ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಕರ್ನಾಟಕದಲ್ಲಿ ಹಿಂದುಗಳ ಮೇಲೆ ಮುಸ್ಲಿಮರ ದೌರ್ಜನ್ಯ ನಡೆಯುತ್ತಿದೆಯೇ?

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ತೆಲಂಗಾಣದಲ್ಲೂ ಅಧಿಕಾರಕ್ಕೆ ಹಿಂದುಗಳನ್ನು ಹೊಡೆದು ಕೊಲ್ಲುತ್ತಾರೆ ಎಂದು ವೈರಲ್‌ ಪೋಸ್ಟ್‌ ಪ್ರತಿಪಾದಿಸಿದೆ. ಏನಿದರ ಅಸಲಿಯತ್ತು?
ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ 
ಕರ್ನಾಟಕದಲ್ಲಿ ಹಿಂದುಗಳ ಮೇಲೆ ಮುಸ್ಲಿಮರ ದೌರ್ಜನ್ಯ ನಡೆಯುತ್ತಿದೆಯೇ?
Published on
2 min read

ವಾದ

ಕಾರ್ತಿಕ ಮಾಸದಲ್ಲಿ ದೇವಸ್ಥಾನದ ಎದುರು ಭಜನೆ ಮಾಡದಂತೆ ಕರ್ನಾಟಕದಲ್ಲಿ ಮುಸ್ಲಿಮರು ಹಿಂದುಗಳ ಮೇಲೆ ದಾಳಿ ಮಾಡಿದ್ದಾರೆ.

ವಾಸ್ತವ

ಪೂನಾ ಸಮೀಪದ ಕಾಂಫಿನಾಥ್‌ ದೇಗುಲದಲ್ಲಿ ನಡೆದ ಜಗಳವನ್ನು ಕರ್ನಾಟಕದ ಹಿಂದು-ಮುಸ್ಲಿಂ ಸಂಘರ್ಷದಂತೆ ಬಿಂಬಿಸಲಾಗಿದೆ.

ಹಿಂದು ಮತ್ತು ಮುಸ್ಲಿಂ ಗುಂಪುಗಳ ನಡುವಿನ ಸಂಘರ್ಷದ ವಿಡಿಯೋ ವೈರಲ್‌ ಆಗಿದ್ದು, ಕರ್ನಾಟಕದಲ್ಲಿ ಹಿಂದುಗಳ ಮೇಲೆ ಮುಸ್ಲಿಮರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ನವೆಂಬರ್ 24ರಂದು ಯೂಟ್ಯೂಬ್‌ನ #Kshkrishna...# ಹೆಸರಿನ ಚಾನೆಲ್‌ನಲ್ಲಿ 4.52 ನಿಮಿಷಗಳ ವಿಡಿಯೋ ಪ್ರಕಟವಾಗಿದ್ದು, ಇದರೊಂದಿಗೆ ಇರುವ ಟಿಪ್ಪಣಿಯಲ್ಲಿ, "ಕಾರ್ತಿಕ ಮಾಸದಲ್ಲಿ ದೇವಸ್ಥಾನದ ಎದುರು ಭಜನೆ ಮಾಡುತ್ತಿರುವ ಹಿಂದುಗಳನ್ನು ಯಾವ ರೀತಿಯಲ್ಲಿ ಹೊಡೆಯುತ್ತಿದ್ದಾರೆ ನೋಡಿ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಸೋತಿದ್ದರಿಂದ ಹಿಂದುಗಳಿಗೆ ಈ ಪರಿಸ್ಥಿತಿ ಬಂದಿದೆ. ತೆಲಂಗಾಣದಲ್ಲೂ ಬಿಜೆಪಿ (ಅಧಿಕಾರಕ್ಕೆ) ಬಾರದೆ ಹೋದರೆ, ಮುಸ್ಲಿಮರು ಹಿಂದುಗಳನ್ನು ಇದೇ ರೀತಿಯಲ್ಲಿ ಒಡೆದು ಕೊಲ್ಲುತ್ತಾರೆ. ಯೋಚಿಸಿ ಮತ ಹಾಕಿ" ಎಂದು ಹೇಳುತ್ತಿದೆ.

ಟ್ವಿಟರ್‍‌ನಲ್ಲೂ ಈ ವಿಡಿಯೋ ವೈರಲ್ ಆಗಿದೆ. NVNGunna ಹೆಸರಿನ ಖಾತೆಯಿಂದ 2 ನಿಮಿಷದ ತುಣುಕನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲೂ " ಉಗ್ರ, ಕ್ರೂರ ಧರ್ಮ + ಅತಿ ಪಕ್ಷಪಾತಿ ಸರ್ಕಾರ, ತೆಲಂಗಾಣದ ಹಿಂದುಗೇ, ದಯವಿಟ್ಟು ಬುದ್ಧಿವಂತಿಕೆಯಿಂದ ಮತ ಹಾಕಿ. ಯಾಕೆಂದರೆ ಎಂ(ಮುಸ್ಲಿಮರು)ಗಳು ಯೋಚಿಸಿ ಮತಹಾಕುತ್ತಾರೆ" ಎಂದು ಬರೆಯಲಾಗಿದೆ. ಈ ಟ್ವೀಟ್‌ 1300 ಬಾರಿ ರೀಟ್ವೀಟ್‌ ಆಗಿದ್ದು, 59 ಸಾವಿರ ಬಾರಿ ವೀಕ್ಷಿಸಲಾಗಿದೆ.

ಫೇಸ್‌ಬುಕ್‌ನಲ್ಲಿ ಜಿ ಶಿರಿಶಾ ಅಮರ್‍‌ನಾಥ್‌ ಎಂಬುವವರು ವಿಡಿಯೋ ಪೋಸ್ಟ್‌ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್‌

ಕರ್ನಾಟಕದಲ್ಲಿ ಮುಸ್ಲಿಮರು ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿರುವ ವಿಡಿಯೋ ವಾಸ್ತವದಲ್ಲಿ ಮಹಾರಾಷ್ಟ್ರದ ಅಹಿಲ್ಯಾನಗರದ್ದು.

"ಸೌತ್‌ಚೆಕ್‌" ಈ ಕುರಿತು ಪರಿಶೀಲಿಸಿತು. 4.52 ನಿಮಿಷಗಳ ವಿಡಿಯೋ ಪೂರ್ಣ ಗಮನಿಸಿದಾಗ, ವಿಡಿಯೋದಲ್ಲಿರುವವರು ಮರಾಠಿಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿತು. ಈ ಸುಳಿವು ಆಧರಿಸಿ ಮೂಲ ವಿಡಿಯೋಕ್ಕಾಗಿ ಹುಡುಕಾಟ ನಡೆಸಲಾಯಿತು. ನವೆಂಬರ್‍‌ 13ರಂದು ಮಹಾರಾಷ್ಟ್ರದ ಪೂನಾ ಸಮೀಪವಿರುವ ಕಾಫಿನಾಥ್‌ ದೇವಸ್ಥಾನದಲ್ಲಿ ನಡೆದ ಗಲಭೆಯ ದೃಶ್ಯಗಳು ಎಂಬುದು ತಿಳಿದು ಬಂದಿತು.

ಈ ಕುರಿತು ನ್ಯೂಸ್‌18 ಲೋಕ್‌ಮತ್‌, ದೈನಿಕ್‌ ಭಾಸ್ಕರ್‍‌ ಮಾಧ್ಯಮಗಳಲ್ಲಿ ವರದಿಯಾಗಿದೆ. ದೈನಿಕ್‌ ಭಾಸ್ಕರ್‍‌ನ ದಿವ್ಯ ಮರಾಠಿಯವರ ವರದಿಯ ಪ್ರಕಾರ, ಕಾಫಿನಾಥ್‌ ಮಂದಿರ ಮತ್ತು ದರ್ಗಾ ಎರಡೂ ಒಂದೇ ಪ್ರದೇಶದಲ್ಲಿದ್ದು, ಪರಸ್ಪರ ಈ ಸ್ಥಳಕ್ಕಾಗಿ ಎರಡೂ ಸಮುದಾಯಗಳ ನಡುವೆ ಸಂಘರ್ಷವಿದ್ದು, ಪ್ರಕರಣ ಸ್ಥಳೀಯ ಕೋರ್ಟ್ ಮುಂದಿದೆ.

ನವೆಂಬರ್‍‌ 13ರಂದು ಸೋಮವತಿ ಅಮವಾಸ್ಯೆಯ ದಿನ ಹಿಂದುಗಳು ಕಾಫಿನಾಥ್‌ ದೇವಸ್ಥಾನದ ಎದುರು ಪೂಜೆ ಮತ್ತು ಭಜನೆ ನಡೆಸಿದ್ದರು. ಧ್ವನಿವರ್ಧಕಗಳನ್ನು ಬಳಸಿದ್ದರಿಂದ ಸ್ಥಳೀಯ ಮುಸ್ಲಿಮರು ತಕರಾರು ತೆಗೆದರು. ಇದು ಎರಡೂ ಗುಂಪುಗಳ ನಡುವೆ ಘರ್ಷಣೆ ಕಾರಣವಾಯಿತು ಎಂದು ವರದಿ ವಿವರಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದೂ ಅಲ್ಲದೆ, 124 ಮಂದಿಯ ವಿರುದ್ಧ ಎಫ್‌ಐಆರ್‍‌ ದಾಖಲಿಸಿದ್ದಾರೆ. ಈ ಕುರಿತು ಹಿಂದುಸ್ತಾನ್ ಟೈಮ್ಸ್‌ ಪತ್ರಿಕೆ ಕೂಡ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಹೇಳಿರುವಂತೆ ಇದು ಕರ್ನಾಟಕದ ವಿಡಿಯೋ ಅಲ್ಲ ಎಂಬುದು ದೃಢವಾಗುತ್ತದೆ.

Related Stories

No stories found.
logo
South Check
southcheck.in