ತಮ್ಮ ಸಂಪುಟದ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು, ಭಾರತೀಯರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಪ್ರತಿಪಾದಿಸುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ಮಾಲ್ಡೀವ್ಸ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿರುವ ಈ ಸ್ಕ್ರೀನ್ ಶಾಟ್‌ನಲ್ಲಿ, " ನನ್ನ ಸಚಿವರು ಮತ್ತು ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಬೇಜವಾಬ್ದಾರಿ ಪ್ರತಿಕ್ರಿಯೆಗಾಗಿ ನನ್ನ ಭಾರತೀಯ ಸ್ನೇಹಿತರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತಿದ್ದೇನೆ. ಭಾರತೀಯ ಸ್ನೇಹಿತರನ್ನು ಸ್ವಾಗತಿಸಲು ಎದುರು ನೋಡುತ್ತೇನೆ ಮತ್ತು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ಪ್ರಯತ್ನಿಸುತ್ತೇನೆ" ಎಂದು ಬರೆಯಲಾಗಿದೆ. ಜನವರಿ 7ರಂದು 10.09 ನಿಮಿಷಕ್ಕೆ ಈ ಟ್ವೀಟ್ ಮಾಡಲಾಗಿದೆ. ಈಗ ಟ್ವೀಟ್ ಡಿಲೀಟ್ ಮಾಡಲಾಗಿದೆ ಎಂದು ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅನೇಕರು ಪ್ರತಿಪಾದಿಸಿದ್ದಾರೆ.
ವೈರಲ್ ಆಗಿರುವ ಸ್ಕ್ರೀನ್ ಶಾಟ್ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜು ಅವರ ಅಧಿಕೃತ ಎಕ್ಸ್ ಖಾತೆಯದ್ದು. ಹಾಗಾಗಿ ಜನವರಿ 7ರಂದು ಪ್ರಕಟಿಸಿರುವ ಟ್ವೀಟ್‌ಗಳಿಗಾಗಿ ಹುಡುಕಾಡಿದೆವು. ಅಧ್ಯಕ್ಷ ಮಿಝು ಅವರು ಟೈಮ್‌ಲೈನ್ನಲ್ಲಿ ಜ. 5ರಂದು ರಾತ್ರಿ 11.04ಕ್ಕೆ ಕಡೆಯದಾಗಿ ಟ್ವೀಟ್ ಮಾಡಿರುವುದನ್ನು ಗುರುತಿಸಿದೆವು.
ಸೋಷಿಯಲ್ ಬ್ಲೇಡ್ ತಾಣದ ಮೂಲಕ ಮುಯಿಝು ಅವರ ಖಾತೆ ಕಳೆದ ಎರಡು ವಾರಗಳ ಖಾತೆಯ ಚಟುವಟಿಕೆಗಳನ್ನು ಪರಿಶೀಲಿಸಿದಾಗ, ಜನವರಿ 5ರ ನಂತರ ಯಾವುದೇ ಟ್ವೀಟ್ ಪ್ರಕಟವಾಗಿಲ್ಲ ಎಂಬುದು ಸ್ಪಷ್ಟವಾಯಿತು.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ವೈರಲ್ ಪೋಸ್ಟ್‌ನೊಂದಿಗಿರುವ ಟಿಪ್ಪಣಿಯಲ್ಲಿ ಟ್ವೀಟ್ ಡಿಲೀಟ್ ಆಗಿದೆ ಎಂದು ಹೇಳಲಾಗಿದೆ. ಆದರೆ ಯಾವುದೇ ಟ್ವೀಟ್ ಡಿಲೀಟ್ ಮಾಡಿದರೂ, ಆ ಟ್ವೀಟ್‌ಗೆ ಬಂದ ಪ್ರತಿಕ್ರಿಯೆಗಳು ಹಾಗೇ ಇರುತ್ತವೆ. ಮುಯಿಜು ಅವರ ಟ್ವೀಟ್‌ಗೆ ಅಂತಹ ಯಾವುದೇ ಪ್ರತಿಕ್ರಿಯೆ ಬಂದ ದಾಖಲೆಗಳು ಲಭ್ಯವಾಗಲಿಲ್ಲ.
ಇದೇ ವೇಳೆ ಮಾಲ್ಡೀವ್ಸ್ ಸರ್ಕಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, " ಮಾಲ್ಡೀವ್ಸ್ ಸರ್ಕಾರ ಸೋಷಿಯಲ್ ಮೀಡಿಯಾದಲ್ಲಿ ವಿದೇಶಿ ನಾಯಕರು ಮತ್ತು ಗಣ್ಯ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಗಮನಿಸಿದೆ.ಇವು ವ್ಯಕ್ತಿಗತ ಅಭಿಪ್ರಾಯಗಳೇ ಹೊರತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಲ್ಡೀವ್ಸ್ ಅಧ್ಯಕ್ಷರು ಕ್ಷಮೆಯಾಚಿಸಿದ ಸುದ್ದಿಯೂ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷರು ಕ್ಷಮೆಯಾಚಿಸಿದ್ದಾರೆ ಎಂದುಪ್ರತಿಪಾದಿಸಿರುವ ಎಕ್ಸ್‌ನ ಸ್ಕ್ರೀನ್‌ಶಾಟ್ ನಕಲಿ ಎಂದು ಸ್ಪಷ್ಟವಾಗುತ್ತದೆ.