Fact Check: ಜಮ್ಮು-ಕಾಶ್ಮೀರದ ದೋಡಾ ಘಟನೆಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದಾರೆಂದು ಹೇಳುವ ವೈರಲ್ ವೀಡಿಯೊ ನೇಪಾಳದ್ದು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Fact Check: ಜಮ್ಮು-ಕಾಶ್ಮೀರದ ದೋಡಾ ಘಟನೆಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದಾರೆಂದು ಹೇಳುವ ವೈರಲ್ ವೀಡಿಯೊ ನೇಪಾಳದ್ದು
Published on
2 min read

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಸೇನಾ ಟ್ರಕ್ ಆಳವಾದ ಕಂದರಕ್ಕೆ ಬಿದ್ದಿರುವುದನ್ನು ಕಾಣಬಹುದು. ಹಲವಾರು ಸೈನಿಕರು ಟ್ರಕ್‌ನಿಂದ ಹೊರಬರಲು ಪರಸ್ಪರ ಸಹಾಯ ಮಾಡುತ್ತಿರುವುದು ಕಂಡುಬರುತ್ತದೆ. ದೋಡಾ ಅಪಘಾತದಲ್ಲಿ 10 ಸೈನಿಕರು ಹುತಾತ್ಮರಾಗಿದ್ದಾರೆ ಮತ್ತು ಈ ವೀಡಿಯೊ ಆ ಘಟನೆಗೆ ಸಂಬಂಧಿಸಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಣಿವೆಗೆ ಉರುಳಿದ ಸೇನಾ ವಾಹನ 10 ಯೋಧರ ದಾರುಣ ಸಾವು. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಆಳವಾದ ಕಂದಕಕ್ಕೆ ಬಿದ್ದಿದ್ದು, 10 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ನೇಪಾಳದಲ್ಲಿ ನಡೆದ ಹಳೆಯ ಸೇನಾ ಟ್ರಕ್ ಅಪಘಾತದದ್ದಾಗಿದ್ದು, ಇದನ್ನು ಭಾರತದ ದೋಡಾ ಜಿಲ್ಲೆಯ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದೆವು. ಈ ಸಂದರ್ಭ, ಸೆಪ್ಟೆಂಬರ್ 16, 2025 ರಂದು ನೇಪಾಳ ಮೂಲದ ಫೇಸ್‌ಬುಕ್ ಪುಟ ಅರ್ಘಖಾಂಚಿ ಬುಲೆಟಿನ್​​ನಲ್ಲಿ ಪೋಸ್ಟ್ ಮಾಡಲಾದ ಅದೇ ಘಟನೆಗೆ ಸಂಬಂಧಿಸಿದ ಚಿತ್ರಗಳನ್ನು ನಾವು ಕಂಡುಕೊಂಡೆವು. ನೇಪಾಳಿ ಭಾಷೆಯಲ್ಲಿನ ಪೋಸ್ಟ್‌ನಲ್ಲಿ, ಮಕವಾನ್‌ಪುರ ಜಿಲ್ಲೆಯ ಚುರಿಯಾಮೈ ಪ್ರದೇಶದ ಬಳಿ ನೇಪಾಳಿ ಸೇನಾ ಟ್ರಕ್ ಅಪಘಾತಕ್ಕೀಡಾಗಿದ್ದು, 16 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪೋಸ್ಟ್ ಪ್ರಕಾರ, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಇದೇವೇಳೆ ನಾವು ನೇಪಾಳದ ಕೆಲ ಫೇಸ್‌ಬುಕ್ ಖಾತೆಗಳಲ್ಲಿ ಇದೇ ರೀತಿಯ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಸೆಪ್ಟೆಂಬರ್ 2025 ರ ದಿನಾಂಕದ ಈ ಪೋಸ್ಟ್, ಚುರಿಯಾಮೈ ಪ್ರದೇಶದಲ್ಲಿ ನಡೆದ ನೇಪಾಳಿ ಸೇನೆಯ ಟ್ರಕ್ ಅಪಘಾತಕ್ಕೆ ವೀಡಿಯೊವನ್ನು ಲಿಂಕ್ ಮಾಡುತ್ತದೆ.

ಇದರ ಆಧಾರದ ಮೇಲೆ, ನಾವು ಮತ್ತಷ್ಟು ತನಿಖೆ ನಡೆಸಿದಾಗ ಸೆಪ್ಟೆಂಬರ್ 2025 ರಲ್ಲಿ ಮಕ್ವಾನ್‌ಪುರ ಜಿಲ್ಲೆಯಲ್ಲಿ ನೇಪಾಳಿ ಸೇನಾ ಟ್ರಕ್ ಕಂದಕಕ್ಕೆ ಬಿದ್ದ ಬಗ್ಗೆ ಹಲವಾರು ನೇಪಾಳಿ ಸುದ್ದಿ ವೆಬ್‌ಸೈಟ್‌ಗಳಲ್ಲಿ ವರದಿಗಳನ್ನು ಕಂಡುಕೊಂಡೆವು. ವರದಿಗಳ ಪ್ರಕಾರ, ಅಪಘಾತದಲ್ಲಿ 16 ನೇಪಾಳಿ ಸೈನಿಕರು ಗಾಯಗೊಂಡಿದ್ದಾರೆ, ಆದರೆ ಯಾವುದೇ ಸಾವುನೋವುಗಳು ದೃಢಪಟ್ಟಿಲ್ಲ. ನೇಪಾಳದ ಮಕವಾನ್‌ಪುರ ಜಿಲ್ಲೆಯ ಚುರಿಯಾಮೈ ಬಳಿ ಪೂರ್ವ-ಪಶ್ಚಿಮ ಹೆದ್ದಾರಿಯಲ್ಲಿ ನೇಪಾಳ ಸೇನಾ ಟ್ರಕ್ ಅಪಘಾತಕ್ಕೀಡಾಗಿದ್ದು, 16 ಸೈನಿಕರು ಗಾಯಗೊಂಡಿದ್ದಾರೆ ಎಂದು ನೇಪಾಳನ್ಯೂಸ್.ಕಾಮ್ ವರದಿಯನ್ನು ಇಲ್ಲಿ ಓದಬಹುದು. ಈ ಕುರಿತು ದೈನಿಕ್ ಜಾಗರಣ್ ಕೂಡ ವರದಿ ಮಾಡಿದೆ.

ನಾವು ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಪರಿಶೀಲಿಸಿದ್ದೇವೆ. ಜನವರಿ 22 ರ ಟಿವಿ9 ಕನ್ನಡ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ್ದು, 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ. ವಾಹನವು ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಭದೇರ್ವಾ-ಚಂಬಾ ಅಂತಾರಾಜ್ಯ ರಸ್ತೆಯ ಖನ್ನಿ ಟಾಪ್‌ನಲ್ಲಿ ಈ ಅಪಘಾತ ಸಂಭವಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ ಇತ್ತೀಚಿನ ದೋಡಾ ಅಪಘಾತದ್ದಲ್ಲ, ಇದು ನೇಪಾಳದಲ್ಲಿ ಸಂಭವಿಸಿದ ಹಳೆಯ ಸೇನಾ ಟ್ರಕ್ ಅಪಘಾತಕ್ಕೆ ಸಂಬಂಧಿಸಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in