ರೈಲಿನ ಹಾರ್ನ್​ನಿಂದ ನಮಾಜ್ ಮಾಡಲಾಗುತ್ತಿಲ್ಲ ಎಂದು ರೈಲು ನಿಲ್ದಾಣವನ್ನೇ ಧ್ವಂಸ ಮಾಡಿದ್ರಾ ಮುಸ್ಲಿಮರು?: ಇಲ್ಲಿದೆ ಸತ್ಯಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೈಲ್ವೆ ನಿಲ್ದಾಣವನ್ನು ಧ್ವಂಸ ಮಾಡುತ್ತಿರುವ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ.
ರೈಲಿನ ಹಾರ್ನ್​ನಿಂದ ನಮಾಜ್ ಮಾಡಲಾಗುತ್ತಿಲ್ಲ ಎಂದು ರೈಲು ನಿಲ್ದಾಣವನ್ನೇ ಧ್ವಂಸ ಮಾಡಿದ್ರಾ ಮುಸ್ಲಿಮರು?: ಇಲ್ಲಿದೆ ಸತ್ಯಾಂಶ
Published on
2 min read

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೈಲ್ವೆ ನಿಲ್ದಾಣವನ್ನು ಧ್ವಂಸ ಮಾಡುತ್ತಿರುವ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿರುವ ಮಹಿಷಾಸುರ ರೈಲು ನಿಲ್ದಾಣದಲ್ಲಿ ಮುಸ್ಲಿಮರು, ರೈಲುಗಳ ಹಾರ್ನ್ ನಮಾಜ್ ಮಾಡಲು ಅಡ್ಡಿಪಡಿಸುತ್ತಿವೆ ಎಂದು ಕೋಪಗೊಂಡು ನಿಲ್ದಾಣವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರ ರಝ್ದನ್ ಎಂಬವರು, “ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಮಹಿಷಾಶುರ ರೈಲು ನಿಲ್ದಾಣದಲ್ಲಿ ರೈಲಿನ ಶಿಳ್ಳೆಯ ಶಬ್ದ ತಮ್ಮ ನಮಾಜ್‌ಗೆ ತೊಂದರೆಯಾಗುತ್ತಿದೆ ಎಂದು ಧ್ವಂಸ ಮಾಡಲಾಗಿದೆ. ಧರ್ಮನಿರಪೇಕ್ಷತೆಯನ್ನು ಆನಂದಿಸಿ,'' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಅನೇಕ ಪೋಸ್ಟ್‌ಗಳು ಸಾಮಾಜಿಕ ತಾಣಗಳಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಬಳಕೆದಾರ ರಾಜೇಶ್ ಚೌರಾಸಿಯಾ ಎಂಬವರು ಜುಲೈ 8, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ಪಶ್ಚಿಮ ಬಂಗಾಳದ ಮಹಿಷಾಸುರ ರೈಲು ನಿಲ್ದಾಣವನ್ನು ಜಿಹಾದಿಗಳು ನಾಶಪಡಿಸಿದ್ದಾರೆ. ಮಮತಾ ಆಳಿದ ಬಂಗಾಳದಲ್ಲಿ ಜಿಹಾದಿಗಳ ಧೈರ್ಯ ನೋಡಿ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ಮಹಿಷಾಸುರ ರೈಲು ನಿಲ್ದಾಣದಲ್ಲಿ ರೈಲಿನ ಶಿಳ್ಳೆ ತಮ್ಮ ಪ್ರಾರ್ಥನೆಗೆ ಅಡ್ಡಿಪಡಿಸುತ್ತಿದೆ ಎಂದು ಧ್ವಂಸಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ತಿಗಳನ್ನು ನಾಶಪಡಿಸಿದ್ದಾರೆ ಮತ್ತು ಸಾರ್ವಜನಿಕರ ಸೌಲಭ್ಯಗಳಿಗೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಭಾರತ ಸರ್ಕಾರವು ಉತ್ತರಿಸಬೇಕಿದೆ,'' ಎಂದು ಅವರು ಬರೆದುಕೊಂಡಿದ್ದಾರೆ.

Fact Check:

ಆದರೆ, ರೈಲಿನ ಹಾರ್ನ್​ನಿಂದ ನಮಾಜ್ ಮಾಡಲಾಗುತ್ತಿಲ್ಲ ಎಂದು ಮುಸ್ಲಿಮರು ರೈಲು ನಿಲ್ದಾಣವನ್ನು ಧ್ವಂಸ ಮಾಡಿದ್ದಾರೆ ಎಂಬ ವೈರಲ್ ವಿಡಿಯೋ ಸುಳ್ಳಾಗಿದೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಜನರು ರೈಲ್ವೆ ನಿಲ್ದಾಣವನ್ನು ಧ್ವಂಸಗೊಳಿಸಿದ ವೀಡಿಯೊ ಇದೆಂದು ತಿಳಿಯಿತು. ಇದು 2019 ರಲ್ಲಿ ನಡೆದ ಘಟನೆಯ ವೀಡಿಯೊ ಆಗಿದೆ.

ಸೂಕ್ತವಾದ ಕೀವರ್ಡ್‌ಗಳೊಂದಿಗೆ ನಾವು ಹುಡುಕಿದಾಗ, ನವೆಂಬರ್ 18, 2020 ರಂದು ವೈಲ್ಡ್ ಫಿಲ್ಮ್ಸ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್‌ನಿಂದ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಇದರ ತುಣುಕು ಇದೆ. ಇದರಲ್ಲಿ ಪೂರ್ಣ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಭಾರತದಲ್ಲಿ ಸಿಎಎ/ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಯುವಕರು ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣವನ್ನು ಧ್ವಂಸಗೊಳಿಸುತ್ತಾರೆ ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಸ್ಥಳೀಯ ವೆಬ್‌ಸೈಟ್ ಕೂಡ ಘಟನೆಯ ಬಗ್ಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ ಜನರು ಮುರ್ಷಿದಾಬಾದ್ ರೈಲು ನಿಲ್ದಾಣವನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿ ಸೂಚಿಸಿದೆ. ಪ್ರತಿಭಟನೆಯ ಭಾಗವಾಗಿ, ಅವರು ಐದು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ರೈಲು ಹಳಿಗಳನ್ನು ತೆಗೆದುಹಾಕಲು ಪ್ರಯತ್ನಿಸಿದರು ಎಂದು ಬರೆಯಲಾಗಿದೆ.

Eismaya.com ನಲ್ಲಿ ಕೂಡ ಈ ಬಗ್ಗೆ ವರದಿ ಮಾಡಲಾಗಿದೆ. ಡಿಸೆಂಬರ್ 15, 2019 ರಂದು ಪ್ರಕಟವಾದ ಸುದ್ದಿ ನಮಗೆ ಸಿಕ್ಕಿದ್ದು, ಇದರಲ್ಲಿ ಬಂಗಾಳದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಬರೆಯಲಾಗಿದೆ. ಮುರ್ಷಿದಾಬಾದ್‌ನ ಹಲವಾರು ರೈಲು ನಿಲ್ದಾಣಗಳಲ್ಲಿ ಬೆಂಕಿ ಹಚ್ಚಿರುವ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಹಳೆಯದ್ದಾಗಿದೆ. ಇದು 2019 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದೆ.

Related Stories

No stories found.
logo
South Check
southcheck.in