
ಪಾಕಿಸ್ತಾನದ ಹೆಚ್ಚಿನ ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜೂನ್ 26 ರಿಂದ ಆಗಸ್ಟ್ 31 ರವರೆಗೆ ಪಾಕಿಸ್ತಾನದಾದ್ಯಂತ ಸಾವಿನ ಸಂಖ್ಯೆ 854 ಕ್ಕೆ ಏರಿದ್ದು, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ಮಧ್ಯೆ ಪಾಕಿಸ್ತಾನದ ಪ್ರವಾಹಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ನೀರಿನ ಮೇಲೆ ರೈಲು ಸಾಗುತ್ತಿದ್ದು, ರೈಲಿಗೆ ಹತ್ತುವ ಜಾಗದಲ್ಲಿ ಹಾಗೂ ರೈಲಿನ ಮೇಲೆ ಜನರು ಕುಳಿತುಕೊಂಡಿದ್ದಾರೆ. ರೈಲಿನ ಅರ್ಧ ಭಾಗ ನೀರಿನಿಂದ ಮುಳುಗಿ ಹೋಗಿದೆ. ಬದಿಯಲ್ಲಿ ಹಸುಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಾಣಬಹುದು.
ಈ ವೀಡಿಯೊವನ್ನು ಹಂಚಿಕೊಂಡ ಫೇಸ್ಬುಕ್ ಬಳಕೆದಾರರೊಬ್ಬರು ‘‘ಪಾಕಿಸ್ತಾನದ ರೈಲ್ವೆ ಪರಿಸ್ಥಿತಿ.. ಇವಾಗ ಹೊಸ ಹೊಸ ವಿಧಾನ ಗಳನ್ನ ಕಂಡುಕೊಂಡ ಪಾಕಿಸ್ತಾನಿ ಮೌಲನಗಳು ಇನ್ನು ಮೇಲೆ ಆಕಾಶ ಪುಸ್ತಕದಿಂದ ಪ್ರವಾಹ ತಡೆಗಟ್ಟಬಹುದು’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಮಾಹಿತಿ ಆಗಿದ್ದು, ಈ ವೀಡಿಯೊವನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಕಂಡುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ. ಈ ವೀಡಿಯೊದಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶ ಕಂಡುಬಂತು. ಮೊದಲಿಗೆ ರೈಲಿನ ಬಾಗಿಲ ಬಳಿ ಈರೀತಿ ನೇತಾಡುವುದು ಅಸಾಧ್ಯ, ಇದು ಅಸಹಜ ರೀತಿಯಲ್ಲಿತ್ತು. ಅಲ್ಲದೆ ಕೆಲವರು ನೀರಿನ ಮೇಲೆ ಕೂತು ರೈಲಿನ ಜೊತೆ ಸಾಗುತ್ತಿರುವುದು ಕಾಣಬಹುದು.
ಇಷ್ಟೇ ಅಲ್ಲದೆ ರೈಲಿನ ಮೇಲೆ ಕುಳಿತಿರುವ ಜನರು ಯಾವುದೇ ಸಹಾಯ ಪಡೆಯದೆ ತುದಿಯಲ್ಲಿ ಆರಾಮವಾಗಿ ಕುಳಿತಿದ್ದಾರೆ. ಇನ್ನು ನೀರಿನಲ್ಲಿ ತೇಲಿ ಬರುತ್ತಿರುವ ಹಸುಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ಅಲ್ಲದೆ ಹಸು ಮುಂದೆ ಸಾಗಿದಂತೆ ಅದರ ಆಕಾರ ದೊಡ್ಡದಾಗುತ್ತ ಹೋಗುತ್ತದೆ. ಇದನ್ನೆಲ್ಲ ಗಮನಿಸಿದ ಬಳಿಕ ಈ ವೀಡಿಯೊವನ್ನು ಎಐಯಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು.
ಬಳಿಕ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ‘ದಿ ಐ ವರ್ಲ್ಡ್’ ಎಂಬ ಯೂಟ್ಯೂಬ್ ಚಾನೆಲ್ ಇದೇ ವೈರಲ್ ವೀಡಿಯೊದ ಉತ್ತಮ ಕ್ವಾಲಿಟಿಯಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ಇದನ್ನು ಆಗಸ್ಟ್ 27, 2025 ರಂದು ಹಂಚಿಕೊಳ್ಳಲಾಗಿದೆ. ಚಾನಲ್‌ನ ಬಯೋ ಮತ್ತು ಬಳಕೆದಾರ ಐಡಿಯನ್ನು ಪರಿಶೀಲಿಸಿದಾಗ ಇದು ಪಾಕಿಸ್ತಾನವನ್ನು ಕೇಂದ್ರೀಕರಿಸಿದ AI ವೀಡಿಯೊಗಳನ್ನು ಹಂಚಿಕೊಳ್ಳುವ ಪುಟ ಎಂಬುದು ಸ್ಪಷ್ಟವಾಯಿತು. ಈ ಚಾನೆಲ್ ವೈರಲ್ ವೀಡಿಯೊದಂತೆಯೇ ಪ್ರವಾಹಗಳ ಅನೇಕ AI- ರಚಿತ ವೀಡಿಯೊಗಳನ್ನು ಹೊಂದಿದೆ. ಅಂತಹ ವೀಡಿಯೊವನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಎಐ ಅಂಶಗಳನ್ನು ಪತ್ತೆ ಹಚ್ಚುವ ವಾಸಿಟ್‌ಎಐ ನಲ್ಲಿ ಅಪ್ಲೋಡ್ ಮಾಡಿ ಪರಿಶೀಲಿಸಿದ್ದೇವೆ. ಈ ಸಂದರ್ಭ ಇದು AI- ರಚಿತವಾಗಿದೆ ಎಂದು ದೃಢಪಡಿಸಿದೆ. ಹಾಗೆಯೆ Hivemoderation ನಲ್ಲಿ ಈ ವೀಡಿಯೊ ಎಐಯಿಂದ ರಚಿತವಾಗಿರುವ ಸಾಧ್ಯತೆ ಶೇ. 76 ರಷ್ಟಿದೆ ಎಂದು ಖಚಿತಪಡಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದಲ್ಲಿನ ಪ್ರವಾಹದ ದೃಶ್ಯಗಳಾಗಿ ವೈರಲ್ ಆಗುತ್ತಿರುವ ವೀಡಿಯೊಗಳು AI-ರಚಿತವಾಗಿವೆ ಎಂಬುದು ಸ್ಪಷ್ಟವಾಗಿದೆ.