
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ, ನಿರ್ಜನ ಪ್ರದೇಶದ ರಸ್ತೆಯಲ್ಲಿ ಕೆಲವು ನಾಯಿಗಳು ಮಹಿಳೆಯ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಮಹಿಳೆ ಈ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದರೂ ಅವು ಅಟ್ಯಾಕ್ ಮಾಡುತ್ತದೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎಂದು ಕೆಲ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಕನ್ನಡ ನ್ಯೂಸ್ ನೌ ಡಿಸೆಂಬರ್ 26, 2024 ರಂದು ವೈರಲ್ ವೀಡಿಯೊದಲ್ಲಿರುವ ಸ್ಕ್ರೀನ್ ಶಾಟ್ ಬಳಸಿ ಸುದ್ದಿ ಪ್ರಕಟಿಸಿದ್ದು, ‘‘ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ನಡುರಸ್ತೆಯಲ್ಲೇ 8 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ’’ ಎಂದು ಬರೆದುಕೊಂಡಿದೆ.
ಹಾಗೆಯೆ ವಾರ್ತಾ ಭಾರತಿ ಕೂಡ ಈ ಕುರಿತು ಡಿಸೆಂಬರ್ 24, 2024 ರಂದು ಸುದ್ದಿ ಮಾಡಿದೆ. ‘‘ಉತ್ತರಪ್ರದೇಶದ ಆಗ್ರಾದ ಈದ್ಗಾ ಪ್ರದೇಶದ ಕಟ್ಘರ್ ಕಾಲೋನಿಯಲ್ಲಿ ವಾಕಿಂಗ್ ಗೆ ತೆರಳಿದ್ದ ಮಹಿಳೆಯೋರ್ವರ ಮೇಲೆ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ’’ ಎಂದು ಬರೆದುಕೊಂಡಿದೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಪ್ರಕಟಿಸಲಾಗಿದೆ ಎಂಬುದು ತಿಳಿದುಬಂದಿದೆ. ಅನೇಕ ಮಾಧ್ಯಮಗಳು ಇದನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವ ಘಟನೆ ಎಂದು ಬರೆದುಕೊಂಡಿದೆ. ಆದರೆ, ಇದು ಪಂಜಾಬ್‌ನ ಜಲಂಧರ್ನಲ್ಲಿ ಸಂಭವಿಸಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇಂಡಿಯಾ ಟುಡೆಯ ಸುದ್ದಿ ವರದಿಯಲ್ಲಿ ವೈರಲ್ ವೀಡಿಯೊದ ಸ್ಕ್ರೀನ್‌ಗ್ರಾಬ್ ಅನ್ನು ನಾವು ಕಂಡುಕೊಂಡಿದ್ದೇವೆ. 15 ಡಿಸೆಂಬರ್ 2024 ರಂದು ಪ್ರಕಟವಾದ ಈ ಸುದ್ದಿಯಲ್ಲಿ, ‘‘ಪಂಜಾಬ್‌ನ ಜಲಂಧರ್‌ನ ನಿರ್ಜನ ರಸ್ತೆಯಲ್ಲಿ ಏಳರಿಂದ ಎಂಟು ಬೀದಿ ನಾಯಿಗಳ ಗುಂಪೊಂದು 65 ವರ್ಷದ ಮಹಿಳೆ ಮೇಲೆ ದಾಳಿ ಮಾಡಿ ಕಚ್ಚಿದೆ. ಮಹಿಳೆಗೆ ಗಂಭೀರವಾಗಿ ಗಾಯವಾಗಿದೆ. ಘಟನೆಯ ವೇಳೆ ಮಹಿಳೆ ಏಕಾಂಗಿಯಾಗಿ ನಡೆದುಕೊಂಡು ಗುರುದ್ವಾರದಿಂದ ಹಿಂತಿರುಗುತ್ತಿದ್ದಳು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 25 ಕ್ಕೂ ಹೆಚ್ಚು ನಾಯಿ ಕಚ್ಚಿ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಬಂದು ರಕ್ಷಿಸಿದರು. ಆಕೆಯ ತಲೆಗೂ ಗಾಯವಾಗಿತ್ತು. ಬಳಿಕ ಸ್ಥಳೀಯರು ಮಹಿಳೆಯನ್ನು ಜಲಂಧರ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಇದಲ್ಲದೆ, ಆಗ್ರಾ ಪೊಲೀಸರ ಟ್ವೀಟ್ ಕೂಡ ನಮಗೆ ಕಂಡುಬಂದಿದೆ. ‘‘ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಆಗ್ರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿರುವ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸುದ್ದಿಯೂ ಪ್ರಕಟವಾಗಿದೆ. ಈ ಘಟನೆ ನಡೆದಿರುವುದು ಪೂರ್ವ ಪಂಜಾಬ್, ಜಲಂಧರ್ ನಲ್ಲಿಯೇ ಹೊರತು ಆಗ್ರಾದಲ್ಲಿ ಅಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿದ ನಂತರವೇ ಮಾಧ್ಯಮಗಳಲ್ಲಿ ಸುದ್ದಿಯನ್ನು ಪ್ರಕಟಿಸಿ/ಹಂಚಿಕೊಳ್ಳಿ’’ ಎಂದು ಟ್ವೀಟ್ ಮಾಡಲಾಗಿದೆ.
ಇದು ಪಂಜಾಬ್‌ನ ಜಲಂಧರ್ನಲ್ಲಿ ನಡೆದಿರುವ ಘಟನೆ ಎಂದು The Tribune, News 18 Hindi ಮತ್ತು India.com ಪ್ರಕಟಿಸಿರುವ ಸುದ್ದಿಯನ್ನು ನೀವು ಇಲ್ಲಿ ಓದಬಹುದು.
ಹೀಗಾಗಿ ಮಹಿಳೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಆಗ್ರಾದಲ್ಲಿ ಅಲ್ಲ, ಇದು ಪಂಜಾಬ್‌ನ ಜಲಂಧರ್ನಲ್ಲಿ ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ.