ಇಬ್ಬರು ಪುರುಷರು ಲಿಫ್ಟ್‌ನಲ್ಲಿ ಇಬ್ಬರು ಹುಡುಗಿಯರನ್ನು ಅಪಹರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 1.26 ನಿಮಿಷದ ಸಿಸಿಟಿವಿ ದೃಶ್ಯಾವಳಿಯಿ ಇದಾಗಿದ್ದು, ಲಿಫ್ಟ್‌ನ ಒಳಗಡೆ ಇಬ್ಬರು ಹುಡುಗಿಯರು ನಿಂತಿರುವುದು ಕಾಣಬಹುದು. ಲಿಫ್ಟ್‌ನ ಬಾಗಿಲು ತೆರೆದಾಗ ಇಬ್ಬರು ಪುರುಷರು ಒಳಗೆ ಪ್ರವೇಶಿಸಿ ತಮ್ಮ ಕೈಯಿಂದ ಬಲವಂತವಾಗಿ ಹುಡುಗಿಯರ ಬಾಯಿಯನ್ನು ಮುಚ್ಚುತ್ತಾರೆ. ಮಾದಕ ದ್ರವ್ಯದೊಂದಿಗೆ ಪ್ರಜ್ಞಾಹೀನಗೊಳಿಸಲು ಪ್ರಯತ್ನಿಸುತ್ತಾರೆ. ಇವರಿಂದ ರಕ್ಷಿಸಲು ಹುಡುಗಿಯರು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿದೆ. ಕ್ಲಿಪ್‌ನ ಕೊನೆಯಲ್ಲಿ, ಪುರುಷರು ಹುಡುಗಿಯರನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ ಮತ್ತು ಇದು ಹಿಂದೂ ಹುಡುಗಿಯರನ್ನು ಜಿಹಾದಿಗಳು ಅಪಹರಿಸಿದ ಪ್ರಕರಣ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.
ಯೋಗಿ ಆದಿತ್ಯನಾಥ್ ಅಭಿಮಾನಿ ಎಂಬ ಎಕ್ಸ್ ಖಾತೆಯಿಂದ ಸೆಪ್ಟೆಂಬರ್ 12, 2024 ರಂದು ಈ ವೀಡಿಯೊ ಅಪ್ಲೋಡ್ ಆಗಿದ್ದು, ‘ಲಿಫ್ಟ್‌ನಿಂದ ಜಿಹಾದಿಗಳ ಅಪಹರಣ. ಲಿಫ್ಟ್‌ನಲ್ಲಿ ಜಾಗರೂಕರಾಗಿರಿ. ಕರ್ನಾಟಕ, ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದೂ ಹುಡುಗಿಯರನ್ನು ಕ್ಲೋರೋಫಾರ್ಮ್‌ನಲ್ಲಿ ಎಳೆದುಕೊಂಡು, ಲಿಫ್ಟ್‌ನಲ್ಲಿ ಪ್ರಜ್ಞೆ ತಪ್ಪಿಸಿ, ಹುಡುಗಿಯರಿಬ್ಬರನ್ನೂ ನೇರವಾಗಿ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ಕಾರಿನಲ್ಲಿ ಹಾಕುವ ಮೂಲಕ ಹೇಗೆ ಲಿಫ್ಟ್‌ನಿಂದ ಅಪಹರಿಸುತ್ತಿದ್ದಾರೆ ಎಂಬುದನ್ನು ನೋಡಿ, ಈರೀತಿ ಅಪಹರಣಕ್ಕೊಳಗಾದ ಹುಡುಗಿಯರು ಮತ್ತು ಮಹಿಳೆಯರು ಕಂಡುಹಿಡಿಯಲಾಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದೆವು. ವೀಡಿಯೊದ ಮಧ್ಯೆ @seetrendinginformation ಎಂಬ ಇನ್ಸ್ಟಾಗ್ರಾಮ್ ಐಡಿ ಕಾಣಿಸುತ್ತಿದೆ.
ನಮಗೆ ಇನ್ಸ್ಟಾಗ್ರಾಮ್ನಲ್ಲಿ ಈ ಪ್ರೊಫೈಲ್ ಸಿಕ್ಕಿದ್ದು, ಡಿಸೆಂಬರ್ 23, 2023 ರಂದು ಸದ್ಯ ವೈರಲ್ ಆಗುತ್ತಿರುವ ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ: “ಎಚ್ಚರಿಕೆ, ಈ ದುರಂತವು ಯಾವುದೇ ನಗರದಲ್ಲಿ ಸಂಭವಿಸಬಹುದು’’ ಎಂದು ಬರೆಯಲಾಗಿದೆ. ಆದರೆ, ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಕುರಿತು ಇದರಲ್ಲಿ ಯಾವುದೇ ಉಲ್ಲೇಖವಿಲ್ಲ.
ಇದೇ ವೀಡಿಯೊದ ಕಮೆಂಟ್ ಸೆಕ್ಷನ್ ನೋಡಿದಾಗ ಆರ್ತಿ ಸಿಂಗ್ ಎಂಬವರು ಈ ಘಟನೆಯು ಈಜಿಪ್ಟ್‌ನಂದು ಎಂದು ಕಾಮೆಂಟ್ ಮಾಡಿರುವುದನ್ನು ನಾವು ಗಮನಿಸಿದೆವು.
ಈ ಮಾಹಿತಿಯ ಆಧಾರದ ಮೇರೆಗೆ ನಾವು ಗೂಗಲ್ನಲ್ಲಿ ‘girls kidnap elevator egypt’ ಎಂದು ಇಂಗ್ಲಿಷ್ ಮತ್ತು ಅರೇಬಿಕ್ ಎರಡರಲ್ಲೂ ಕೀವರ್ಡ್ ಸರ್ಚ್ ಮಾಡಿದ್ದೇವೆ. ಆಗ ecwronline ವೆಬ್ಸೈಟ್ನಲ್ಲಿನ ವರದಿ ನಮಗೆ ಸಿಕ್ಕಿತು. ವರದಿಯ ಶೀರ್ಷಿಕೆ ಹೀಗೆ ಹೇಳಿದೆ: "ಈಜಿಪ್ಟಿನ ಪ್ರಾಸಿಕ್ಯೂಷನ್ ಇಬ್ಬರು ಹುಡುಗಿಯರ ಅಪಹರಣದಲ್ಲಿ ಭಾಗಿಯಾಗಿರುವ ಗ್ಯಾಂಗ್ ಅನ್ನು ಮಿಸ್ಡಿಮಿನರ್ ಕೋರ್ಟ್‌ಗೆ ಉಲ್ಲೇಖಿಸುತ್ತದೆ". ಈ ಸುದ್ದಿಯು ಜನವರಿ 28, 2024 ರಂದು ಪ್ರಕಟಿಸಲಾಗಿದೆ. ಈ ಘಟನೆಯು ಡಿಸೆಂಬರ್ 23, 2023 ರಂದು ಕೈರೋದಲ್ಲಿ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಕೌಟುಂಬಿಕ ಕಲಹಗಳಿಂದ ಇಬ್ಬರು ಹುಡುಗಿಯರ ತಂದೆ ಅವರನ್ನು ಅಪಹರಿಸಲು ಮುಂದಾದರು. ಸೆಕ್ಯುರಿಟಿ ಮತ್ತು ದಾರಿಹೋಕರ ಸಹಾಯದಿಂದ, ಅಪಹರಣದಲ್ಲಿ ಓರ್ವ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಯಿತು. ಅಪರಾಧವು ದಂಡ ಸಂಹಿತೆಯ ಆರ್ಟಿಕಲ್ 290 ರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಲ್ಲಿದೆ.
ಹಾಗೆಯೆ ಡಿಸೆಂಬರ್ 21, 2023 ರಂದು ಅಲ್ ಅರೇಬಿಯಾ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೊ ಪೋಸ್ಟ್ ಮಾಡಿರುವುದು ನಮಗೆ ಸಿಕ್ಕಿದೆ. ಇದರಲ್ಲಿನ ವರದಿಯ ಪ್ರಕಾರ, ಈಜಿಪ್ಟ್‌ನಲ್ಲಿ ವಿಷಕಾರಿ ಪದಾರ್ಥಗಳೊಂದಿಗೆ ಹುಡುಗಿಯರನ್ನು ಅಪಹರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರ ತಂದೆಯೇ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿದೆ ಎಂಬ ಮಾಹಿತಿ ಈ ವೀಡಿಯೊದಲ್ಲಿದೆ.
ಈಜಿಪ್ಟಿನ ಆಂತರಿಕ ಸಚಿವಾಲಯ ಕೂಡ ಈ ವಿಷಯಕ್ಕೆ ಸಂಬಂಧಿಸಿದ ಡಿಸೆಂಬರ್ 20, 2023 ರಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕೈರೋದ ನಸ್ರ್ ಸಿಟಿಯಲ್ಲಿ ನೆಲೆಸಿರುವ ಬಾಲಕಿಯರ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಮಾಜಿ ಪತಿ ತನ್ನ ಒಪ್ಪಿಗೆಯಿಲ್ಲದೆ ಒಬ್ಬ ಮಗಳನ್ನು ಕರೆದೊಯ್ದಿದ್ದಾನೆ. 2022 ರಲ್ಲಿ ಈ ದಂಪತಿಗಳು ಬೇರ್ಪಟ್ಟಿದ್ದರು ಎಂದು ಟ್ವೀಟ್ನಲ್ಲಿದೆ.
ಹೀಗಾಗಿ ಕರ್ನಾಟಕದ ಬೆಂಗಳೂರಿನಲ್ಲಿ ಹಿಂದೂ ಹುಡುಗಿಯರನ್ನು ಜಿಹಾದಿಗಳು ಅಪಹರಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ವಾಸ್ತವವಾಗಿ ಇದು ಈಜಿಪ್ಟ್‌ನ ಕೈರೋದಲ್ಲಿ ನಡೆದ ಘಟನೆ ಆಗಿದೆ. ತಂದೆ ತನ್ನ ಹೆಣ್ಣು ಮಕ್ಕಳನ್ನು ಇಬ್ಬರ ಸಹಾಯದಿಂದ ಅಪಹರಿಸುತ್ತಿರುವ ದೃಶ್ಯ ಇದಾಗಿದೆ.