ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಸ್ನೇಹಿತನಿಗೆ ಅಕ್ರಮವಾಗಿ ಹಣವನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಶೇರ್ ಮಾಡುತ್ತಿರುವವರು ಪೊಲೀಸ್ ಅಧಿಕಾರಿ ಮುಸ್ಲಿಂ ಎಂಬ ಹೇಳಿಕೆ ನೀಡುತ್ತಿದ್ದು, ಈ ಘಟನೆಗೆ ಧಾರ್ಮಿಕ ಕೋನವನ್ನು ಬಿಂಬಿಸಿದ್ದಾರೆ.
ಅರುಣ್ ಕುಮಾರ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಸೆ. 22 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘‘ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದ ಶಹನವಾಜ್ ಖಾನ್ ಕೋಟ್ಯಂತರ ರೂ. ಅಕ್ರಮ ಶಸ್ತ್ರಾಸ್ತ್ರ ಬಂದೂಕು, ಪಿಸ್ತೂಲು ಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದು, ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದರೂ ಮುಸಲ್ಮಾನ ಯಾವತ್ತೂ ದೇಶಪ್ರೇಮಿಯಾಗಲಾರ.’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಲ್ಲಿ ಬಂಧನ ಆಗಿರುವುದು ಡಿಎಸ್‌ಪಿ ಅಲ್ಲ, ಬದಲಾಗಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ. 15,000 ರೂಪಾಯಿ ಲಂಚದ ಬೇಡಿಕೆಗಾಗಿ ಶಹನವಾಜ್ ಖಾನ್ ಅವರನ್ನು ಬಂಧಿಸಲಾಯಿತು.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸಹಾಯದಿಂದ ಫೋಟೋವನ್ನು ಸರ್ಚ್ ಮಾಡಿದೆವು. ಆಗ ಎನ್‌ಡಿಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಪ್ಟೆಂಬರ್ 10, 2024 ರಂದು ಪ್ರಕಟವಾದ ವೀಡಿಯೊ ಕಂಡುಬಂತು. ಎನ್‌ಡಿಟಿವಿ ವರದಿಯಲ್ಲಿನ ದೃಶ್ಯಗಳು ವೈರಲ್ ಕ್ಲಿಪ್‌ನಲ್ಲಿರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ. ವರದಿಯ ಪ್ರಕಾರ, ದೃಶ್ಯದಲ್ಲಿರುವ ವ್ಯಕ್ತಿಯನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಅವರು ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ.
ಇದರಿಂದ ಸುಳಿವು ಪಡೆದು, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಅಮರ್ ಉಜಾಲಾ ಸೆ. 10, 2024 ರಂದು ಪ್ರಕಟಿಸಿದ ಸುದ್ದಿ ಕಂಡಿದೆ. ವರದಿಯ ಪ್ರಕಾರ, ಹೆಡ್ ಕಾನ್‌ಸ್ಟೆಬಲ್ ಶಹನವಾಜ್ ಕಾನ್ಪುರದ ಬಾಬುಪುರದಲ್ಲಿರುವ ಎಸಿಪಿ ಕಚೇರಿಯಲ್ಲಿ ಪೇಷ್ಕರ್ (ದಾಖಲೆ ಮಾಡುವ ವ್ಯಕ್ತಿ) ಆಗಿದ್ದರು. ಅಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲು ಹೆಡ್ ಕಾನ್‌ಸ್ಟೆಬಲ್‌ಗಳಾದ ಶಹನವಾಜ್ ಮತ್ತು ಯೋಗೇಶ್ ಕುಮಾರ್ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ 15 ಸಾವಿರ ರೂ. ಗೆ ಮಾತುಕತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರು.
ಸಂತ್ರಸ್ತೆ ಲಂಚ ನೀಡಲು ಪೊಲೀಸ್ ಠಾಣೆಗೆ ಬಂದಾಗ ವಿಜಿಲೆನ್ಸ್ ಇಲಾಖೆ ಶಹನವಾಜ್ ಅವರನ್ನು ಬಲೆಗೆ ಬೀಳಿಸಿದೆ. ಬಂಧನ ಮಾಡಿ ಕರೆದುಕೊಂಡು ಹೋಗುವುದು ವೈರಲ್ ವಿಡಿಯೋದಲ್ಲಿದೆ.
ಈಟಿವಿ ಭಾರತ್ ಕೂಡ ಈ ಬಗ್ಗೆ ವರದಿ ಮಾಡಿದೆ. ‘‘ಯುಪಿಯ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ವಿಜಿಲೆನ್ಸ್ ತಂಡವು ರೂ. 15,000 ಲಂಚ ಪಡೆಯುತ್ತಿದ್ದಾಗ ಹೆಡ್ ಕಾನ್‌ಸ್ಟೆಬಲ್ ಶಹನವಾಜ್ ಖಾನ್ ಅವರನ್ನು ಬಂಧಿಸಿದೆ. ಸಿಕ್ಕಿಬಿದ್ದ ನಂತರ ಓಡಿಹೋಗಲು ಯತ್ನಿಸಿದ ಅವರನ್ನು ತಡೆದು ಎಸಿಪಿ ಬಾಬುಪುರವಾ ಕಚೇರಿಯಿಂದ ಬರಿಗಾಲಿನಲ್ಲಿ ಎಳೆದೊಯ್ದಿದ್ದಾರೆ. ಜೂಹಿ ನಿವಾಸಿ ರಿಂಕು ಅವರು 15,000 ರೂಪಾಯಿ ಲಂಚ ನೀಡಲು ಒಪ್ಪಿಕೊಂಡರು. ಆದರೆ ಈ ವಿಷಯವನ್ನು ವಿಜಿಲೆನ್ಸ್ ಇಲಾಖೆಗೆ ವರದಿ ಮಾಡಿದ್ದಾರೆ. ತನಿಖೆ ವೇಳೆ ಶಹನವಾಜ್ ಶೀಘ್ರ ಕ್ರಮಕ್ಕಾಗಿ ರೂ. 20,000 ಬೇಡಿಕೆಯಿಟ್ಟರೂ ನಂತರ 15,000ಕ್ಕೆ ಒಪ್ಪಿದ್ದರು. ರಿಂಕು ನೀಡಿದ್ ದೂರನ್ನು ದೃಢಪಡಿಸಿದ ಪೊಲೀಸರು ಕುಟುಕು ಕಾರ್ಯಾಚರಣೆಯಲ್ಲಿ ಶಹನವಾಜ್ ಅವರನ್ನು ಹಿಡಿದಿದ್ದಾರೆ.’’ ಎಂದು ವರದಿಯಲ್ಲಿದೆ.
ಹೀಗಾಗಿ ಹೆಡ್ ಕಾನ್‌ಸ್ಟೆಬಲ್ ಶಹನವಾಜ್ ಖಾನ್ ಅವರನ್ನು ಅಕ್ರಮ ಶಸ್ತ್ರಾಸ್ತ್ರ ಪೂರೈಸಿದ್ದಕ್ಕಾಗಿ ಬಂಧಿಸಲಾಗಿದೆ ಎಂಬ ಆರೋಪ ಸುಳ್ಳು. ಲಂಚ ಸ್ವೀಕರಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.