Fact Check: ಬಾಂಗ್ಲಾದೇಶದಲ್ಲಿ ಕಳ್ಳತನ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಥಳಿಸುತ್ತಿರುವ ವೀಡಿಯೊ ಕೋಮು ಕೋನದೊಂದಿಗೆ ವೈರಲ್

ಯುವಕನೋರ್ವನ ಕಾಲಿಗೆ ಹಾಗೂ ಕೈಗೆ ಬಳ್ಳಿ ಕಟ್ಟಿ ಗಡ್ಡಧಾರಿ ವ್ಯಕ್ತಿ ಕೋಲಿನಿಂದ ಆತನ ಕಾಲಿಗೆ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೀಡಿಯೊದಲ್ಲಿ ಮತ್ತೋರ್ವ ಯುವಕನನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸುತ್ತಿದ್ದಾರೆ.
Fact Check: ಬಾಂಗ್ಲಾದೇಶದಲ್ಲಿ ಕಳ್ಳತನ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಥಳಿಸುತ್ತಿರುವ ವೀಡಿಯೊ ಕೋಮು ಕೋನದೊಂದಿಗೆ ವೈರಲ್
Published on
2 min read

ಯುವಕನೋರ್ವನ ಕಾಲಿಗೆ ಹಾಗೂ ಕೈಗೆ ಬಳ್ಳಿ ಕಟ್ಟಿ ಗಡ್ಡಧಾರಿ ವ್ಯಕ್ತಿ ಕೋಲಿನಿಂದ ಆತನ ಕಾಲಿಗೆ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೀಡಿಯೊದಲ್ಲಿ ಮತ್ತೋರ್ವ ಯುವಕನನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸುತ್ತಿದ್ದಾರೆ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು, ಇದು ಬಾಂಗ್ಲಾ ಹಿಂದೂಗಳ ಸ್ಥಿತಿ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಂಗ್ಲಾದೇಶದಲ್ಲಿ ಕಳ್ಳತನ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಥಳಿಸುತ್ತಿರುವ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಪ್ರಮುಖ ಕೀ ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ, ಮಾರ್ಚ್ 16 ರಂದು ಢಾಕಾ ಮೇಲ್ ವೆಬ್‌ಸೈಟ್‌ನಲ್ಲಿ ‘‘ಕಳ್ಳತನದ ಆರೋಪದ ಮೇಲೆ ಇಬ್ಬರು ಯುವಕರನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿದೆ, ಅಂಗಡಿ ಮಾಲೀಕರ ಬಂಧನ’’ ಎಂಬ ಶೀರ್ಷಿಕೆಯ ವರದಿ ಕಂಡುಬಂದಿದೆ.

ವರದಿಯ ಪ್ರಕಾರ, ಈ ಘಟನೆ ಮಾರ್ಚ್ 16 ರಂದು ಬ್ಯಾರಿಸಲ್‌ನ ಬಾಬುಗಂಜ್ ಉಪಜಿಲಾದ ರಹಮತ್‌ಪುರ ಸೇತುವೆ ಪ್ರದೇಶದಲ್ಲಿ ನಡೆದಿದೆ. ಮಿಥುನ್ (20) ಮತ್ತು ಲಿಂಕನ್ (23) ಎಂಬ ಇಬ್ಬರು ಯುವಕರನ್ನು ಅಂಗಡಿಯಿಂದ ಕಬ್ಬಿಣದ ಹಾಳೆಗಳನ್ನು ಕದ್ದ ಆರೋಪದ ಮೇಲೆ ಥಳಿಸಲಾಯಿತು ಎಂದು ವರದಿ ಬಹಿರಂಗಪಡಿಸುತ್ತದೆ.  

ಮಾರ್ಚ್ 15 ರ ರಾತ್ರಿ ಸೆಬಾ ಎಂಜಿನಿಯರಿಂಗ್ ಎಂಬ ಅಂಗಡಿಯಿಂದ ಹಲವಾರು ಕಬ್ಬಿಣದ ಹಾಳೆಗಳನ್ನು ಕಳವು ಮಾಡಲಾಗಿದೆ. ಬೆಳಿಗ್ಗೆ, ಅಂಗಡಿ ಮಾಲೀಕ ಹಸನ್ ಬಂದಾಗ ಪಕ್ಕದಲ್ಲಿದ್ದ ಸ್ಕ್ರ್ಯಾಪ್ ವ್ಯಾಪಾರಿ ಸೈದುಲ್ ಕದ್ದ ಕಬ್ಬಿಣದ ಹಾಳೆಗಳನ್ನು ಖರೀದಿಸಿದ್ದಾನೆ ಎಂದು ತಿಳಿದುಬಂದಿದೆ. ನಂತರ, ಸೈದುಲ್ ತಪ್ಪೊಪ್ಪಿಗೆಯ ಪ್ರಕಾರ, ಅಂಗಡಿ ಮಾಲೀಕ ಹಸನ್ ಮತ್ತು ಕೆಲವು ಸ್ಥಳೀಯ ಜನರು ಮಿಥುನ್ ಅವರನ್ನು ಕರೆದು ಚಿತ್ರಹಿಂಸೆ ನೀಡಿದರು. ಈ ವರದಿಯಲ್ಲಿ ಮಿಥುನ್ ಎಂಬಾತ ಬಾಬುಗಂಜ್ ಉಪಜಿಲ್ಲಾದ ದೋವರಿಕಾ ಗ್ರಾಮದ ಚಾನ್ ಮುನ್ಶಿ ಅವರ ಮಗ ಮತ್ತು ಲಿಂಕನ್ ಅದೇ ಗ್ರಾಮದ ಬಾಬುಲ್ ಬೆಪಾರಿ ಅವರ ಮಗ ಎಂದು ಬರೆಯಲಾಗಿದೆ. ಇದರಿಂದ ಇವರಿಬ್ಬರು ಮುಸ್ಲಿಮರು ಎಂಬುದು ತಿಳಿಯುತ್ತದೆ.

ಘಟನೆಯ ಕುರಿತು ಹಲವಾರು ಮಾಧ್ಯಮ ವರದಿ ಮಾಡಿದ್ದು ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲ ವರದಿಯಲ್ಲಿ ಚಿತ್ರಹಿಂಸೆಗೊಳಗಾದ ಇಬ್ಬರು ಯುವಕರು ಬಾಬುಗಂಜ್ ಉಪಜಿಲಾದ ದೋವರಿಕಾ ಗ್ರಾಮದ ಚಾನ್ ಮುನ್ಶಿ ಅವರ ಮಗ ಮಿಥುನ್ (20) ಮತ್ತು ಬಾಬುಲ್ ಬೆಪಾರಿ ಅವರ ಮಗ ಲಿಂಕನ್ (23) ಎಂದು ಬರೆಯಲಾಗಿದೆ.

ನಮ್ಮ ಹುಡುಕಾಟದ ವೇಳೆ ಬಾಂಗ್ಲಾದೇಶದ ಫ್ಯಾಕ್ಟ್​ ಚೆಕ್ ವೆಬ್​ಸೈಟ್ Rumor Scanner ಕೂಡ ಈ ಘಟನೆ ಬಗ್ಗೆ ಫ್ಯಾಕ್ಟ್​ ಚೆಕ್ ನಡೆಸಿರುವುದು ಸಿಕ್ಕಿದೆ. ಇವರು ಬಾರಿಸಲ್ ಮೆಟ್ರೋಪಾಲಿಟನ್ ಪೊಲೀಸರ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ OC ಝಾಕಿರ್ ಹೊಸೈನ್ ಸಿಕ್ದರ್ ಅವರನ್ನು ಸಂಪರ್ಕಿಸಿ ಖಚಿತತೆ ಪಡೆದಿದ್ದಾರೆ. ‘‘ಈ ಘಟನೆಯಲ್ಲಿ ದಾಖಲಾಗಿರುವ ಆರೋಪಿ ಜೈಲಿನಲ್ಲಿದ್ದಾರೆ. ಆದಾಗ್ಯೂ, ಚಿತ್ರಹಿಂಸೆಗೆ ಒಳಗಾದವರಲ್ಲಿ ಯಾರೂ ಹಿಂದೂಗಳಲ್ಲ, ಅವರೆಲ್ಲರೂ ಮುಸ್ಲಿಮರು’’ ಎಂದು ಪೊಲೀಸರ ಮಾಹಿತಿಯನ್ನು ಅವರು ಉಲ್ಲೇಖಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕಳ್ಳತನದ ಆರೋಪದ ಮೇಲೆ ಬರಿಸಾಲ್‌ನಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಥಳಿಸುತ್ತಿರುವ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂದು ಹೇಳಿಕೊಂಡು ವೈರಲ್ ಮಾಡಲಾಗುತ್ತಿದೆ. ಇದು ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.

Related Stories

No stories found.
logo
South Check
southcheck.in