Fact Check: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆಯೇ?

ಬಾಂಗ್ಲಾದೇಶದ ಮದರಿಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ.
Fact Check: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆಯೇ?
Published on
2 min read

(Content Warning: The article contains disturbing media, which some readers may find distressing; discretion is advised. Due to its sensitive nature, to respect privacy and avoid further dissemination of potentially harmful content, we have chosen not to include the link to the post in the story.)

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಬಾಂಗ್ಲಾದೇಶದ ಮದರಿಪುರದಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇತಾಡುತ್ತಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಡಿಸೆಂಬರ್ 28, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದೆ. ಮದಾರಿಪುರ, ಬಾಂಗ್ಲಾದೇಶ, ಹಿಂದೂ ಗಂಡಸಿನ ದೇಹ ಮರದಲ್ಲಿ ನೇತಾಡುವ ರೀತಿಯಲ್ಲಿ ಸಿಕ್ಕಿದೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮದರಿಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಶವ ಹಿಂದೂ ವ್ಯಕ್ತಿಯದ್ದಲ್ಲ, ಈತ ಮುಸ್ಲಿಂ ವ್ಯಕ್ತಿ ಎಂಬುದು ತಿಳಿದುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ ಲೆನ್ಸ್ ಸಹಾಯದಿಂದ ವೈರಲ್ ವೀಡಿಯೊದ ಫೋಟೋವನ್ನು ಹುಡುಕಿದ್ದೇವೆ. ಆಗ ಡಿಸೆಂಬರ್ 28, 2024 ರಂದು ಫೇಸ್‌ಬುಕ್ ಖಾತೆಯೊಂದರಲ್ಲಿ ಇದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊ ಪೋಸ್ಟ್‌ನ ವಿವರಣೆಯಲ್ಲಿ, ‘‘ಮೃತ ವ್ಯಕ್ತಿಯ ಹೆಸರು ಮಿಜಾನ್ ಸರ್ದಾರ್ (50). ಇವರು ಮದರಿಪುರ ಸದರ್ ಮೇಲ್ಜಾಲದ ಜೌಡಿ ಯೂನಿಯನ್‌ನ ಬನಿಕ್ಪಾರಾ ಗ್ರಾಮದ ಮೃತ ಅಬು ಅಲಿ ಸರ್ದಾರ್ ಅವರ ಪುತ್ರ’’ ಎಂದು ಬರೆಯಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಬಾಂಗ್ಲಾ ಕೀವರ್ಡ್ ಬಳಸಿ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಡಿಸೆಂಬರ್ 28 ರಂದು ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮ Ajker Bangladesh ವೆಬ್‌ಸೈಟ್‌ನಲ್ಲಿ ‘‘ಮದರಿಪುರದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಮೃತದೇಹ ಪತ್ತೆಯಾಗಿದೆ’’ ಎಂಬ ಶೀರ್ಷಿಕೆಯೊಂದಿಗೆ ವೈರಲ್ ವೀಡಿಯೊದಲ್ಲಿರುವ ಫೋಟೋದೊಂದಿಗೆ ವರದಿ ಮಾಡಿರುವುದು ಸಿಕ್ಕಿದೆ.

ವರದಿಯ ಪ್ರಕಾರ, ‘‘ಮದರಿಪುರ ಸದಾರ್ ಠಾಣಾ ಪೊಲೀಸರು ಮದರಿಪುರ ಸದರ್ ಮೇಲ್ದಂಡೆ ಘಟಮಜಿ ಯೂನಿಯನ್‌ನ ಪೂರ್ವ ಚಿರಾಯಪಾರ ಗ್ರಾಮದ ಮಾವಿನ ತೋಟದಲ್ಲಿ ಮರಕ್ಕೆ ನೇಣು ಬಿಗಿದ ಮಿಜಾನ್ ಸರ್ದಾರ್ (50) ಎಂಬ ರೈತನ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ಮಿಜಾನ್ ಸರ್ದಾರ್ (50) ಸದರ್ ಮೇಲ್ದಂಡೆಯ ಜೌಡಿ ಯೂನಿಯನ್‌ನ ಬನಿಕ್ಪಾರಾ ಗ್ರಾಮದ ಮೃತ ಅಬು ಅಲಿ ಸರ್ದಾರ್ ಅವರ ಪುತ್ರ. ಶುಕ್ರವಾರ ರಾತ್ರಿ ಮಿಜಾನ್ ಸರ್ದಾರ್ ಅವರ ಮನೆಯಿಂದ ವಾಜ್ ಮಹಫಿಲ್ ಗಾಗಿ ತುಬಿಯಾ ಬಜಾರ್ ಬಳಿಯ ಸೊಲೈಮಾನ್ ಮತ್ತೂಬ್ಬರ ಮನೆಗೆ ತೆರಳಿದ್ದರು ಎಂದು ಸಂಬಂಧಿಕರು ಮತ್ತು ಸ್ಥಳೀಯರು ತಿಳಿಸಿದ್ದಾರೆ. ವಾಜ್ ಮುಗಿಸಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಬೆಳಗ್ಗೆ 11:00 ಗಂಟೆಗೆ ಅಲಂಗೀರ ಮತ್ತೂಬ್ಬರ ಮೀನಿನ ಆವರಣದಿಂದ ಮಗು ಹಾದು ಹೋಗುತ್ತಿದ್ದಾಗ ಮಾವಿನ ಮರಕ್ಕೆ ಸರಪಳಿಯಲ್ಲಿ ಕಟ್ಟಿದ ಶವವನ್ನು ನೋಡಿ ಕಿರುಚಾಡಿದ್ದಾನೆ. ಬಳಿಕ ಸುತ್ತಮುತ್ತಲಿನವರು ಮದರಿಪುರ ಸದರ್ ಪೊಲೀಸ್ ಠಾಣೆಗೆ ಧಾವಿಸಿದರು. ನಂತರ ಪೊಲೀಸರು ಬಂದು ಮೃತದೇಹವನ್ನು ಮರದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಮದರಿಪುರ ಸದರ್ ಆಸ್ಪತ್ರೆಗೆ ಕೊಂಡೊಯ್ದರು’’ ಎಂಬ ಮಾಹಿತಿ ಇದರಲ್ಲಿದೆ.

ಹಾಗೆಯೆ ಡಿಸೆಂಬರ್ 28, 2024 ರಂದು, ‘‘ಮಿಜಾನ್ ಸರ್ದಾರ್ ಎಂಬ ರೈತನ ಶವವು ಮದರಿಪುರದಲ್ಲಿ ಸರಪಳಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರೊಟಿಂಡರ್ ಕ್ರೈಮ್‌ನಲ್ಲಿ ವರದಿಯಾದ ಘಟನೆಯನ್ನು ನಾವು ಕಂಡುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಯನ್ನು ನೀವು ಇಲ್ಲಿ, ಇಲ್ಲಿ ಓದಬಹುದು. ಎಲ್ಲದರಲ್ಲೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಹೆಸರು ಮಿಜಾನ್ ಸರ್ದಾರ್ ಎಂದೇ ಇದೆ.

ಹೀಗಾಗಿ ಮೇಲಿನ ಸಾಕ್ಷ್ಯದಿಂದ ನೇಣು ಬಿಗಿದ ಶವದ ವೀಡಿಯೊ ಮುಸ್ಲಿಂ ವ್ಯಕ್ತಿಯದ್ದು ಎಂಬುದು ಖಚಿತವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Related Stories

No stories found.
logo
South Check
southcheck.in