Kannada

Fact Check: ಜನವರಿ 7 ರಂದು ನೇಪಾಳದಲ್ಲಿ ಸಂಭವಿಸಿದ ಭೂಕಂಪ ಎಂದು 2015ರ ವೀಡಿಯೊ ವೈರಲ್

ಈ ವೈರಲ್ ವೀಡಿಯೊಕ್ಕೂ ಜನವರಿ 7 ರಂದು ಸಂಭವಿಸಿದ ಭೂಕಂಪಕ್ಕೂ ಯಾವುದೇ ಸಂಬಂಧವಿಲ್ಲ. ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪವಾಗಿದೆ.

vinay bhat

ಟಿಬೆಟ್-ನೇಪಾಳ ಗಡಿಭಾಗ ಪ್ರಬಲ ಭೂಕಂಪದಿಂದ ತತ್ತರಿಸಿದೆ. ನೇಪಾಳ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಜನವರಿ 7, 2025 ರಂದು ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ. ಮತ್ತೊಂದೆಡೆ, ಚೀನಾದ ಟಿಬೆಟ್ ನಗರವು 6.8 ಪ್ರಮಾಣದಲ್ಲಿ ಕಂಪಿಸಿದೆ. ಇದಕ್ಕೆ ಪೂರಕವಾಗಿ ಭೂಕಂಪದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೇಪಾಳದಲ್ಲಿ ಜನವರಿ 7 ರಂದು ಸಂಭವಿಸಿದ ಭೂಕಂಪದ ವೀಡಿಯೊ ಎಂದು ಹೇಳಲಾಗಿದೆ.

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಜನವರಿ 7, 2025 ರಂದು ಸಿಸಿಟಿವಿ ದೃಶ್ಯಾವಳಿಯ ವೀಡಿಯೊವನ್ನು ಹಂಚಿಕೊಂಡು, ‘‘ನೇಪಾಳದಲ್ಲಿ 7.0 ತೀವ್ರತೆಯ ಭೂಕಂಪ, ದೆಹಲಿಯಿಂದ ಪಾಟ್ನಾದ ವರೆಗೂ ಪರಿಣಾಮ’’ ಎಂದು ಬರೆದುಕೊಂಡಿದ್ದಾರೆ.

ಇದೇ ವೀಡಿಯೊ ಯೂಟ್ಯೂಬ್, ಫೇಸ್​ಬುಕ್​ನಲ್ಲಿ ಕೂಡ ವೈರಲ್ ಆಗಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ, ಈ ವೈರಲ್ ವೀಡಿಯೊಕ್ಕೂ ಜನವರಿ 7 ರಂದು ಸಂಭವಿಸಿದ ಭೂಕಂಪಕ್ಕೂ ಯಾವುದೇ ಸಂಬಂಧವಿಲ್ಲ. ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪವಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಏಪ್ರಿಲ್ 30, 2015 ರಲ್ಲಿ, ಯುರೋ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ. "ಇನ್‌ಕ್ರೆಡಿಬಲ್ ಸಿಸಿಟಿವಿ: ನೇಪಾಳದಲ್ಲಿ 7.9 ತೀವ್ರತೆಯ ಭೂಕಂಪ ಸಂಭವಿಸಿದೆ" ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಏಪ್ರಿಲ್ 30, 2015 ರಂದು, ನೇಪಾಳದ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ ಭೂಕಂಪ ಸಂಭವಿಸಿದೆ. ತ್ರಿಪುರೇಶ್ವರ್ ಸ್ಟ್ರೀಟ್‌ನಲ್ಲಿ ಈ ದೃಶ್ಯಗಳನ್ನು ತೆಗೆಯುವಾಗ, ಭೂಕಂಪದ ತೀವ್ರತೆ 7.9 ಆಗಿತ್ತು. ಭೂಕಂಪದ ತೀವ್ರತೆಗೆ ಅಲ್ಲಿದ್ದ ಹಳೆಯ ಕಂಬವೊಂದು ಕುಸಿದು ಬಿದ್ದಿದೆ’’ ಎಂದು ಹೇಳಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಮೂಲಕ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಏಪ್ರಿಲ್ 30, 2015 ರಂದು ಪ್ರಕಟಿಸಲಾದ ದಿ ಗಾರ್ಡಿಯನ್‌ನ ಸುದ್ದಿ ವರದಿಯನ್ನು ನೋಡಿದ್ದೇವೆ. ವರದಿಯಲ್ಲಿ ಇದೇ ವೈರಲ್ ವೀಡಿಯೊವನ್ನು ಕಾಣಬಹುದು. ‘‘ಈ ಘಟನೆ ನೈಋತ್ಯ ಕಠ್ಮಂಡುವಿನ ತ್ರಿಪುರೇಶ್ವರ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ ಕ್ಷಣವನ್ನು ತೋರಿಸುತ್ತದೆ. 7,879 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ’’ ಎಂದು ಹೇಳಿದೆ.

ಹಾಗೆಯೆ ಇಂಡಿಯಾ ಟುಡೇ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ 30 ಏಪ್ರಿಲ್ 2015 ರಂದು ಪ್ರಕಟಿಸಿದ ವರದಿಯನ್ನು ನಾವು ನೋಡಿದ್ದೇವೆ. ವರದಿಯ ಪ್ರಕಾರ, ‘‘ನೇಪಾಳದ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ ಸಂಭವಿಸಿದ ಭೂಕಂಪನವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕೃತಿಯ ವಿಕೋಪಕ್ಕೆ ಅನೇಕರು ಸಾವನ್ನಪ್ಪಿದ್ದಾರೆ, ಆಸ್ತಿ-ಪಾಸ್ತಿಗಳು ನಾಶವಾಗಿವೆ’’ ಎಂದು ಬರೆಯಲಾಗಿದೆ.

ನೇಪಾಳದ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ ಭೂಕಂಪ ಎಂದು ಇದೇ ವೈರಲ್ ವೀಡಿಯೊವನ್ನು 2015 ರ ಏಪ್ರಿಲ್​ನಲ್ಲಿ ಅನೇಕ ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ಕಾಣಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಜನವರಿ 7, 2025 ರಂದು ನೇಪಾಳದ ಗಡಿಭಾಗದಲ್ಲಿ ಸಂಭವಿಸಿದ ಭೂಕಂಪಕ್ಕೂ ಈ ವೈರಲ್ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಪುರೇಶ್ವರ ಚೌಕ್‌ನಲ್ಲಿ 2015 ರಲ್ಲಿ ಸಂಭವಿಸಿದ ಭೂಕಂಪದ ವೀಡಿಯೊ ಆಗಿದೆ.

Fact Check: Vijay’s rally sees massive turnout in cars? No, image shows Maruti Suzuki’s lot in Gujarat

Fact Check: പ്രധാനമന്ത്രി നരേന്ദ്രമോദിയെ ഡ്രോണ്‍ഷോയിലൂടെ വരവേറ്റ് ചൈന? ചിത്രത്തിന്റെ സത്യമറിയാം

Fact Check: சீன உச்சி மாநாட்டில் மோடி–புடின் பரஸ்பரம் நன்றி தெரிவித்துக் கொண்டனரா? உண்மை என்ன

Fact Check: ಭಾರತ-ಪಾಕ್ ಯುದ್ಧವನ್ನು 24 ಗಂಟೆಗಳಲ್ಲಿ ನಿಲ್ಲಿಸುವಂತೆ ರಾಹುಲ್ ಗಾಂಧಿ ಮೋದಿಗೆ ಹೇಳಿದ್ದರೇ?

Fact Check: రాహుల్ గాంధీ ఓటర్ అధికార యాత్రను వ్యతిరేకిస్తున్న మహిళ? లేదు, ఇది పాత వీడియో