
ಮಸೀದಿಯ ಧ್ವಂಸವನ್ನು ತೋರಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಹಂಚಿಕೊಂಡ ಎಕ್ಸ್ ಬಳಕೆದಾರರು "ಉತ್ತರ ಪ್ರದೇಶದಲ್ಲಿ ಸರ್ಕಾರಿ ಸ್ಥಳದಲ್ಲಿ ಇದ್ದ ಅಕ್ರಮ ಮಸೀದಿಯನ್ನು ಹೊಡೆದುರುಳಿಸಿದ ಯೋಗಿ ಸರ್ಕಾರ" ಎಂದು ಬರೆದಿದ್ದಾರೆ. ಇದರ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಸ್ತೆ ಅಗಲೀಕರಣದ ಕೆಲಸಕ್ಕೆ ಸ್ವತಃ ಮುಸ್ಲಿಂ ಸಮುದಾಯದವರೇ ಮಸೀದಿಯನ್ನು ತೆರವು ಮಾಡುತ್ತಿರುವ ದೃಶ್ಯ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಅನೇಕ ಮಾದ್ಯಮಗಳು ಸುದ್ದಿ ಪ್ರಕಸಿರುವುದು ಸಿಕ್ಕಿದೆ. ಜೂನ್ 9ರಂದು ಲೈವ್ ಹಿಂದೂಸ್ತಾನ್ ಈ ಘಟನೆಯ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಅತಿಕ್ರಮಣ ವಿರುದ್ಧ ಆಡಳಿತ ಮಂಡಳಿಯು ತೆಗೆದುಕೊಂಡ ಕಠಿಣ ಕ್ರಮದ ಭಾಗವಾಗಿ, ಹಯಾತ್‌ನಗರ ಪೊಲೀಸ್ ಠಾಣೆ ಪ್ರದೇಶದ ರಸ್ತೆ ಬದಿಯ ಮಸೀದಿಯನ್ನು ಸಮಿತಿಯೇ ನೆಲಸಮಗೊಳಿಸಿದೆ. ಈ ಹಿಂದೆ ನೀಡಲಾದ ನೋಟಿಸ್‌ನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ದೇವಾಲಯದ ಒಂದು ಭಾಗವನ್ನು ಕೆಡವಿರುವುದನ್ನು ಆಡಳಿತವು ದೃಢಪಡಿಸಿದೆ’’ ಎಂದು ಬರೆಯಲಾಗಿದೆ.
ಹಾಗೆಯೆ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಜೂನ್ 9ರ ಪತ್ರಿಕಾ ವರದಿಯಲ್ಲಿ ಹೇಳಿದಂತೆ, ‘‘ಸಂಭಾಲ್‌ನ ಹಯಾತ್‌ನಗರದ ಬಹಜೋಯ್ ರಸ್ತೆಯಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ದರ್ಗಾವನ್ನು ಮುಸ್ಲಿಂ ಸಮುದಾಯವೇ ಬುಲ್ಡೋಜರ್ ಬಳಸಿ ಕೆಡವಿ ತೆಗೆದುಹಾಕಿತು. ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲ ಅಕ್ರಮ ನಿರ್ಮಾಣಗಳನ್ನು ಅದು ಮಸೀದಿಯಾಗಲಿ, ದೇವಸ್ಥಾನವೇ ಆಗಲಿ ತೆಗೆದುಹಾಕಲಾಗುವುದು ಎಂದು ಮಸೀದಿ ಸಮಿತಿಯ ಸದಸ್ಯರು ಸ್ಪಷ್ಟವಾಗಿ ಹೇಳುತ್ತಾರೆ’’ ಎಂದಿದೆ.
ಇನ್ನು ಜೂನ್ 9 ರಂದು ದೈನಿಕ್ ಭಾಸ್ಕರ್ ಪ್ರಕಟಿಸಿದ ವರದಿಯಲ್ಲೂ, ರಸ್ತೆ ಅಗಲೀಕರಣದ ಕೆಲಸಕ್ಕಾಗಿ ಮಸೀದಿಯ ಸಮಿತಿಯೇ ಸ್ವತಃ ಮಸೀದಿಯನ್ನು ಕೆಡವಿದೆ ಎಂದು ಬರೆಯಲಾಗಿದೆ. ಒಂದು ತಿಂಗಳ ಹಿಂದೆ ಈ ಬಗ್ಗೆ ನೋಟಿಸ್ ಬಂದಿದ್ದು ಬಕ್ರೀದ್ ಬಳಿಕ ಕೆಡವಲು ಉದ್ದೇಶಿಸಲಾಗಿತ್ತು. ಅದಕ್ಕೂ ಮೊದಲೇ ಅದೇ ರಸ್ತೆಯಲ್ಲಿದ್ದ ದೇಗುಲವನ್ನು ಜನರೇ ತೆಗೆದಿದ್ದಾಗಿ ಹೇಳಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಉ. ಪ್ರದೇಶದ ಸರ್ಕಾರಿ ಸ್ಥಳದಲ್ಲಿದ್ದ ಅಕ್ರಮ ಮಸೀದಿಯನ್ನು ಯೋಗಿ ಸರ್ಕಾರ ಕೆಡವಿದೆ ಎಂಬ ಹೇಳಿಕೆ ಸುಳ್ಳು, ಇದನ್ನು ಸ್ವತಃ ಮುಸ್ಲಿಂ ಸಮುದಾಯದವರೇ ತೆಗೆಸಿದ್ದಾರೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.