Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರ ನಡೆಯುತ್ತಿದೆ ಎನ್ನುವ ವೀಡಿಯೊ ಸುಳ್ಳು: ಇಲ್ಲಿದೆ ನಿಜಾಂಶ
ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳುವುದರೊಂದಿಗೆ ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳನ್ನು ಮತ್ತೆ ಶುರುವಾಗುವ ಮೂಲಕ ಬಾಂಗ್ಲಾದೇಶದಲ್ಲಿ ಜೀವನವು ಸಹಜ ಸ್ಥಿತಿಗೆ ಮರಳುತ್ತಿರುವಂತೆ ತೋರುತ್ತಿದೆ. ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆಯೊಂದರಲ್ಲಿ ಜನರು ನಮಾಜ್ ಮಾಡುವುದನ್ನು ನಾವು ವೀಡಿಯೊದಲ್ಲಿ ನೋಡಬಹುದು.
ರಜತ್ ಸೊಮಯ್ಯ ಎಂಬ ಎಕ್ಸ್ ಬಳಕೆದಾರರು ಆಗಸ್ಟ್ 31, 2024 ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಜೊತೆಗೆ ‘ಬಾಂಗ್ಲಾದೇಶದಲ್ಲಿ ಬಂಧಿತ ಹಿಂದೂ ಪುರುಷರ ಬಲವಂತವಾಗಿ ಇಸ್ಲಾಂಗೆ ಮತಾಂತರ. ಜಾತ್ಯತೀತರು ಎಂದು ಹೇಳಿಕೊಳ್ಳುವ ಹಿಂದೂಗಳು, ಹೇಡಿ ಹಿಂದೂಗಳು, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಹಿಂದೂಗಳು. ನಾಮರ್ದ ಜಾತ್ಯಾತೀತ ಹಿಂದೂಗಳೇ ಈ ವಿಡಿಯೋ ನೋಡಿ.’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಲಕ್ಷ್ಮೀ ತ್ರಿಪಾಠಿ ಎಂಬ ಎಕ್ಸ್ ಖಾತೆಯಲ್ಲಿ ಇದೇ ವೀಡಿಯೊ ಹಂಚಿಕೊಳ್ಳಲಾಗಿದ್ದು ‘ಜಿಹಾದಿಗಳು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಶೀರ್ಷಿಕೆ ನೀಡಿದ್ದಾರೆ.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವೀಡಿಯೊದಲ್ಲಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿಲ್ಲ. ಇದು ಜುಲೈ 16, 2024 ರಂದು ಮೀಸಲಾತಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ವಿದ್ಯಾರ್ಥಿಗಳು ಜೊಹರ್ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಜುಲೈ 16, 2024 ರಂದು ಬಾಂಗ್ಲಾದೇಶದ ಸುದ್ದಿ ಮಾಧ್ಯಮ ಸೊಮೊಯ್ ಟಿವಿ ಬುಲೆಟಿನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೊ ಅಪ್ಲೋಡ್ ಆಗಿರುವುದು ನಮಗೆ ಕಂಡುಬಂತು. ‘ಬಾಂಗ್ಲಾದೇಶದ ಢಾಕಾದ ಬಸುಂಧರಾದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಜೋಹರ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ’ ಎಂದು ವೀಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ.
ಈ ಮಾಹಿತಿಯನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಇದೇ ರೀತಿಯ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಜೋಹರ್ ಪ್ರಾರ್ಥನೆಗಳನ್ನು ಮಾಡುತ್ತಿರುವುದು ಎಂದು ಎಲ್ಲ ವೀಡಿಯೊದಲ್ಲಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗಸ್ಟ್ 5 ರಂದು ಬಾಂಗ್ಲಾದೇಶ ತೊರೆಯುವ ಮುನ್ನವೇ ಈ ವಿಡಿಯೋ ಆನ್‌ಲೈನ್‌ನಲ್ಲಿದೆ.
ಜುಲೈ 16, 2024 ರಂದು ಸೊಮೊಯ್ ನ್ಯೂಸ್‌ನಲ್ಲಿ ಪ್ರಕಟವಾದ ವರದಿ ಕೂಡ ನಮಗೆ ಸಿಕ್ಕಿದೆ. ‘ಅನೇಕ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಢಾಕಾದ ಬಸುಂಧರಾ ಗೇಟ್‌ನ ಮುಂದೆ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ನಡುವೆ, ವಿದ್ಯಾರ್ಥಿಗಳು ಜೋಹರ್ ನಮಾಜ್‌ನ ಸಮಯ ಬಂದಾಗ ಪ್ರಾರ್ಥನೆ ಸಲ್ಲಿಸಿದರು. ಉಳಿದ ವಿದ್ಯಾರ್ಥಿಗಳು ಘೋಷಣೆ ಮತ್ತು ಪ್ರತಿಭಟನೆಯನ್ನು ಮುಂದುವರೆಸಿದರು ಎಂದು ಬರೆಯಲಾಗಿದೆ. ಹಾಗೆಯೆ ವೈರಲ್ ವೀಡಿಯೊದ ದೃಶ್ಯಗಳಿಗೆ ಹೋಲುವ ಪ್ರತಿಭಟನೆಯ ಫೋಟೋಗಳು ಕೂಡ ಈ ವರದಿಯಲ್ಲಿವೆ.
ಜುಲೈ 16, 2024 ರಂದು ಢಾಕಾ ಪ್ರೆಸ್ ಕೂಡ ಈ ಕುರಿತು ವರದಿ ಪ್ರಕಟಿಸಿದೆ. ‘ರಾಜಧಾನಿಯ ಬಾಶುಂಧರ ಗೇಟ್ ಎದುರು ವಿವಿಧ ಖಾಸಗಿ ವಿವಿಗಳ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಂಟೆಗಟ್ಟಲೆ ನಿಂತಿದ್ದ ಸಂದರ್ಭದಲ್ಲಿ ಝುಹರ್ ನಮಾಝಿನ ಸಮಯ ಬಂದಾಗ ವಿದ್ಯಾರ್ಥಿಗಳು ಸಾಲಾಗಿ ನಿಂತು ಪ್ರಾರ್ಥನೆ ಸಲ್ಲಿಸಿದರು. ಸಮೀಪದಲ್ಲಿ ನಿಂತಿದ್ದ ಇತರ ವಿದ್ಯಾರ್ಥಿಗಳು ತಮ್ಮ ಘೋಷಣೆ ಮತ್ತು ಆಂದೋಲನವನ್ನು ಮುಂದುವರೆಸಿದರು’ ಎಂದು ವರದಿಯಲ್ಲಿದೆ.
ಹೀಗಾಗಿ ಈ ವೈರಲ್ ವೀಡಿಯೊ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದನ್ನು ತೋರಿಸುತ್ತಿಲ್ಲ. ಇದು ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಜುಲೈ 16, 2024 ರಂದು ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವುದು ಎಂದು ನಾವು ಖಚಿತವಾಗಿ ಹೇಳುತ್ತೇವೆ.