Fact Check: ಉ. ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧುರಂಧರ್ 2 ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆಯೇ?

ಯೋಗಿ ಆದಿತ್ಯನಾಥ್ ಒಂದು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ಅವರು "ಧುರಂಧರ್ 2" ವೀಕ್ಷಿಸಲು ಬಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
Fact Check: ಉ. ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧುರಂಧರ್ 2 ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆಯೇ?
Published on
2 min read

ಮಾರ್ಚ್ 19 ರಂದು ಬಿಡುಗಡೆಯಾದ ಧುರಂಧರ್: ದಿ ರಿವೆಂಜ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಏತನ್ಮಧ್ಯೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅವರು ಯಾವುದೊ ಒಂದು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ಅವರು "ಧುರಂಧರ್ 2" ವೀಕ್ಷಿಸಲು ಬಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಯೋಗಿ ಜೀ ಧುರಂಧರ್ ದಿ ರಿವೆಂಜ್ ವಿಶೇಷ ಕಾರ್ಯಕ್ರಮ ವೀಕ್ಷಿಸಲು ಬಂದರು. ಇವರು ಭಾರತದ ನಿಜವಾದ ದಂತಕತೆಗಳು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ, ವೈರಲ್ ಆಗಿರುವ ವೀಡಿಯೊ ಇತ್ತೀಚಿನದಲ್ಲ, ಇದು ಮೂರು ವರ್ಷಗಳಷ್ಟು ಹಳೆಯದು. ಆ ಸಮಯದಲ್ಲಿ ಸಿಎಂ ಯೋಗಿ ಮುಂಬೈಗೆ ಭೇಟಿ ನೀಡಿದ್ದರು ಮತ್ತು ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಇತರರನ್ನು ಭೇಟಿಯಾದರು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಈ ಸಂದರ್ಭ ದೇವೇಂದ್ರ ಫಡ್ನವಿಸ್ (ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿ) ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಜನವರಿ 7, 2023 ರಂದು ಹಂಚಿಕೊಳ್ಳಲಾಗಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ವೀಡಿಯೊ ಸಿಎಂ ಯೋಗಿ ಅವರ ಮುಂಬೈ ಭೇಟಿಯದ್ದಾಗಿದೆ. ವೈರಲ್ ವೀಡಿಯೊದಲ್ಲಿರುವ ಅದೇ ಜನರನ್ನು ವೀಡಿಯೊದಲ್ಲಿಯೂ ಕಾಣಬಹುದು.

ಈ ಮಾಹಿತಿಯ ಆಧಾರದ ಮೇಲೆ, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಸುದ್ದಿ ಸಂಸ್ಥೆ ANI ಯ ಅಧಿಕೃತ X ಖಾತೆಯಲ್ಲಿ ಈ ಹೇಳಿಕೆಗೆ ಸಂಬಂಧಿಸಿದ ಪೋಸ್ಟ್ ನಮಗೆ ಕಂಡುಬಂದಿದೆ. ಈ ಪೋಸ್ಟ್ ಅನ್ನು ಜನವರಿ 4, 2023 ರಂದು ಹಂಚಿಕೊಳ್ಳಲಾಗಿದೆ. "ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾದರು. ಸಿಎಂ ಶಿಂಧೆ, ಉಪಮುಖ್ಯಮಂತ್ರಿ ಫಡ್ನವೀಸ್, ಯುಪಿ ಮಾಜಿ ರಾಜ್ಯಪಾಲ ರಾಮ್ ನಾಯಕ್ ಮತ್ತು ಗೋರಖ್‌ಪುರ ಸಂಸದ ರವಿ ಕಿಶನ್ ಹಾಜರಿದ್ದರು." ಎಂದು ಕ್ಯಾಪ್ಶನ್ ನೀಡಲಾಗಿದೆ.

ಎಎನ್​ಐ ಹಂಚಿಕೊಂಡ ಪೋಸ್ಟ್ ಮತ್ತು ವೈರಲ್ ವೀಡಿಯೊ ನಡುವಿನ ಹೋಲಿಕೆಗಳನ್ನು ಕೆಳಗೆ ಕಾಣಬಹುದು.

Zee Uttar Pradesh UttaraKhand ಕೂಡ ಜನವರಿ 4, 2023 ರಂದು ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ವೀಡಿಯೊ ವರದಿ ಪ್ರಕಟಿಸಿದ್ದು, ಇದರಲ್ಲಿ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಕಾಣಬಹುದು. ಸಿಎಂ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರ ರಾಜಭವನದಲ್ಲಿ ರಾತ್ರಿ ಕಳೆದರು ಎಂಬ ಮಾಹಿತಿ ಇದರಲ್ಲಿದೆ.

ಜನವರಿ 4, 2023 ರಂದು ದೈನಿಕ್ ಜಾಗರಣ್ ಅವರ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯ್ಕ್ ಮತ್ತು ಗೋರಖ್‌ಪುರ ಸಂಸದ ರವಿಕಿಶನ್ ಸಹ ರೋಡ್ ಶೋ ನಡೆಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಸಿಎಂ ಯೋಗಿ "ಧುರಂಧರ್ 2" ಚಿತ್ರ ನೋಡಲು ಹೋಗಿದ್ದರು ಎಂದು ಹೇಳುವ ವೈರಲ್ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು 2023 ರಲ್ಲಿ ಸಿಎಂ ಯೋಗಿ ಮುಂಬೈಗೆ ಭೇಟಿ ನೀಡಿ ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಅಲ್ಲಿ ಇತರರನ್ನು ಭೇಟಿಯಾದ ಸಂದರ್ಭದ್ದಾಗಿದೆ.

Related Stories

No stories found.
logo
South Check
southcheck.in