
ಹಲವಾರು ಜನರು ಮರದ ಈಟಿಗಳನ್ನು ಝಳಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರು ಭಾರತದ ಅಸ್ಸಾಂನಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ತಯಾರಿ ನಡೆಸುತ್ತಿರುವ ಬಾಂಗ್ಲಾದೇಶಿ ವಲಸಿಗರು ಎಂದು ಆರೋಪಿಸಲಾಗಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಸ್ಸಾಂನ ಗೋಲ್ಪಾರದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ಅಕ್ರಮ ಬಾಂಗ್ಲಾದೇಶಿಗಳು ಮನೆಯಲ್ಲಿ ತಯಾರಿಸಿದ ಈಟಿಗಳನ್ನು ಹಿಡಿದುಕೊಂಡಿದ್ದಾರೆ...!!’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಬಾಂಗ್ಲಾದೇಶದ್ದಾಗಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಎರಡು ಬಣಗಳ ನಡುವಿನ ಗಲಾಟೆಯನ್ನು ಇದು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊವನ್ನು ಜುಲೈ 1 ರಂದು ಜಾಗೋ ನ್ಯೂಸ್ 24 ಎಂಬ ಫೇಸ್‌ಬುಕ್ ಪುಟದಲ್ಲಿ ಕಂಡುಕೊಂಡೆವು. "ಎರಡು ಬಿಎನ್‌ಪಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ 40 ಜನರು ಕೊಲ್ಲಲ್ಪಟ್ಟರು, ಲೂಟಿ ಮಾಡಲಾಯಿತು, ಸುಟ್ಟುಹಾಕಲಾಯಿತು | ಕಿಶೋರ್‌ಗಂಜ್" ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೊದ 1:24 ಸೆಕೆಂಡುಗಳಲ್ಲಿ ವೈರಲ್ ಕ್ಲಿಪ್ ಅನ್ನು ಕಾಣಬಹುದು.
ಅದೇ ವೀಡಿಯೊವನ್ನು ಚಾನೆಲ್ ಐ ನ್ಯೂಸ್ ಕೂಡ ಜುಲೈ 1 ರಂದು ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ.
"ಕಿಶೋರ್‌ಗಂಜ್‌ನ ಅಷ್ಟಗ್ರಾಮ್‌ನಲ್ಲಿ ಬಿಎನ್‌ಪಿಯ ಎರಡು ಬಣಗಳ ನಡುವೆ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಉಪಜಿಲ್ಲಾದ ಖೈರ್‌ಪುರ-ಅಬ್ದುಲ್ಲಾಪುರ ಒಕ್ಕೂಟದ ಅಬ್ದುಲ್ಲಾಪುರ ಗ್ರಾಮದಲ್ಲಿ ಹಿಂಸಾತ್ಮಕ ಘಟನೆ ನಡೆದಿದೆ. ಘರ್ಷಣೆಯ ಸಮಯದಲ್ಲಿ ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚಿದ ಆರೋಪಗಳಿವೆ. ಸ್ಥಳೀಯ ಮೂಲಗಳ ಪ್ರಕಾರ, ಯೂನಿಯನ್ ಬಿಎನ್‌ಪಿ ಅಧ್ಯಕ್ಷ ಕಮಲ್ ಪಾಷಾ ಮತ್ತು ಜಿಲ್ಲಾ ಸ್ವಯಂಸೇವಕ ಪಕ್ಷದ ಜಂಟಿ ಸಂಚಾಲಕ ಫರ್ಹಾದ್ ಅಹ್ಮದ್ ನಡುವೆ ದೀರ್ಘಕಾಲದ ಕುಟುಂಬ ಮತ್ತು ರಾಜಕೀಯ ವಿವಾದವಿತ್ತು. ಈ ಹಳೆಯ ಸಂಘರ್ಷ ಹಿಂಸಾಚಾರಕ್ಕೆ ತಿರುಗಿತು" ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ಸುಳಿವು ಪಡೆದು, ನಾವು ಸೂಕ್ತ ಕೀವರ್ಡ್‌ಗಳೊಂದಿಗೆ ಹುಡುಕಿದೆವು. ಆಗ ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್ ಕಲ್ಬೆಲಾ ಜುಲೈ 1 ರಂದು ಈ ಘಟನೆಯನ್ನು ವರದಿ ಮಾಡಿರುವುದು ಕಂಡುಕೊಂಡೆವು.
ವರದಿಯ ಪ್ರಕಾರ, ಕಿಶೋರ್‌ಗಂಜ್‌ನ ಅಷ್ಟಗ್ರಾಮದಲ್ಲಿ, ಎರಡು ಬಿಎನ್‌ಪಿ ಬಣಗಳ ನಡುವಿನ ದೀರ್ಘಕಾಲದ ರಾಜಕೀಯ ಮತ್ತು ಕೌಟುಂಬಿಕ ಪೈಪೋಟಿ ಜುಲೈ 1 ರಂದು ಹಿಂಸಾತ್ಮಕ ಘರ್ಷಣೆಗಳಾಗಿ ಭುಗಿಲೆದ್ದಿತು. ಕನಿಷ್ಠ 40 ಜನರು ಗಾಯಗೊಂಡರು ಮತ್ತು ಈ ಸಂಘರ್ಷದಲ್ಲಿ ಕಲ್ಲು ತೂರಾಟ, ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿ ಹಾನಿ ಸಂಭವಿಸಿತು. ಸ್ಥಳೀಯ ಪೊಲೀಸರು ಅಂತಿಮವಾಗಿ ಮಧ್ಯಪ್ರವೇಶಿಸಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದರು.
ಢಾಕಾ ಮೇಲ್ ಕೂಡ ಜುಲೈ 1 ರಂದು ಅದೇ ಘಟನೆಯನ್ನು ವರದಿ ಮಾಡಿದೆ. ವರದಿಯ ಜೊತೆಗೆ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಪ್ರಕಟಿಸಲಾಗಿದೆ.
ಇದಲ್ಲದೆ, ಅಸ್ಸಾಂನ ಗೋಲ್ಪಾರ ಪೊಲೀಸರ ಅಧಿಕೃತ X ಖಾತೆಯಲ್ಲಿ ಹಂಚಿಕೊಂಡ ಒಂದು ಪೋಸ್ಟ್‌ನಲ್ಲಿ ವೀಡಿಯೊವನ್ನು ನಕಲಿ ಎಂದು ಫ್ಲ್ಯಾಗ್ ಮಾಡಿದೆ. ಪೋಸ್ಟ್‌ನಲ್ಲಿ, "ಪ್ರಸರಣದಲ್ಲಿರುವ ನಕಲಿ ವೀಡಿಯೊವು ಗೋಲ್ಪಾರದಲ್ಲಿ ಘಟನೆ ನಡೆದಿದೆ ಎಂದು ತಪ್ಪಾಗಿ ಹೇಳಿಕೊಂಡಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲರೂ ಇಂತಹ ವದಂತಿಗಳನ್ನು ಹರಡದಂತೆ ನಾವು ವಿನಂತಿಸುತ್ತೇವೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ದುಷ್ಕರ್ಮಿಗಳನ್ನು ಗುರುತಿಸಲು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದೇಶದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯ ವೀಡಿಯೊವನ್ನು ಅಸ್ಸಾಂನಲ್ಲಿ ಪೊಲೀಸರ ಮೇಲೆ ದಾಳಿ ಮಾಡಲು ಅಕ್ರಮ ಬಾಂಗ್ಲಾದೇಶಿ ವಲಸಿಗರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.