ದೀಪಾವಳಿಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಟಾಕಿ ಸಿಡಿಯುವ ವೀಡಿಯೊಗಳು ಎಲ್ಲೆಡೆ ಹರಿದಾಡುತ್ತಿವೆ. ಬಹುಸಂಖ್ಯಾತ ಕ್ರಿಶ್ಚಿಯನ್ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ ಹಿಂದೂ ಹಬ್ಬವನ್ನು ಹೇಗೆ ಆಚರಿಸಲಾಯಿತು ಎಂಬುದನ್ನು ತೋರಿಸುವ ಒಂದು ವೀಡಿಯೊ ವೈರಲ್ ಆಗುತ್ತಿದೆ. ಸಾವಿರಾರು ಜನರು ತಮ್ಮ ಆಸನಗಳಿಂದಲೇ ಪಟಾಕಿ ಸಿಡಿಸುವುದನ್ನು ವೀಡಿಯೊ ತೋರಿಸುತ್ತದೆ. ನಾಗಾಲ್ಯಾಂಡ್‌ನಲ್ಲಿ ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಿದ್ದಾರೆ ಎಂದು ಅನೇಕರು ಈ ವೀಡಿಯೊವನ್ನು ಶೇರ್ ಮಾಡುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನಾಗಾಲ್ಯಾಂಡ್ ನಲ್ಲಿ ಹಿಂದೂಗಳು ದೀಪಾವಳಿ ಆಚರಿಸಿದ್ದು ಅಧ್ಭುತ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ವೀಡಿಯೊ ದಕ್ಷಿಣ ಅಮೆರಿಕಾದಲ್ಲಿ ಫುಟ್ಬಾಲ್ ಪಂದ್ಯದ ಸಂದರ್ಭದ ನಡೆದ ಫೈರ್ ಶೋ ಆಗಿದೆ.
ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದ ಮೂಲಕ, 2024 ರ ಅಕ್ಟೋಬರ್ 30 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. "ರಿವರ್ ಪ್ಲೇಟ್ ವಿರುದ್ಧ ಅಟ್ಲೆಟಿಕೊ ಮಿನೆರೊ, ಇದುವರೆಗಿನ ಶ್ರೇಷ್ಠ ಫುಟ್‌ಬಾಲ್ ಕ್ರೀಡಾಂಗಣದ ಪ್ರವೇಶ" ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ. ಈ ಮೂಲಕ ಈ ವೀಡಿಯೊ ಭಾರತದದ್ದಲ್ಲ ಎಂಬ ಸುಳಿವು ಸಿಕ್ಕಿತು.
ರಿವರ್ ಪ್ಲೇಟ್ ಅನ್ನು ಕ್ಲಬ್ ಅಟ್ಲೆಟಿಕೊ ರಿವರ್ ಪ್ಲೇಟ್ ಎಂದೂ ಕರೆಯುತ್ತಾರೆ, ಇದು ಅರ್ಜೆಂಟೀನಾದ ವೃತ್ತಿಪರ ಕ್ರೀಡಾ ಕ್ಲಬ್ ಆಗಿದೆ. ಇದು ಬ್ಯೂನಸ್ ಐರಿಸ್‌ನ ಬೆಲ್‌ಗ್ರಾನೊದಲ್ಲಿದೆ. ಅಂತೆಯೇ, ಕ್ಲಬ್ ಅಟ್ಲೆಟಿಕೊ ಮಿನೇರೊ ಎಂದೂ ಕರೆಯಲ್ಪಡುವ ಅಟ್ಲೆಟಿಕೊ ಮಿನೆರೊ, ಬ್ರೆಜಿಲಿಯನ್ ರಾಜ್ಯದ ಮಿನಾಸ್ ಗೆರೈಸ್‌ನ ರಾಜಧಾನಿಯಾದ ಬೆಲೊ ಹೊರಿಜಾಂಟೆಯ ವೃತ್ತಿಪರ ಫುಟ್‌ಬಾಲ್ ಕ್ಲಬ್ ಆಗಿದೆ.
ಅಟ್ಲೆಟಿಕೊ ಮಿನೆರೊ ವಿರುದ್ಧದ ಕೋಪಾ ಲಿಬರ್ಟಡೋರ್ಸ್ ಅಂತಿಮ ಫುಟ್‌ಬಾಲ್ ಪಂದ್ಯದ ಮೊದಲು ರಿವರ್ ಪ್ಲೇಟ್ ಅಭಿಮಾನಿಗಳಿಂದ ಪಟಾಕಿ ಪ್ರದರ್ಶನ ಎಂದು ಈ ವೀಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ.
ಕೋಪಾ ಲಿಬರ್ಟಡೋರ್ಸ್ ವಾರ್ಷಿಕ ಕಾಂಟಿನೆಂಟಲ್ ಕ್ಲಬ್ ಫುಟ್‌ಬಾಲ್ ಸ್ಪರ್ಧೆಯಾಗಿದೆ. ಇದು ದಕ್ಷಿಣ ಅಮೆರಿಕಾದ ಕ್ಲಬ್ ಫುಟ್‌ಬಾಲ್‌ನಲ್ಲಿ ಅತ್ಯುನ್ನತ ಮಟ್ಟದ ಸ್ಪರ್ಧೆಯಾಗಿದೆ. ಡೈಲಿ ಮೇಲ್ ಸ್ಪೋರ್ಟ್‌ನ ಫೇಸ್‌ಬುಕ್ ಪುಟವು ಅಕ್ಟೋಬರ್ 30, 2024 ರಂದು ವೀಡಿಯೊವನ್ನು ಹಂಚಿಕೊಂಡಿದೆ. “ಸೀನ್ಸ್ ಅಟ್ ರಿವರ್ ಪ್ಲೇಟ್ ವರ್ಸಸ್ ಅಟ್ಲೆಟಿಕೊ ಮಿನೆರಿಯೊ’’ ಎಂಬ ಶೀರ್ಷಿಕೆ ನೀಡಿದೆ.
ಅಕ್ಟೋಬರ್ 31, 2024 ರಂದು ಪ್ರಕಟವಾದ ಬೀನ್ ಸ್ಪೋರ್ಟ್ಸ್ ವರದಿಯಲ್ಲಿ, ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿರುವ ರಿವರ್ ಪ್ಲೇಟ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಪಟಾಕಿ ಪ್ರದರ್ಶನವು ಕೋಪಾ ಲಿಬರ್ಟಡೋರ್ಸ್ ಫೈನಲ್‌ನಲ್ಲಿ ಅಟ್ಲೆಟಿಕೊ ಮಿನೇರೊ ವಿರುದ್ಧದ ಪಂದ್ಯವನ್ನು ಸ್ಥಗಿತಗೊಳಿಸಿತು ಎಂದು ಬರೆಯಲಾಗಿದೆ.
ಹೀಗಾಗಿ, ವೈರಲ್ ವೀಡಿಯೊ ದಕ್ಷಿಣ ಅಮೆರಿಕಾದಿಂದ ಬಂದಿದೆ. ಇದು ನಾಗಾಲ್ಯಾಂಡ್‌ನಲ್ಲಿ ದೀಪಾವಳಿ ಪಟಾಕಿಯ ವೀಡಿಯೊ ಅಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬಹುದು.