ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸುವ ವೀಡಿಯೊಗಳು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರದಲ್ಲಿ ಕೂಡ ಈ ಬಾರಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಪಟಾಕಿಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿವೆ. ಈ ದೃಶ್ಯವನ್ನು ರಸ್ತೆಯೊಂದರಿಂದ ಚಿತ್ರೀಕರಿಸಲಾಗಿದೆ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿ ಈ ಪಟಾಕಿಗಳನ್ನು ವೀಕ್ಷಿಸುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸೌದಿ ಅರೇಬಿಯಾದಲ್ಲಿ ಶ್ರೀರಾಮನನ್ನ ಕರೆತಂದಿದ್ದರಿಂದ ಅಲ್ಲಿ ಮೊದಲ ದೀಪಾವಳಿ ಈ ರೀತಿ ಆಚರಿಸಿದರೆಂದು ಇಲ್ಲಿನ ಕನ್ವರ್ಟ್ ಗಳಿಗೆ ತಿಳಿಸಿ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಸೌದಿ ಅರೇಬಿಯಾದಿಂದಲ್ಲ, ಡಿಸೆಂಬರ್ 2023 ರಲ್ಲಿ ಆಚರಿಸಲಾದ ಯುಎಇಯ 52 ನೇ ರಾಷ್ಟ್ರೀಯ ದಿನದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಹುಡುಕಿದಾಗ, ಈ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಡಿಸೆಂಬರ್ 3, 2023 ರಂದು ಇದೇ ವೀಡಿಯೊವನ್ನು ಹಂಚಿಕೊಳ್ಳುವಾಗ, ಇದು ದುಬೈನಲ್ಲಿ ಆಚರಿಸಲಾದ ಯುಎಇಯ ರಾಷ್ಟ್ರೀಯ ದಿನಾಚರಣೆಯ ವೀಡಿಯೊ ಎಂದು ಬಳಕೆದಾರರು ಬರೆದಿದ್ದಾರೆ.
ಈ ಮಾಹಿತಿಯ ಜೊತೆಗೆ, “ದುಬೈ ವಾಕರ್” ಹೆಸರಿನ ಫೇಸ್‌ಬುಕ್ ಪುಟವು ಈ ವೀಡಿಯೊವನ್ನು ಡಿಸೆಂಬರ್ 2023 ರಲ್ಲಿ ಹಂಚಿಕೊಂಡಿದೆ. ಯುಎಇಯ ರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ಆಚರಿಸಲಾಗುತ್ತದೆ. ಈ ವಿಡಿಯೋ ಈ ವರ್ಷದ ದೀಪಾವಳಿಯದ್ದಾಗಿರಲು ಸಾಧ್ಯವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಇದಲ್ಲದೆ, ನಾವು ಈ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿಯೂ ಕಂಡುಕೊಂಡಿದ್ದೇವೆ. ಡಿಸೆಂಬರ್ 3, 2023 ರಂದು ಹಂಚಿಕೊಂಡ ವೀಡಿಯೊಕ್ಕೆ ಯುಎಇಯ ರಾಷ್ಟ್ರೀಯ ದಿನ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಸೌದಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಆಚರಿಸಲಾಗಿದೆ ಎಂಬ ಅಧಿಕೃತ ಸುದ್ದಿ ಎಲ್ಲೂ ಇಲ್ಲ. ಹೀಗೇ ನಡೆದಿದ್ದರೆ ಖಂಡಿತಾ ಈ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಹೀಗಾಗಿ ಸೌದಿ ಅರೇಬಿಯಾದಲ್ಲಿ ಮೊದಲ ದೀಪಾವಳಿ ಆಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಮಾರು ಒಂದು ವರ್ಷದ ಹಳೆಯ ಯುಎಇಯ ರಾಷ್ಟ್ರೀಯ ದಿನದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.