ವಾದ
ನೂತನ ಸಂಸತ್ ಭವನದಲ್ಲಿ, ಚಳಿಗಾಲದ ಅಧಿವೇಶನದ ವೇಳೆ ನುಸುಳಿದ ಮೈಸೂರಿನ ಯುವಕ ಮನೋರಂಜನ್ ಎಡಪಂಥೀಯ ವಿಚಾರಧಾರೆಯ ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತ
ವಾಸ್ತವ
ವೈರಲ್ ಆಗಿರುವ ಪೋಸ್ಟ್‌ನಲ್ಲಿರುವುದು ಎಸ್‌ಎಫ್‌ಐ ಮೈಸೂರು ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್. ಮನೋರಂಜನ್ ಅವರದ್ದಲ್ಲ.
ಸಂಸತ್ ಭವನದೊಳಗೆ ನುಸುಳಿ ಹೊಗೆಯ ಬಾಂಬ್ ಸಿಡಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತ ಮನೋರಂಜನ್ ಎಸ್‌ಎಫ್‌ಐ ಎಂಬ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿ ಸಂಘಟನೆಗೆ ಸೇರಿದಾತ ಎಂದು ಪ್ರತಿಪಾದಿಸುವ ಫೇಸ್‌ಪೋಸ್ಟ್ ವೈರಲ್ ಆಗಿದೆ.
ವಕೀಲ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ, "ಸಂಸತ್ ಮೇಲೆ ದಾಳಿ ಮಾಡಿದ ಮೈಸೂರಿನ ಅರ್ಬನ್ ನಕ್ಸಲ್, ಕಮ್ಯುನಿಸ್ಟ್ ಖದೀಮ, ಮನೋರಂಜನ್ ಇವನೇ" ಎಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ನಡೆದ ಕಾರ್ಯಕ್ರಮ ಫೋಟೋ ಇದಾಗಿದ್ದು, ಇದರಲ್ಲಿ ಮನೋರಂಜನ್ ಹೋಲುವ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದಾರೆ.
ಇದೇ ಫೋಟೋವನ್ನು ಬೇರೆ ಬೇರೆ ಪ್ರತಿಪಾದನೆಯೊಂದಿಗೆ ಮನೋರಂಜನ್ ಮತ್ತು ಎಸ್‌ಎಫ್‌ಐ ನಡುವೆ ಸಂಪರ್ಕವನ್ನು ಒತ್ತಿ ಹೇಳುವ ಪೋಸ್ಟ್‌ಗಳು ಹರಿದಾಡುತ್ತಿವೆ. ನಮೋ ಬಿಜೆಪಿ100ಕೆ, ಬಿಜೆಪಿಹುಣಸೂರು ಬಿಜೆಪಿ, ಬಿಜೆಪಿ ಶಿವಮೊಗ್ಗ ಫೇಸ್‌ಬುಕ್ ಪೇಜ್‌ಗಳು ಈ ಫೋಟೋ ಹಂಚಿಕೊಂಡಿವೆ.
ವೈರಲ್ ಆಗಿರುವ ಫೋಟೋದಲ್ಲಿರುವ ವ್ಯಕ್ತಿ ಮೈಸೂರಿನ ವಕೀಲ ಹಾಗೂ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಟಿ ಎಸ್ ವಿಜಯ್‌ಕುಮಾರ್ ಆಗಿದ್ದು, ಇದು ಮನೋರಂಜನ್ ಅಲ್ಲ ಎಂದು ತಿಳಿದುಬಂದಿದೆ.
'ಸೌತ್ ಚೆಕ್ ' ವೈರಲ್ ಆಗಿರುವ ಫೋಟೋದ ಮೂಲ ತಿಳಿಯಲು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ಆರಂಭಿಸಿತು.
ಎಸ್‌ಎಫ್‌ಐ ಮೈಸೂರು ಹೆಸರಿನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ 2022ರ ಸೆಪ್ಟೆಂಬರ್ 8ರಂದು 2ನೇ ಮೈಸೂರು ನಗರದ ಸಮ್ಮೇಳನ ಹಾಗೂ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಮಹೇಂದ್ರ, ಕಾರ್ಯದರ್ಶಿಯಾಗಿ ಅಯ್ಕೆಯಾಗಿದ್ದ ಅಭಿ ಅವರಿಗೆ ಅಭಿನಂದನೆ ಸಲ್ಲಿಸಿ ವೈರಲ್ ಆಗಿರುವ ಫೋಟೋ ಸೇರಿದಂತೆ ಒಟ್ಟು ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.
ವೈರಲ್ ಆಗಿರುವ ಫೋಟೋದಲ್ಲಿ ಮನೋರಂಜನ್ ಎಂದು ಪ್ರತಿಪಾದಿಸಿರುವ ವ್ಯಕ್ತಿಯ ಫೋಟೋ ಮತ್ತು ಸುದ್ದಿಯಾಗಿರುವ ಮನೋರಂಜನ್ ಅವರ ಫೋಟೋವನ್ನು ಹೋಲಿಕೆಯ ಟೂಲ್ ಬಳಸಿ ಸಾಮ್ಯತೆ ಎಷ್ಟಿದೆ ಎಂಬುದನ್ನು ಪರಿಶೀಲಿಸಿದೆವು.
ಈ ಹೋಲಿಕೆಯಲ್ಲಿ ನಮಗೆ ತಿಳಿದು ಬಂದಿದ್ದು ಈ ಎರಡು ವ್ಯಕ್ತಿಗಳ ಫೋಟೋದಲ್ಲಿ ಸಾಮ್ಯತೆ ಕೇವಲ 16.58%ರಷ್ಟಿದ್ದು, ವೈರಲ್ ಫೋಟೋದಲ್ಲಿರುವ ವ್ಯಕ್ತಿ ಮನೋರಂಜನ್ ಅಲ್ಲ ಎಂಬುದು ಖಚಿತವಾಗುತ್ತದೆ.
ಹಾಗಾಗಿ ವೈರಲ್ ಆಗಿರುವ ಫೋಟೋದಲ್ಲಿರುವ ವ್ಯಕ್ತಿ ಗುರುತು ಖಚಿತಪಡಿಸಿಕೊಳ್ಳಲು ಎಸ್‌ಎಫ್‌ಐ ಸಂಘಟನೆಯನ್ನು ಸಂಪರ್ಕಿಸಿದಾಗ, ಅವರು ಟಿ ಎಸ್ ವಿಜಯ್‌ಕುಮಾರ್ ಎಂದು ತಿಳಿದು ಬಂತು.
'ಸೌತ್ ಚೆಕ್' ಟಿ ಎಸ್ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು, " ಕಳೆದ ವರ್ಷ ನಮ್ಮ ಕಾರ್ಯಕ್ರಮದ ಫೋಟೋವನ್ನು ಬಳಸಿಕೊಂಡು, ನನ್ನನ್ನು ಮನೋರಂಜನ್ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಮನೋರಂಜನ್‌ಗೂ ಎಸ್‌ಎಫ್‌ಐ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ಆತ ಸದಸ್ಯನೂ ಅಲ್ಲ. ಸಂಸತ್ ಭವನದ ಘಟನೆಯಿಂದ ಪ್ರತಾಪ್ ಸಿಂಹ ಅವರಿಗೆ ವರ್ಚಸ್ಸಿಗೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ನನ್ನ ಫೋಟೋ ಬಳಸಿ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ನಾವೀಗ ಈ ಸಂಬಂಧ ನನ್ನ ಫೋಟೋವನ್ನು ತಪ್ಪಾಗಿ ಬಳಸಿದ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ" ಎಂದುತಿಳಿಸಿದರು.
ಈ ಸಂಬಂಧ ಟಿ ಎಸ್ ವಿಜಯ್ ಕುಮಾರ್ ಅವರು ಮೈಸೂರು ಸೈಬರ್ ಠಾಣೆಯಲ್ಲಿ, ತಮ್ಮ ಫೋಟೋ ಬಳಸಿ ಅಪಪ್ರಚಾರ ಮಾಡುತ್ತಿರುವುದಾಗಿ ದೂರು ಕೂಡ ದಾಖಲಿಸಿದ್ದಾರೆ.
ರಾಜ್ಯ ಡಿವೈಎಫ್‌ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಈ ಕುರಿತು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಮನೋರಂಜನ್ ಎಡಪಂಥೀಯ ಎಂದು ಬಿಂಬಿಸಲು ಸುಳ್ಳು ಸುದ್ದಿ ಹರಡುತ್ತಿರುವುದು ಎಸ್‌ಎಫ್‌ಐ ಮೈಸೂರು ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಅವರನ್ನು ತೋರಿಸಿ..." ಎಂದು ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಫೋಟೋದಲ್ಲಿರುವ ವ್ಯಕ್ತಿ ಟಿ ಎಸ್ ವಿಜಯ್‌ಕುಮಾರ್ ಎಂದು ದೃಢಪಟ್ಟಿದ್ದು, ಮನೋರಂಜನ್ ಹೆಸರಿನಲ್ಲಿ ತಪ್ಪು ಪ್ರತಿಪಾದನೆಯೊಂದಿಗೆ ಬಳಸಲಾಗಿದೆ ಎಂದು ಖಚಿತವಾಗುತ್ತದೆ.