Kannada

Fact Check: ಚೀನಾದಲ್ಲಿ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡಿದ್ದಕ್ಕೆ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಎಂಬ ವೀಡಿಯೊ ಸುಳ್ಳು

ಚೀನಾದಲ್ಲಿ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡಿದ್ದಕ್ಕಾಗಿ ಥಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Vinay Bhat

ಚೀನಾದಲ್ಲಿ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡಿದ್ದಕ್ಕಾಗಿ ಥಳಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ಮೊಣಕಾಲುಗಳಲ್ಲಿ ಕುಳಿತಿದ್ದು ಮತ್ತೊಬ್ಬ ವ್ಯಕ್ತಿ ಹೊಡೆಯುವ ದೃಶ್ಯಗಳನ್ನು ತೋರಿಸುತ್ತದೆ. ಈ ವೀಡಿಯೊದ ಹಿಂದೆ ಜನರು ದೊಡ್ಡ ಮೇಜಿನ ಸುತ್ತಲೂ ಕುಳಿತಿರುವುದನ್ನು ಕಾಣಬಹುದು.

ವಾಟ್ಸ್​ಆ್ಯಪ್ ಗ್ರೂಪ್, ಎಕ್ಸ್ ಸೇರಿದಂತೆ ಎಲ್ಲ ಸಾಮಾಜಿಕ ತಾಣಗಳಲ್ಲಿ ಈ ವೀಡಿಯೊ ವೈರಲ್ ಆಗುತ್ತಿದೆ. ವಾಟ್ಸ್​ಆ್ಯಪ್ ಗ್ರೂಪ್ ಒಂದರಲ್ಲಿ ಈ ವೀಡಿಯೊವನ್ನು ಹಂಚಿಕೊಂಡು ‘ಚೀನಾದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡುತ್ತಾ ಬಿಲ್ಡಪ್ ಕೊಡುತ್ತಿದ್ದಾನೆ. ಆದರೆ, ಚೀನಾದ ರೆಸ್ಟೋರೆಂಟ್​ ಮಾಲಿಕನು ನಮಾಜ್‌ ಮಾಡಿದ್ದಕ್ಕೆ ಸರಿಯಾದ ಪಾಠವನ್ನು ಕಲಿಸಿದ್ದಾನೆ. ಭಾರತದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವವರಿಗೆ ಪ್ರತ್ಯುತ್ತರ ನೀಡುವ ಅಗತ್ಯವನ್ನು ಇದು ತೋರಿಸುತ್ತದೆ.’ ಎಂದು ಬರೆದುಕೊಂಡಿದ್ದಾರೆ.

ವಾಟ್ಸ್​​ಆ್ಯಪ್ ಗ್ರೂಪ್​ ಪೋಸ್ಟ್​ನ ಸ್ಕ್ರೀನ್ ಶಾಟ್.

ಹಾಗೆಯೆ ಮಹವೀರ ಎಂಬ ಎಕ್ಸ್ ಖಾತೆಯಿಂದ ಸೆಪ್ಟೆಂಬರ್ 4, 2024 ರಂದು ಇದೇ ವೀಡಿಯೊ ಅಪ್ಲೋಡ್ ಆಗಿದ್ದು, ‘ಚೀನಾದಲ್ಲಿ ಪಾಕಿಸ್ತಾನಿಯೊಬ್ಬ ರೆಸ್ಟೋರೆಂಟ್ ಅನ್ನು ತನ್ನ ತಂದೆಯ ಮನೆ ಎಂದು ಪರಿಗಣಿಸಿ ನಮಾಜ್ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ರೆಸ್ಟೋರೆಂಟ್ ಮಾಲೀಕರು ಹಿಂದಿನಿಂದ ಬಂದು ಅವರ ನಮಾಜ್ ಸ್ವೀಕರಿಸಿದರು. ಭಾರತದಲ್ಲೂ ಇದೇ ರೀತಿಯ ಚಿಕಿತ್ಸೆ ಬೇಕಾ?’ ಎಂದು ಹೇಳಿಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಥಾಯ್ಲೆಂಡ್‌ನ ಹಳೆಯ ವೀಡಿಯೊವನ್ನು ತಪ್ಪಾದ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಕೋಮು ಕೋನವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆಗ ಸೆಪ್ಟೆಂಬರ್ 20, 2022 ರಂದು ವೈರಲ್ ವೀಡಿಯೊದಿಂದ ಸ್ಕ್ರೀನ್‌ಗ್ರಾಬ್ ಅನ್ನು ಹೊಂದಿರುವ ಟ್ವೀಟ್ ನಮಗೆ ಸಿಕ್ಕಿದೆ. Niubluer ಎಂಬ ಖಾತೆಯಿಂದ ಈ ಟ್ವೀಟ್ ಮಾಡಲಾಗಿದ್ದು. ‘ಈ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಹಣ ಪಾವತಿ ವಿಚಾರವಾಗಿ ಹಲ್ಲೆ ನಡೆಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಈ ಸುಳಿವನ್ನು ತೆಗೆದುಕೊಂಡು, ನಾವು ಗೂಗಲ್​​ನಲ್ಲಿ ಥಾಯ್ ಭಾಷೆಯಲ್ಲಿ "ಉದ್ಯೋಗಿ," "ಹೊಡೆಯುವುದು" "ಸಾಲ" ಎಂಬ ಕೀವರ್ಡ್‌ಗಳನ್ನು ಸರ್ಚ್ ಮಾಡಿದೆವು. ಆಗ ಡಿಸೆಂಬರ್ 4, 2020 ರಂದು Amarintv ಯಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಸಾಲ ನೀಡುವ ಕಂಪನಿಯ ಅಧಿಕಾರಿಯೊಬ್ಬರು ತನ್ನ ಗುಂಪಿನ ಉದ್ಯೋಗಿಯೊಬ್ಬರನ್ನು ಥಳಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದು ಸಂತ್ರಸ್ತೆ ಹೇಳಿದ್ದಾರೆ ಎಂದು ವರದಿಯಲ್ಲಿದೆ.

ಹಾಗೆಯೆ ಡಿಸೆಂಬರ್ 2, 2020 ರಂದು ಡೈಲಿ ನ್ಯೂಸ್ ಥೈಲ್ಯಾಂಡ್‌ನ ಮತ್ತೊಂದು ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆ  2020 ರಲ್ಲಿ ಥೈಲ್ಯಾಂಡ್‌ನಲ್ಲಿ ಸಂಭವಿಸಿದೆ ಎಂದು ಹೇಳುತ್ತದೆ. ಸಾಲ ನೀಡುವ ಕಂಪನಿಯ ಉದ್ಯೋಗಿ ಗ್ರಾಹಕರ ಹಣವನ್ನು ತಪ್ಪಾಗಿ ಉಪಯೋಗಿಸಿದ ಆರೋಪದಲ್ಲಿ ಥಳಿಸಿದ್ದಾರೆ ಎಂದು ಇದರಲ್ಲಿ ಬರೆಯಲಾಗಿದೆ.

ಕಂಪನಿಯು ವ್ಯಾಪಾರ ಕಾರ್ಡ್‌ಗಳನ್ನು ವಿತರಿಸುವ ಮೂಲಕ ಜನರಿಗೆ ತ್ವರಿತ ಸಾಲವನ್ನು ನೀಡುತ್ತದೆ. ಉದ್ಯೋಗಿಗಳು ಗ್ರಾಹಕರಿಂದ ಬಡ್ಡಿಯೊಂದಿಗೆ ಬಾಕಿ ಮೊತ್ತವನ್ನು ಸಂಗ್ರಹಿಸಬೇಕಾಗುತ್ತದೆ. 2020 ರ ಜನವರಿಯಲ್ಲಿ ಸಂತ್ರಸ್ತರಿಗೆ ಗ್ರಾಹಕರಿಂದ ಬಾಕಿಯನ್ನು ಮರುಪಡೆಯಲು ಸಾಧ್ಯವಾಗದಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತನಿಗೆ ಸಮಯಕ್ಕೆ ಸರಿಯಾಗಿ ಸಾಲದ ಹಣವನ್ನು ವಸೂಲಿ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಇತರ ಖಾತೆಗಳಿಂದ ಹಣವನ್ನು ಬದಲಾಯಿಸಿದ್ದಾರೆ. ಈ ವಿಚಾರ ಕಂಪನಿಯ ಅಧಿಕಾರಿಗೆ ತಿಳಿದಿದೆ. ಆತನಿಗೆ ಶಿಕ್ಷಿಸುತ್ತಿರುವಾಗ ರೆಕಾರ್ಡ್ ಮಾಡಲಾಗಿರುವುದು ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಆಗಿದೆ ಎಂದು ವರದಿಯಲ್ಲಿದೆ.

ಡಿಸೆಂಬರ್ 2, 2020 ರಂದು ಇ ಚಾನ್ ವೆಬ್​ಸೈಟ್ ಕೂಡ ಈ ಬಗ್ಗೆ ವರದಿ ಮಾಡಿದೆ. 2020 ರ ಜನವರಿಯಲ್ಲಿ ಮುವಾಂಗ್ ಸಮುತ್ ಸಖೋನ್ ಪೊಲೀಸ್ ಠಾಣೆಯ ಅಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ. ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಇತರರಿಗೆ ಆರೋಪಗಳನ್ನು ಒಪ್ಪಿಕೊಳ್ಳಲು ಸಮನ್ಸ್ ನೀಡಲಾಗಿದೆ ಎಂದು ಬರೆಯಲಾಗಿದೆ.

ಹೀಗಾಗಿ ರೆಸ್ಟೋರೆಂಟ್​ನಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಚೀನಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಥಳಿಸಲಾಗಿದೆ ಎಂದು ತೋರಿಸುವ ವೈರಲ್ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಥೈಲ್ಯಾಂಡ್‌ನ ಹಳೆಯ ವೀಡಿಯೊವನ್ನು ತಪ್ಪಾದ ಮಾಹಿತಿಯೊಂದಿಗೆ ಶೇರ್ ಮಾಡಲಾಗುತ್ತಿದೆ.

Fact Check: Bihar polls – Kharge warns people against Rahul, Tejashwi Yadav? No, video is edited

Fact Check: കൊല്ലത്ത് ട്രെയിനപകടം? ഇംഗ്ലീഷ് വാര്‍ത്താകാര്‍ഡിന്റെ സത്യമറിയാം

Fact Check: அமெரிக்க இந்துக்களிடம் பொருட்கள் வாங்கக்கூடாது என்று இஸ்லாமியர்கள் புறக்கணித்து போராட்டத்தில் ஈடுபட்டனரா?

Fact Check: ಅಮೆರಿಕದ ಹಿಂದೂಗಳಿಂದ ವಸ್ತುಗಳನ್ನು ಖರೀದಿಸುವುದನ್ನು ಮುಸ್ಲಿಮರು ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆಯೇ?

Fact Check: జూబ్లీహిల్స్ ఉపఎన్నికల్లో అజరుద్దీన్‌ను అవమానించిన రేవంత్ రెడ్డి? ఇదే నిజం