ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಇಲ್ಲವೆ?

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಇಲ್ಲವೆ?

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಾಧನೆಗೆ ಕಾರಣ, ಮೆರಿಟ್‌ ಇರುವವರು ಕೆಲಸ ಮಾಡುತ್ತಾರೆ. ಮೀಸಲಾತಿ ವ್ಯವಸ್ಥೆ ಇಲ್ಲದಿರುವುದೇ ಯಶಸ್ಸಿಗೆ ಕಾರಣ ಎಂದು ಹೇಳುವ ಪೋಸ್ಟ್‌ ವೈರಲ್‌ ಆಗಿದೆ. ಇದು ನಿಜವೆ?
Published on

ವಾದ

ಇಸ್ರೋದಲ್ಲಿ ಮೀಸಲಾತಿ ಆಧರಿಸಿ ನೇಮಕಾತಿ ನಡೆಯುವುದಿಲ್ಲ.

ವಾಸ್ತವ

ಸುಳ್ಳು, ಇಸ್ರೋ ಸರ್ಕಾರಿ ಸಂಸ್ಥೆಯಾಗಿದ್ದು, ಮೀಸಲಾತಿ ಆಧರಿಸಿ ನೇಮಕಾತಿ ನಡೆಯುತ್ತದೆ.

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಅಂಗಳ ತಲುಪಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ಮೊದಲ ದೇಶ ಎನಿಸಿಕೊಂಡಿತು. ಈ ಸಾಧನೆಗೆ ಕಾರಣ, ಇಸ್ರೋದಲ್ಲಿ ಮೀಸಲಾತಿ ಪದ್ಧತಿ ಇಲ್ಲ, ಅಲ್ಲಿ ಮೆರಿಟ್‌ ಆಧಾರದ ಮೇಲೆ ನೇಮಕಾತಿಯಾಗುತ್ತದೆ ಎಂದು ಪ್ರತಿಪಾದಿಸುವ ಟ್ವೀಟ್‌ ವೈರಲ್‌ ಆಗಿದೆ.

ಅನುರಾಧ ತಿವಾರಿ ಎಂಬುವವರು ಮಾಡಿರುವ ಟ್ವೀಟ್‌ನಲ್ಲಿ, " ಈ ಮೂರು ಭಾರತದ ಹೆಮ್ಮೆಯ ಸಂಗತಿಗಳು.

-ಕ್ರಿಕೆಟ್

-ಸೇನೆ

-ಇಸ್ರೋ

ಇವೆಲ್ಲವುಗಳಲ್ಲಿ ಸಾಮಾನ್ಯವಾಗಿರುವುದು ಏನು?

ಮೀಸಲಾತಿ ಇಲ್ಲದಿರುವುದು

ಕೇವಲ ಮೆರಿಟ್‌ ಪದ್ಧತಿ ಇರುವುದು

ಇಸ್ರೋ ಯೋಗ್ಯ ಅಭ್ಯರ್ಥಿಗಳು ಸಿಗದೇ ಇದ್ದಲ್ಲಿ, ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ ಎಂದು ಘೋಷಿಸಬಹುದು.

ಮೆರಿಟ್‌ ಗೌರವಿಸುವವರಿಗೆ ಗರಿಷ್ಠಗೌರವ ಸಿಗುತ್ತದೆ.

ಫೇಸ್‌ಬುಕ್‌ನಲ್ಲೂ ಇದೇ ನಿಲುವಿನ ಪೋಸ್ಟ್‌ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಪೋಸ್ಟ್‌ನಲ್ಲಿ ಪ್ರಸ್ತಾಪವಾದ ಮೀಸಲಾತಿ, ಇಸ್ರೋ ಇನ್ನು ಕೆಲವ ವರ್ಡ್‌ಗಳನ್ನು ಬಳಸಿ ಗೂಗಲ್ ಮಾಡಿದಾಗ ನಮಗೆ ಕೆಲವು ಇಸ್ರೋ ಅಧಿಕೃತ ತಾಣದಲ್ಲಿ ನೇಮಕಾತಿ ಕುರಿತ ಅಧಿಸೂಚನೆಯ ಪ್ರತಿ ಲಭಿಸಿತು. 2023ರ ಮೇ 4ರಂದು ಹೊರಡಿಸಿದ ಈ ಅಧಿಸೂಚನೆಯು ವಿಜ್ಞಾನಿ ಮತ್ತು ಎಂಜಿನಿಯರ್‍‌ ನೇಮಕಾತಿಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಹುದ್ದೆಗಳಲ್ಲಿ ಮೀಸಲಾತಿ ನೀಡಿರುವುದನ್ನು ನೋಡಬಹುದು. ಅಧಿಸೂಚನೆಯ ಲಿಂಕ್‌ ಇಲ್ಲಿದೆ.

ಇಸ್ರೋದಲ್ಲಿ ಪ್ರಮುಖ ಸೂಚಿತ ಜಾತಿಗಳಿಗೆ ನಿರ್ದಿಷ್ಟ ಪ್ರತಿಶತದಷ್ಟು ಮೀಸಲಾತಿ ನೀಡಲಾಗಿದ್ದು. ಅದರಂತೆ ನೇಮಕಾತಿ ನಡೆಯುತ್ತದೆ ಎಂದು ಇಸ್ರೋ ನೇಮಕಾತಿ ನಿಯಮ ಹೇಳುತ್ತದೆ.

ಈ ಹಿನ್ನೆಲೆಯಲ್ಲಿ ಇಸ್ರೋದಲ್ಲಿ ಪ್ರತಿಭೆಗೆ ಮಾತ್ರ ಅವಕಾಶ. ಮೀಸಲಾತಿ ಆಧಾರಿತ ನೇಮಕಾತಿ ನಡೆಯುವುದಿಲ್ಲ ಎಂಬುದು ಸುಳ್ಳು.

logo
South Check
southcheck.in