Fact Check: ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ ಎನ್ನಲಾಗುತ್ತಿರುವ ವೀಡಿಯೊ ಕೇರಳದ್ದು
ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಳೆದ ಮೂರು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈಗಾಗಲೇ ಅವಾಂತರ ಸೃಷ್ಟಿಯಾಗಿದೆ. ಪಕ್ಕದ ರಾಜ್ಯ ಕೇರಳದಲ್ಲೂ ವರುಣ ದೇವ ಆರ್ಭಟಿಸುತ್ತಿದ್ದಾನೆ. ಅನೇಕ ಕಡೆಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ದಕ್ಷಿಣ ಕನ್ನಡದ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ಉಪ್ಪಿನಂಗಡಿಯಲ್ಲಿ ಕುಮಾರಧಾರ ಮತ್ತು ನೇತ್ರಾವತಿ ನದಿಯ ಸಂಗಮವಾಗಿದೆ. ಇದರ ನಡುವೆ ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ವೈರಲ್ ಆಗುತ್ತಿದೆ.
ಡೇ ಟು ಡೇ ನ್ಯೂಸ್ ಎಂಬ ಎಕ್ಸ್ ಖಾತೆಯಲ್ಲಿ ಜುಲೈ 30 2024 ರಂದು, 'ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ' ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹಾಗೆಯೆ ಜನಾರ್ಧನ್ ಪೂಜಾರಿ ಎಂಬ ಫೇಸ್ಬುಕ್ ಖಾತೆಯಲ್ಲಿ ಕೂಡ ಇದೇ ವೀಡಿಯೊ ಅಪ್ಲೋಡ್ ಆಗಿದೆ. ಇವರು 'ಉಪ್ಪಿನಂಗಡಿ ನೇತ್ರಾವತಿ ಸೇತುವೆ - ಗುರುವಾಯನಕೆರೆ ಬೆಳ್ತಂಗಡಿ ರೋಡ್' ಎಂದು ಬರೆದುಕೊಂಡಿದ್ದಾರೆ.
ಇದು ನೇತ್ರಾವತಿ ನದಿ ಎಂದು ಹೇಳುವ ಅನೇಕ ವೈರಲ್ ವೀಡಿಯೊಗಳು ಯೂಟ್ಯೂಬ್ ಸೇರಿದಂತೆ ಅನೇಕ ಕಡೆಗಳಲ್ಲಿ ಹರಿದಾಡುತ್ತಿದೆ.
ಹಾಗೆಯೆ ಕನ್ನಡದ ಡಿಜಿಟಲ್ ಮಾಧ್ಯಮ ವೆಬ್ ದುನಿಯಾ ಕೂಡ ಈ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಸಾರ ಮಾಡಿದೆ. 'ರೌದ್ರಾವತಾರ ತಾಳಿದ ನೇತ್ರಾವತಿ ನದಿಯ ನಡುವೆ ವಾಹನ ಸವಾರಿ: ಎದೆ ಝಲ್ಲೆನಿಸುವ ವಿಡಿಯೋ ಇಲ್ಲಿದೆ ನೋಡಿ' ಎಂಬ ಶೀರ್ಷಿಕೆ ನೀಡಿದೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಕೇರಳದ ಪಟ್ಟಾಂಬಿ ಬ್ರಿಡ್ಜ್ನದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಈ ವೀಡಿಯೊಕ್ಕೆ ಹೋಲುವ ಅನೇಕ ಫೈಲ್ಗಳು ಕಾಣಿಸಿಕೊಂಡವು. ಇದರಲ್ಲಿ ಶಮಿ ಹೌಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಜುಲೈ 30 ರಂದು ಅಪ್ಲೋಡ್ ಆದ ವೀಡಿಯೊವನ್ನು ನೋಡಿದಾಗ ನೇತ್ರವಾತಿ ನದಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂಬುದು ತಿಳಿಯಿತು. ಇವರು ಇದಕ್ಕೆ 'ಪಟ್ಟಾಂಬಿ ಬ್ರಿಡ್ಜ್ನ ಈಗಿನ ಪರಿಸ್ಥಿತಿ' ಎಂಬ ಟೈಟಲ್ನೊಂದಿಗೆ ವೀಡಿಯೊ ಹಂಚಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಾವು ಪಟ್ಟಾಂಬಿ ಬ್ರಿಡ್ಜ್ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದೆವು. ಆಗ ಜುಲೈ 30, 2024 ರಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ 'ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪಾಲಕ್ಕಾಡ್ ನಿವಾಸಿಗಳ ಜೀವನ ಹಳಿತಪ್ಪಿದೆ' ಎಂಬ ಹೆಡ್ಲೈನ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿ ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಾಂಬಿ ಸೇತುವೆಯನ್ನು ಬೆಳಗ್ಗೆ 11.30ಕ್ಕೆ ಮುಚ್ಚಲಾಗಿದೆ ಎಂದು ಬರೆಯಲಾಗಿದೆ.
ಹಾಗೆಯೆ ಕೇರಳದ 24 ನ್ಯೂಸ್ ಮಾಧ್ಯಮವು ಪಟ್ಟಾಂಬಿ ಸೇತುವೆಯಲ್ಲಿ ನೀರು ಹರಿಯುತ್ತಿರುವ ವೀಡಿಯೊವನ್ನು ತನ್ನ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೊ ವೈರಲ್ ಆಗುತ್ತಿರುವ ವೀಡಿಯೊಕ್ಕೆ ಹೋಲುತ್ತಿದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ಪಟ್ಟಾಂಬಿ ಬ್ರಿಡ್ಜ್ ಎಂದು ನಾವು ಗೂಗಲ್ ಮ್ಯಾಪ್ನಲ್ಲಿ ಸರ್ಚ್ ಮಾಡಿದ್ದೇವೆ. ವೈರಲ್ ವೀಡಿಯೊದಲ್ಲಿ ನೀವು ಹಸಿರು ಬಣ್ಣದ ಸಣ್ಣ ಬಿಲ್ಡಿಂಗ್ ಕಾಣಬಹುದು, ಬಲ ಬದಿಯಲ್ಲಿ ಹಸಿರು ಬಣ್ಣದ ಛಾವಣಿ ಹೊಂದಿರುವ ದೊಡ್ಡ ಬಿಲ್ಡಿಂಗ್ ಕೂಡ ಇದೆ. ಇದೇ ಬಿಲ್ಡಿಂಗ್ ಅನ್ನು ನಾವು ಸ್ಪಷ್ಟವಾಗಿ ಗೂಗಲ್ ಮ್ಯಾಪ್ನ ಪಟ್ಟಾಂಬಿ ಬ್ರಿಡ್ಜ್ನಲ್ಲಿ ಕೂಡ ಕಂಡಿದ್ದೇವೆ.
ಉಪ್ಪಿನಂಗಡಿಯ ನೇತ್ರಾವತಿ ನದಿಯ ವೀಡಿಯೊವೂ ನಮಗೆ ಸಿಕ್ಕಿದೆ. ಆದರೆ, ನೀರು ಸೇತುವೆ ಮಟ್ಟಕ್ಕೆ ಹರಿಯುತ್ತಿಲ್ಲ, ಜೊತೆಗೆ ವೈರಲ್ ಆಗುತ್ತಿರುವ ವೀಡಿಯೊಕ್ಕೂ ನೇತ್ರಾವತಿ ನದಿಯ ವೀಡಿಯೊಕ್ಕೂ ಯಾವುದೇ ಹೋಲಿಕೆ ಇಲ್ಲ. ಪವನಜ ಎಂಬವರು ಈ ವೀಡಿಯೊವನ್ನು ಜುಲೈ 30, 2024 ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳಾಗಿದೆ. ಮತ್ತು ಇದು ಕೇರಳದ ಪಟ್ಟಾಂಬಿ ಬ್ರಿಡ್ಜ್ ಎಂದು ನಾವು ಖಚಿತ ಪಡಿಸುತ್ತೇವೆ.