ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಕುರ್ತಾ-ಪೈಜಾಮ ಮತ್ತು ಕ್ಯಾಪ್ ಧರಿಸಿದ ಕೆಲವರು ಕಾಣಿಕೆ ಪೆಟ್ಟಿಗೆಯಿಂದ ಹಣವನ್ನು ತೆಗೆದು ಅದನ್ನು ಬ್ಯಾಗ್‌ನಲ್ಲಿ ಹಾಕುವುದನ್ನು ಕಾಣಬಹುದು. ನಂತರ ಚೀಲಗಳಲ್ಲಿ ಹಣವನ್ನು ತುಂಬಿಸಿ ತೆಗೆದುಕೊಂಡು ಹೋಗುತ್ತಾರೆ. ಬಳಿಕ ಕೆಲವು ಮಕ್ಕಳು ಈ ನೋಟುಗಳನ್ನು ಎಣಿಕೆ ಮಾಡುವುದನ್ನು ಸಹ ಕಾಣಬಹುದು. ಇದು ಶಿರಡಿ ಸಾಯಿ ದೇವಸ್ಥಾನದ ಹಣ ಎಂದು ಅನೇಕರು ಪೋಸ್ಟ್ ಹಂಚಿಕೊಂಡಿದ್ದಾರೆ.
ಎಕ್ಸ್ ಬಳಿಕೆದಾರರೊಬ್ಬರು ಈ ವೀಡಿಯೊವನ್ನು 6 ಅಕ್ಟೋಬರ್ 2024 ರಂದು ಹಂಚಿಕೊಂಡು ‘‘ಶಿರಡಿ ಸಾಯಿಯವರ ಹುಂಡಿಗೆ ಹಿಂದೂಗಳ ಹಾಕಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೀವೇ ನೋಡಿ!. ಈ ಮುಸ್ಲಿಮರು ಇದನ್ನು ಯಾವುದಕ್ಕೆಲ್ಲ ಉಪಯೋಗಿಸುತ್ತಾರೋ... ಕಣ್ಣಿದ್ದರೂ ಕುರುಡರಾದ ದೇಶದ ಪ್ರತಿಯೊಬ್ಬ ಹಿಂದೂಗಳಿಗೂ ಇದು ತಲುಪುವಷ್ಟು ವೈರಲ್ ಮಾಡಿ,’’ ಎಂದು ಬರೆದುಕೊಂಡಿದ್ದಾರೆ.
ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ವಿಡಿಯೋ ಬಾಂಗ್ಲಾದೇಶದ್ದು ಎಂದು ಸೌತ್ ಚೆಕ್ ಪತ್ತೆ ಮಾಡಿದೆ. ವೀಡಿಯೊದಲ್ಲಿ ಕಂಡುಬರುವ ಹಣಗಳು ಭಾರತೀಯವಲ್ಲ ಎಂದು ನಾವು ಗಮನಿಸಿದ್ದೇವೆ. ನೋಟುಗಳು ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಬಾಂಗ್ಲಾ ಸಂಖ್ಯೆ ಇರುವುದು ನಾವು ಕಂಡಿದ್ದೇವೆ. ಈ ಸೂಚನೆಗಳನ್ನು ತೆಗೆದುಕೊಂಡು, ನಾವು ಕೀವರ್ಡ್‌ಗಳೊಂದಿಗೆ ವೀಡಿಯೊದ ಕೀಫ್ರೇಮ್‌ನ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ.
ಆಗ ಬಾಂಗ್ಲಾದೇಶ ಮೂಲದ ಸುದ್ದಿವಾಹಿನಿಗಳಾದ Jago News24 ಮತ್ತು Jamuna TV ಪ್ರಕಟಿಸಿದ ಅದೇ ಫ್ರೇಮ್‌ಗಳನ್ನು ತೋರಿಸುವ ವೀಡಿಯೊ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆಗಳ ಪ್ರಕಾರ, ವೀಡಿಯೊವು ಬಾಂಗ್ಲಾದೇಶದ ಕಿಶೋರೆಗಂಜ್‌ನಲ್ಲಿರುವ ಪಾಗ್ಲಾ ಮಸೀದಿಯಿಂದ ಬಂದಿದೆ, ಅಲ್ಲಿ ಮಸೀದಿಯ ದೇಣಿಗೆ ಪೆಟ್ಟಿಗೆಯಿಂದ ಹಣವನ್ನು ಎಣಿಕೆ ಮಾಡಲಾಗುತ್ತಿದೆ.
ಹಾಗೆಯೆ 6 ಮೇ 2023 ರಂದು Newsbangla24.com ಹೆಸರಿನ ವೆಬ್‌ಸೈಟ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟ ಆಗಿರುವುದು ನಮಗೆ ಸಿಕ್ಕಿದೆ. ಇಲ್ಲಿನ ಸುದ್ದಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕಿಶೋರಗಂಜ್‌ನ ಐತಿಹಾಸಿಕ ಪಾಗ್ಲಾ ಮಸೀದಿಯ ಕಾಣಿಕೆ ಡಬ್ಬಿಗಳಲ್ಲಿ 5 ಕೋಟಿ 59 ಲಕ್ಷ 7 ಸಾವಿರದ 689 ಟಾಕಾ ಪತ್ತೆಯಾಗಿದೆ. ದಾಖಲೆ ಪ್ರಮಾಣದ ಹಣದ ಜೊತೆಗೆ ವಿದೇಶಿ ಕರೆನ್ಸಿ, ಚಿನ್ನ, ಬೆಳ್ಳಿ ಕೂಡ ಸಿಕ್ಕಿದೆ ಎಂದು ವರದಿಯಲ್ಲಿದೆ.
ದಿ ಬ್ಯುಸಿನ್ಸ್ ಸ್ಟ್ಯಾಂಡರ್ಡ್‌ನ ವರದಿಯನ್ನು ಸಹ ಕಂಡಿದ್ದೇವೆ. ಪಾಗ್ಲಾ ಮಸೀದಿ ಬಾಂಗ್ಲಾದೇಶದ ಅತ್ಯಂತ ಲಾಭದಾಯಕ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ. ಮಸೀದಿಯು ಪ್ರತಿ ಮೂರು ತಿಂಗಳಿಗೊಮ್ಮೆ ತನ್ನ ದೇಣಿಗೆ ಪೆಟ್ಟಿಗೆಗಳನ್ನು ತೆರೆಯುತ್ತದೆ ಮತ್ತು ಹಣವನ್ನು ಪಗ್ಲಾ ಮಸೀದಿ, ಮದ್ರಸಾಗಳು, ಅನಾಥಾಶ್ರಮಗಳು ಮತ್ತು ಸಮಾಜ ಕಲ್ಯಾಣ ಉಪಕ್ರಮಗಳು ಸೇರಿದಂತೆ ವಿವಿಧ ಮಸೀದಿಗಳ ನಿರ್ವಹಣೆಗೆ ಖರ್ಚು ಮಾಡಲಾಗುತ್ತದೆ ಎಂದು ವರದಿಯಲ್ಲಿದೆ.
ಹೀಗಾಗಿ ಈ ವೀಡಿಯೊ ಬಾಂಗ್ಲಾದೇಶದ ಮಸೀದಿಯದ್ದಾಗಿದೆ. ಈ ವೀಡಿಯೊಕ್ಕೂ ಶಿರಡಿ ಸಾಯಿ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.