ಬಡವರ ಬಂದು ಟಾಟಾ ಕೇವಲ 1.65 ಲಕ್ಷಕ್ಕೆ ಅದ್ಭುತ ಡಿಸೈನ್ನ ಹೊಸ ಕಾರು ಬಿಡುಗಡೆ ಮಾಡುತ್ತಿದೆಯೆ?: ಇಲ್ಲಿದೆ ನಿಜಾಂಶ

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಸಾಮಾನ್ಯ ಜನರಿಗಾಗಿ ಕಾರುಗಳನ್ನು ತಯಾರಿಸುವ ಕನಸು ಕಂಡಿದ್ದರು. ಕೇವಲ 1 ಲಕ್ಷ ರೂಪಾಯಿಯ ಕಾರು ಇರಬೇಕು
new Nano car, tata nano new
Published on
2 min read

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಸಾಮಾನ್ಯ ಜನರಿಗಾಗಿ ಕಾರುಗಳನ್ನು ತಯಾರಿಸುವ ಕನಸು ಕಂಡಿದ್ದರು. ಕೇವಲ 1 ಲಕ್ಷ ರೂಪಾಯಿಯ ಕಾರು ಇರಬೇಕು, ಬಡವರು ಕೂಡ ಅದನ್ನು ಖರೀದಿಸಬೇಕು ಎಂಬುದು ಅವರ ಆಸೆಯಾಗಿತ್ತು. ಆಗಲೇ ಹುಟ್ಟಿದ್ದು ನ್ಯಾನೋ. ಆದರೆ, ಟಾಟಾ ನ್ಯಾನೋ ಮಾರುಕಟ್ಟೆಯಲ್ಲಿ ಜನಪ್ರಿಯವಾದಷ್ಟೇ ವೇಗವಾಗಿ ಕಣ್ಮರೆಯಾಯಿತು. ಕೇವಲ 10 ವರ್ಷಗಳ ನಂತರ ಮಾರುಕಟ್ಟೆಯಲ್ಲಿ ಅದರ ಉತ್ಪಾದನೆಯನ್ನು ನಿಲ್ಲಿಸಲಾಯಿತು. 2008 ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನ್ಯಾನೋ 2018 ರಲ್ಲಿ ಸ್ಥಗಿತಗೊಂಡಿತು.

ಆದರೆ, ಈಗ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋ ಬಿಡುಗಡೆ ಆಗುತ್ತಿದೆ. ಅದು ಕೂಡ ಅದ್ಭುತ ಡಿಸೈನ್ನೊಂದಿಗೆ ಮತ್ತು ಅತಿ ಕಡಿಮೆ ಬೆಲೆಗೆ ಎಂಬ ಫೋಟೋ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ನ್ಯಾನೋ ಕಾರಿನ ಫೋಟೋ-ವಿಡಿಯೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಸ್ಯಾಮ್ಯೆಲ್ ಮಾರ್ತಳ್ಳಿ ವ್ಲಾಗ್ಸ್ ಎಂಬ ಫೇಸ್ಬುಕ್ ಬಳಕೆದಾರರು, ''ನ್ಯಾನೋ ಮತ್ತೆ ಬರುತ್ತಿದೆ ಮತ್ತು ಈ ಬಾರಿ ಅದು ಸೂಪರ್ ಯಶಸ್ವಿಯಾಗಲಿದೆ, ಏಕೆಂದರೆ ವೈಫಲ್ಯವು ಯಶಸ್ಸಿನ ಒಂದು ಭಾಗವಾಗಿದೆ. TataMotors ಭಾರತದ ಹೆಮ್ಮೆ, ಚಿತ್ರದಲ್ಲಿ ತೋರಿಸಿರುವ ಕಾರು ಕಲಾತ್ಮಕ ಕಲ್ಪನೆಯಾಗಿದೆ,'' ಎಂದು ಬರೆದು ನಿಂಬೆ ಹಸಿರು ಬಣ್ಣದ ಕಾರಿನ ಫೋಟೋ ಹಂಚಿಕೊಂಡಿದ್ದಾರೆ. ಈ ಕಾರಿನ ಹಿಂಭಾಗ TATA ಎಂಬ ಬ್ರ್ಯಾಂಡ್ ಹೆಸರು ಕೂಡ ಬರೆಯಲಾಗಿದ್ದು, ಇದರ ಬೆಲೆ 1.65 ಲಕ್ಷ ಎಂದು ಫೋಟೋದಲ್ಲಿದೆ.

ಹಾಗೆಯೆ ಎಕ್ಸ್ ಖಾತೆಯಲ್ಲಿ ಕೂಡ ಈ ಫೋಟೋ ವೈರಲ್ ಆಗಿದೆ. ಭೀಮ್ ಸಿರಾ ಎಂಬ ಖಾತೆಯಿಂದ ಈ ಫೋಟೋ ಅಪ್ಲೋಡ್ ಆಗಿದ್ದು, ''ನ್ಯಾನೋ ಮತ್ತೊಮ್ಮೆ ಮಾರ್ಕೆಟ್ನಲ್ಲಿ ಸಂಚಲನ ಮೂಡಿಸಲಿದೆ. ಬೆಲೆ 1.65 ಲಕ್ಷ,'' ಎಂದು ಬರೆದುಕೊಂಡಿದ್ದಾರೆ.

ಯೂಟ್ಯೂಬ್ನಲ್ಲಿಯೂ ಈ ಕಾರಿನ ಫೋಟೋ ಹರಿದಾಡುತ್ತಿದೆ. ಎ3ಕಾರ್ಸ್ (A3Cars) ಎಂಬ ಯೂಟ್ಯೂಬ್ ಚಾನೆಲ್ನಲ್ಲಿ, ''2025 ರಲ್ಲಿ ಮುಂದಿನ ತಲೆಮಾರಿನ ಟಾಟಾ ನ್ಯಾನೋ ಬಿಡುಗಡೆ ಆಗಲಿದೆ,'' ಎಂದು ಬರೆದು ಫೋಟೋವನ್ನು ವಿಡಿಯೋ ರೂಪದಲ್ಲಿ ಅಪ್ಲೋಡ್ ಮಾಡಲಾಗಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ಫೋಟೋದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಇದು ಟಾಟಾದ ಹೊಸ ನ್ಯಾನೋ ಕಾರು ಅಲ್ಲ. 2023 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಬಿವೈಡಿ ಸೀಗಲ್ ಇವಿ (BYD Seagull EV) ಕಾರಿನ ಫೋಟೋ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್‍ನಲ್ಲಿ ನ್ಯಾನೋ ಕಾರು ಎನ್ನಲಾಗುತ್ತಿರುವ ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಈ ಸಂದರ್ಭ ಚೀನಾದ ಪ್ರಸಿದ್ಧ ಕಾರು ತಯಾರಿಕ ಕಂಪನಿ ಬಿವೈಡಿ 2023 ರಲ್ಲಿ ಅನಾವರಣ ಮಾಡಿದ ಸೀಗಲ್ ಇವಿ ಕಾರು ಎಂಬುದು ತಿಳಿಯಿತು. ಈ ಕಾರಿನ ಕುರಿತು ಅನೇಕ ವಿಡಿಯೋ ಮತ್ತು ಲೇಖನ ಪ್ರಕಟವಾಗಿದೆ.

ಪ್ರಸಿದ್ಧ ಅಟೊಮೊಬೈಲ್ ವೆಬ್ಸೈಟ್ ಓವರ್ಡ್ರೈವ್ 2023, ಏಪ್ರಿಲ್ 27 ರಂದು ''ಬಿವೈಡಿ ಸೀಗಲ್ EV ಆಟೋ ಶಾಂಘೈ 2023 ರಲ್ಲಿ ಅನಾವರಣಗೊಂಡಿದೆ'' ಎಂದು ಶೀರ್ಷಿಕೆಯೊಂದಿಗೆ ಈ ಕಾರಿನ ಕುರಿತು ಸುದ್ದಿ ಪ್ರಕಟಿಸಿದೆ. ಜೊತೆಗೆ, 'ಬಿವೈಡಿ ಚೀನಾದಲ್ಲಿ ನಡೆಯುತ್ತಿರುವ ಆಟೋ ಶಾಂಘೈ 2023 ಮೋಟಾರ್ ಶೋನಲ್ಲಿ ಹೊಸ ಸೀಗಲ್ ಎಲೆಕ್ಟ್ರಿಕ್ ವೆಹಿಕಲ್ ಅನ್ನು ಬಹಿರಂಗಪಡಿಸಿದೆ. ಇದು ಚಿಕ್ಕದಾದ EV ಆಗಿದೆ. ಇದರ ಬೆಲೆ 78,000 ಚೈನೀಸ್ ಯುವಾನ್ (ಸುಮಾರು ರೂ 9.28 ಲಕ್ಷ) ದಿಂದ ಪ್ರಾರಂಭವಾಗುತ್ತವೆ' ಎಂದು ಬರೆದುಕೊಂಡಿದೆ.

ಅಂತೆಯೆ ಚೀನಾ ಅಟೋ ಶೋ ಎಂಬ ಯೂಟ್ಯೂಬ್ ಖಾತೆಯಲ್ಲಿ 10 ತಿಂಗಳ ಹಿಂದೆ ಅಪ್ಲೋಡ್ ಆದ ವಿಡಿಯೋದಲ್ಲಿ ಬಿವೈಡಿ ಸೀಗಲ್ EV ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ನಾವು ಈ ಬಗ್ಗೆ ಇನ್ನಷ್ಟು ಖಚಿತ ಮಾಹಿತಿಗಾಗಿ ಬೆಂಗಳೂರಿನ ಟಾಟಾ ಮೋಟಾರ್ಸ್ ಶೋ ರೂಮ್ನಲ್ಲಿ ವಿಚಾರಿಸಿದೆವು. ಈ ಕುರಿತು ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್ ಶೋ ರೂಮ್ ವ್ಯವಸ್ಥಾಪಕರು, ''ಇದು ಫೇಕ್ ಫೋಟೋ. ಟಾಟಾ ಕಡೆಯಿಂದ ಈ ರೀತಿಯ ಯಾವುದೇ ಕಾರುಗಳು ಬರುತ್ತಿಲ್ಲ. ನ್ಯಾನೋ ಕಾರಿಗೆ ಮತ್ತು ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿರುವ ಕಾರಿಗೆ ಹೋಲಿಕೆ ಇದೆಯಷ್ಟೆ. ಇದು ಮುಂಬರುವ ಟಾಟಾ ನ್ಯಾನೋ ಎಂಬುದು ಸುಳ್ಳು,'' ಎಂದು ಹೇಳಿದರು.

ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ 1.65 ಲಕ್ಷಕ್ಕೆ ಟಾಟಾ ನ್ಯಾನೋ ಕಾರು ಬರಲಿದೆ ಎಂದು ವೈರಲ್ ಆಗುತ್ತಿರುವ ಫೋಟೋ ಸುಳ್ಳಾಗಿದೆ. ಇದು 2023 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಬಿವೈಡಿ ಸೀಗಲ್ EV ಕಾರು.

Related Stories

No stories found.
logo
South Check
southcheck.in