
ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗುತ್ತಿವೆ. ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಿಂದ ಬೈಕ್‌ನಲ್ಲಿ ಹೊರಡುತ್ತಿರುವುದನ್ನು ಕಾಣಬಹುದು. ಆದರೆ ಅವನು ಸ್ವಲ್ಪ ಮುಂದೆ ಸಾಗುತ್ತಿದ್ದಂತೆ, ಮತ್ತೊಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಆತನ ಮೇಲೆ ಕತ್ತಿಯಿಂದ ಹಲ್ಲೆ ಮಾಡುತ್ತಾನೆ. ಕಾಪಾಡಲು ಬಂದ ಬೈಕ್ ಸವಾರನ ಮನೆಯವರ ಮೇಲೂ ಹಲ್ಲೆ ಆಗುತ್ತದೆ. ಈ ವೀಡಿಯೊವನ್ನು ಹಂಚಿಕೊಂಡವರು ಮುಸ್ಲಿಂ ವ್ಯಕ್ತಿ ಹಿಂದೂವನ್ನು ಕೊಂದಿದ್ದಾನೆ ಎಂಬರ್ಥದಲ್ಲಿ ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇನ್ನು ಎಷ್ಟು ಫೈಲ್ಸ್ ಗಳನ್ನು ಮಾಡುವುದು. ಉದಯಪುರ ಫೈಲ್ಸ್, ಕೇರಳ ಫೈಲ್ಸ್, ಕಾಶ್ಮೀರ ಫೈಲ್ಸ್. ಇಷ್ಟೊಂದು ಫೈಲ್ಸ್ ಗಳನ್ನು ಮಾಡಲಾಗಿದೆ ಮತ್ತು ಇನ್ನೂ ಎಷ್ಟು ಫೈಲ್ಸ್ ಗಳನ್ನು ಮಾಡಲಾಗುವುದು, ನೀವು ಫೈಲ್ಸ್ ಗಳನ್ನು ಮಾಡಲು ಬಯಸಿದರೆ ದೇಶದ ಜಡ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅವುಗಳನ್ನು ಮಾಡಿ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋದಲ್ಲಿರುವ ಆರೋಪಿ ಮುಸ್ಲಿಂ ಅಲ್ಲ. ಇದನ್ನು ಸುಳ್ಳು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ ಲೆನ್ಸ್ ಬಳಸಿ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹುಡುಕಿದಾಗ, ಪಂಜಾಬ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊ ಸುದ್ದಿ ಸಿಕ್ಕಿತು. ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಇದರಲ್ಲಿ ಕಾಣಬಹುದು. ವೀಡಿಯೊ ಸುದ್ದಿಯ ಪ್ರಕಾರ, ‘‘ಈ ಘಟನೆ ಪಂಜಾಬ್‌ನ ಖನ್ನಾದಲ್ಲಿ ನಡೆದಿದ್ದು, ಕಪಿಲಾ ಕಾಲೋನಿಯಲ್ಲಿ ವಾಸಿಸುತ್ತಿರುವ ವಕೀಲ ಕುಲ್ತಾರ್ ಸಿಂಗ್, ಅವರ ಪತ್ನಿ ಮನ್ಪ್ರೀತ್ ಕೌರ್ ಮತ್ತು ತಾಯಿ ಶರಣಜಿತ್ ಕೌರ್ ಅವರ ಮೇಲೆ ನೆರೆಯ ಬಿಲ್ಲು ಎಂಬ ವ್ಯಕ್ತಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮ್ರಾಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’’ ಎಂಬ ಮಾಹಿತಿ ಇದೆ.
ಇದೇವೇಳೆ ಪಂಜಾಬ್ ಕೇಸರಿಯಲ್ಲಿ ಆಗಸ್ಟ್ 12 ರಂದು ಪ್ರಕಟವಾದ ಈ ವರದಿ ಕೂಡ ಸಿಕ್ಕಿದ್ದು, ಈ ಘಟನೆ ಆಗಸ್ಟ್ 11 ರಂದು ಪಂಜಾಬ್‌ನ ಸಮ್ರಾಲಾ ಎಂಬ ಪ್ರದೇಶದಿಂದ ನಡೆದಿದೆ. ಬಲಿಪಶುವಿನ ಹೆಸರು ಕುಲ್ತಾರ್ ಸಿಂಗ್ ಮತ್ತು ಅವರು ವೃತ್ತಿಯಲ್ಲಿ ವಕೀಲರು. ಘಟನೆಯ ದಿನ, ಕುಲ್ತಾರ್ ತನ್ನ ಮನೆಯಿಂದ ಬೈಕ್‌ನಲ್ಲಿ ಎಲ್ಲೋ ಹೋಗುತ್ತಿದ್ದಾಗ, ಅವರ ನೆರೆಯ ಬಿಲ್ಲು ಎಂಬವರು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಆಗಸ್ಟ್ 13 ರಂದು ಮಾಡಿರುವ ವರದಿಯ ಪ್ರಕಾರ, ಸುರಿಂದರ್ ಸಿಂಗ್ ಅಲಿಯಾಸ್ ಬಿಲ್ಲೂ ಎಂಬ ವ್ಯಕ್ತಿ ವಕೀಲ ಕುಲ್ತಾರ್ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ಬಿಲ್ಲು ಮಾದಕ ವ್ಯಸನಿ ಎಂದು ಸ್ಥಳೀಯರು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಈ ಹಿಂದೆಯೂ ನೆರೆಹೊರೆಯ ಇತರ ಜನರೊಂದಿಗೆ ಆತ ಜಗಳವಾಡಿದ್ದಾನೆ. ಕಳೆದ ಹಲವು ದಿನಗಳಿಂದ ಆತ ಕುಲ್ತಾರ್ ಕುಟುಂಬವನ್ನು ನಿಂದಿಸುತ್ತಿದ್ದ. ಪೊಲೀಸರು ಸುರಿಂದರ್ ಸಿಂಗ್ ಅಲಿಯಾಸ್ ಬಿಲ್ಲೂ ಅವರನ್ನು ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ ಎಂದು ಬರೆಯಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಂಜಾಬ್‌ನ ಲುಧಿಯಾನದ ಸಮ್ರಾಲಾದಲ್ಲಿ ವಕೀಲ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಂ ಅಲ್ಲ, ಆತನ ಹೆಸರು ಸುರಿಂದರ್ ಸಿಂಗ್ ಅಲಿಯಾಸ್ ಬಿಲ್ಲೂ. ಈ ಘಟನೆಯ ವೀಡಿಯೊವನ್ನು ಸುಳ್ಳು ಕೋಮು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.