ಪ್ರಧಾನಿ ಮೋದಿ 3 ತಿಂಗಳ ಫ್ರೀ ರೀಚಾರ್ಜ್‌ ಕೊಡುಗೆ ನೀಡುತ್ತಿರುವುದು ನಿಜವೆ?

ಪ್ರಧಾನಿ ನರೇಂದ್ರ ಮೋದಿಯವರಿಂದ ಉಚಿತವಾಗಿ 3 ತಿಂಗಳ ರೀಚಾರ್ಜ್ ಮಾಡಿಸಲಾಗುತ್ತದೆ ಎಂಬ ಬಿಜೆಪಿ ವೆಬ್‌ಸೈಟ್‌ಗೆ ಭೇಟಿ ಎಂಬ ಪೋಸ್ಟ್‌ ವೈರಲ್‌ ಆಗಿದೆ. ಏನಿದರ ಹಿಂದಿನ ಸತ್ಯ?
ಪ್ರಧಾನಿ ಮೋದಿ 3 ತಿಂಗಳ ಫ್ರೀ ರೀಚಾರ್ಜ್‌ ಕೊಡುಗೆ ನೀಡುತ್ತಿರುವುದು ನಿಜವೆ?
Published on
2 min read

ವಾದ

2024ರ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತಹಾಕುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ಕಲ್ಪಿಸುತ್ತಿದ್ದಾರೆ.

ವಾಸ್ತವ

ಇದೊಂದು ನಕಲಿ ವೆಬ್‌ತಾಣವಾಗಿದ್ದು, ವಂಚನೆಯ ಉದ್ದೇಶದೊಂದಿಗೆ ಈ ಪೋಸ್ಟ್‌ ವೈರಲ್ ಮಾಡಲಾಗಿದೆ.

ಕಳೆದ ಕೆಲವು ದಿನಗಳಿಂದ ವಾಟ್ಸ್‌ಆಪ್‌ನಲ್ಲಿ ಒಂದು ಪೋಸ್ಟ್‌ ವೈರಲ್‌ ಆಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು, ಚುನಾವಣೆಯ ಹಿನ್ನೆಲೆಯಲ್ಲಿ ಭಾರತದ ಎಲ್ಲ ನಾಗರಿಕರಿಗೆ 3 ತಿಂಗಳು ಉಚಿತ ರೀಚಾರ್ಜ್‌ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಅಕ್ಟೋಬರ್‍‌ 31 ಕಡೆಯ ದಿನ ಎಂದು ಹೇಳುವ ಪೋಸ್ಟ್‌ ವಾಟ್ಸ್‌ಆಪ್‌ನಲ್ಲಿ ವೈರಲ್ ಆಗಿದೆ.

2024ರಲ್ಲಿ ಚುನಾವಣೆಗಳಿದ್ದು, ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗಬೇಕು ಎಂಬ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲಾಗುತ್ತಿದೆ ಎಂದೂ ಈ ವೈರಲ್‌ ಪೋಸ್ಟ್‌ ಹೇಳುತ್ತಿದೆ.

ಈ ಪೋಸ್ಟ್‌ನೊಂದಿಗೆ www.bjp.org@bjp2024.crazyoffer.xyz ಎಂಬ ಲಿಂಕ್‌ ಕೂಡ ಹಂಚಿಕೊಳ್ಳಲಾಗಿದೆ.

ವೈರಲ್‌ ಪೋಸ್ಟ್‌ನಲ್ಲಿರುವ ಪೋಸ್ಟರ್‍‌ನಲ್ಲಿ, ಇದು 'ಬಿಜೆಪಿ ಫೀರೀಚಾರ್ಜ್ ಯೋಜನೆ' ಎಂದಿದ್ದು, ಜಿಯೋ, ವೊಡಫೋನ್, ಬಿಎಸ್‌ಎನ್‌ಎಲ್, ಏರ್‍‌ಟೆಲ್ ಕಂಪನಿಗಳ ಲೊಗೊಗಳನ್ನು ನೀಡಲಾಗಿದೆ.

ಫ್ಯಾಕ್ಟ್‌ಚೆಕ್‌

ಬಿಜೆಪಿಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್‌ ಪೋಸ್ಟ್‌ ಸುಳ್ಳು ಹೇಳುತ್ತಿದೆ.

ನಾವು ಈ ವೈರಲ್‌ ಪೋಸ್ಟ್‌ನ ಕೆಲವು ಕೀ ವರ್ಡ್‌ಗಳನ್ನು ಆಧರಿಸಿ ಗೂಗಲ್‌ ಸರ್ಚ್‌ ಮಾಡಿದೆವು. ಬಿಜೆಪಿ ಇಂತಹ ಘೋಷಣೆ ಮಾಡಿದ ವರದಿಗಳು ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿಲ್ಲ ಎಂಬುದು ತಿಳಿಯಿತು. ಇನ್ನು ಕೊಡುಗೆಯನ್ನು ಕುರಿತು ಯಾವುದೇ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿಯ ಅಧಿಕೃತ ತಾಣಕ್ಕೆ ಭೇಟಿ ನೀಡಿದೆವು. ಅಲ್ಲೂ ಯಾವುದೇ ಪ್ರಕಟಣೆ, ಹೇಳಿಕೆಗಳಿಲ್ಲದಿರುವುದನ್ನು ಗಮನಿಸಿದೆವು.

ವೈರಲ್‌ ಪೋಸ್ಟ್‌ನಲ್ಲಿ ನೀಡಿದ ವೆಬ್‌ತಾಣದ ವಿಳಾಸ ಭಿನ್ನವಾಗಿತ್ತು. ಬಿಜೆಪಿಯ ಅಧಿಕೃತ ತಾಣದ ಸೋಗಿನಲ್ಲಿದ್ದ ಈ ತಾಣದ ವಿಳಾಸ ಹೀಗಿದೆ: www.bjp.org@bjp2024.crazyoffer.xyz. ಆದರೆ ಬಿಜೆಪಿಯ ಅಧಿಕೃತ ವೆಬ್‌ ತಾಣದ ವಿಳಾಸ: www.bjp.org/home ಎಂದಿದೆ.

ನಕಲಿ ತಾಣದ ಮಾಹಿತಿಯನ್ನು ಪಡೆಯಲು whois ತಾಣದಲ್ಲಿ ಹುಡುಕಿದಾಗ ನಮಗೆ ಈ ತಾಣವು 2023ರ ಆಗಸ್ಟ್ 24ರಂದು ನೊಂದಣಿಯಾಗಿದೆ ಎಂದೂ, ಇದು 2024ರ ಆಗಸ್ಟ್‌ 24ಕ್ಕೆ ಇದರ ಅವಧಿ ಮುಗಿಯುತ್ತದೆ ಎಂಬುದು ತಿಳಿಯಿತು.

ಈ ವೆಬ್‌ತಾಣದ ವಿಳಾಸ ನೊಂದಣಿಯು ಅಮೆರಿಕದ ಮೆಸ್ಸಾಚುಸೆಟ್ಸ್‌ನಲ್ಲಿ ಆಗಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ 3 ತಿಂಗಳ ಫ್ರೀರೀಚಾರ್ಜ್‌ ಕೊಡುಗೆ ನೀಡುತ್ತಿರುವುದಾಗಿ ಹೇಳಿರುವ ವೈರಲ್‌ ಪೋಸ್ಟ್‌ ನಕಲಿ ಎಂದೂ, ಬಳಕೆದಾರರ ಮಾಹಿತಿ ಸಂಗ್ರಹಿಸುವ ವಂಚನೆಯ ಉದ್ದೇಶ ಹೊಂದಿರುವುದೆಂದು ತಿಳಿದು ಬಂದಿದೆ.

Related Stories

No stories found.
logo
South Check
southcheck.in