ಹೈದರಾಬಾದ್: ಪ್ರಸಕ್ತ ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನವು ಮೇ 25 ರಂದು ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಲ್ಲಿ ನಡೆಯಿತು. ಆರನೇ ಹಂತದ ಭಾಗವಾಗಿ, ಪಶ್ಚಿಮ ಬಂಗಾಳದಲ್ಲಿ ಕೆಲವು ಸ್ಥಾನಗಳಿಗೆ ಮತದಾನ ನಡೆದಿದ್ದು, ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಆದರೆ ಇಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 79.47 ರಷ್ಟು ಮತದಾನವಾಗಿದೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ.
"ಲೋಕಸಭಾ ಚುನಾವಣೆಯ ಆರನೇ ಹಂತದ ನಡುವೆ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ" ಎಂದು ತೆಲುಗು ಭಾಷೆಯಲ್ಲಿ ಶೀರ್ಷಿಕೆ ಇರುವ ವೀಡಿಯೊವನ್ನು X ಬಳಕೆದಾರರು ಹಂಚಿಕೊಂಡಿದ್ದಾರೆ.
ಅದೇ ರೀತಿಯ ಇನ್ನೊಂದು ಫೇಸ್ಬುಕ್ ಪೋಸ್ಟ್ ಕೂಡ ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್
ಈ ಪೋಸ್ಟ್ ತಪ್ಪುದಾರಿಗೆಳೆಯುತ್ತಿದೆ ಎಂಬುದನ್ನು ನಾವು ಕಂಡುಹಿಡಿದಿದ್ದೇವೆ, ಏಕೆಂದರೆ ಪುರಾವೆಗಳ ಪ್ರಕಾರ ಕೇವಲ ಭದ್ರತಾ ಸಿಬ್ಬಂದಿಗಳ ಮೇಲೆ ಮಾತ್ರ ದಾಳಿ ನಡೆದಿಲ್ಲ ಜೊತೆಗೆ ಬಿಜೆಪಿ ಸಂಸದೀಯ ಅಭ್ಯರ್ಥಿಯ ಮೇಲೆಯೂ ದಾಳಿ ನಡೆದಿದೆ.
ನಾವು ವೈರಲ್ ವೀಡಿಯೊದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಪಶ್ಚಿಮ ಬಂಗಾಳದಲ್ಲಿ ಲೋಕಸಭೆಯ ಆರನೇ ಹಂತದ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.
ಪಶ್ಚಿಮ ಬಂಗಾಳದ ಜಾರ್‌ಗ್ರಾಮ್‌ನ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಅವರ ಮೇಲೆ ಹಿಂಸಾತ್ಮಕ ಗುಂಪು ಶನಿವಾರ ಹಲ್ಲೆ ನಡೆಸಿದೆ. ಘಟನೆಯ ವೀಡಿಯೋದಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿ ಪ್ರಣತ್ ಮತ್ತು ಆತನ ಬೆಂಗಾವಲು ಪಡೆಯನ್ನು ಹಿಂಬಾಲಿಸುತ್ತಿರುವುದನ್ನು ತೋರಿಸುತ್ತದೆ. ದಾಳಿ ನಡೆಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕೂಡಲೇ ಸ್ಪಂದಿಸಿ ಅವರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಬಿಜೆಪಿ ಮುಖಂಡರೊಬ್ಬರ ಕಾರನ್ನು ಸಹ ಧ್ವಂಸಗೊಳಿಸಲಾಗಿದೆ ಎಂದು Times Of India ಸುದ್ದಿ ವರದಿ ಮಾಡಿದೆ.
ಮೇ 25 ರಂದು ANI ನ್ಯೂಸ್ ತನ್ನ X ಖಾತೆಯಲ್ಲಿ ಹಾಕಿದ ಪೋಸ್ಟ್ ಪ್ರಕಾರ, ಜಾರ್‌ಗ್ರಾಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್ ಅವರು ಮೊಂಗ್ಲಾಪೋಟಾ ಕ್ಷೇತ್ರದ ಬೂತ್ ಸಂಖ್ಯೆ 200 ಕ್ಕೆ ಭೇಟಿ ನೀಡಿದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಆದ್ದರಿಂದ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣುತ್ತಿರುವುದರಿಂದ ಈ ಸುದ್ದಿ ತಪ್ಪುದಾರಿಗೆಳೆಯುತ್ತಿದೆ ಎಂದು ನಾವು ತೀರ್ಮಾನಿಸುತ್ತೇವೆ.