸಂಚರಿಸುತ್ತಿದೆ ಎಂದು ಕೆಲವು ಯೂಟ್ಯೂಬ್ ವಿಡಿಯೋಗಳಲ್ಲಿ ಹೇಳಲಾಗಿದೆ.
ಹೀಗಾಗಿ ವೈರಲ್ ಆಗಿರುವ ವಿಡಿಯೋ ಬೆಂಗಳೂರು ಅಥವಾ ವಿಜಯವಾಡದ್ದಲ್ಲ. ಇದು ಗುಜರಾತ್‌ನ ರಾಜುಲಾ ಲಕ್ಷ್ಮೀನಾರಾಯಣ ದೇವಸ್ಥಾನದ ಬಳಿ ನಡೆದಿರುವ ಘಟನೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.