ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ಹರಿದಾಡುತ್ತಿದ್ದು, ಚಿಕ್ಕಮಗಳೂರಿನ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಹುಡುಗಿಯ ದೇಹಕ್ಕೆ ದೆವ್ವ ಇದ್ದಕ್ಕಿದ್ದಂತೆ ಪ್ರವೇಶಿಸಿತು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಈ ವೈರಲ್ ವೀಡಿಯೊದಲ್ಲಿ, ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಹುಡುಗಿ ಇದ್ದಕ್ಕಿದ್ದಂತೆ ಕಿರುಚಲು ಮತ್ತು ಕೂದಲನ್ನು ಅಲ್ಲಾಡಿಸಲು ಪ್ರಾರಂಭಿಸುತ್ತಾಳೆ. ಅವಳನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗುತ್ತದೆ. ನಂತರ ಅವಳು ಹಾಸಿಗೆಯಿಂದ ಹಾರಿ, ಗೋಡೆ ಏರುತ್ತಾಳೆ ಮತ್ತು ಸೀಲಿಂಗ್‌ನಿಂದ ತಲೆಕೆಳಗಾಗಿ ನೇತಾಡುತ್ತಾಳೆ. ಈ ಮಧ್ಯೆ, ಅವಳ ಸುತ್ತಲಿನ ಜನರು ಮಂತ್ರಗಳನ್ನು ಪಠಿಸುತ್ತಿರುವುದು ಕಾಣಬಹುದು.
ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಹಂಚಿಕೊಂಡು, ‘‘ಚಿಕ್ಕಮಗಳೂರಿನಲ್ಲಿ ಹಾಸ್ಪಿಟಲ್ ನಲ್ಲಿ ಒಬ್ಬಳು ಅಕ್ಕನಿಗೆ ದೆವ್ವ ಹಿಡಿದಿದೆ. ದೆವ್ವ ಇಲ್ಲ ಅನ್ನೋರಿಗೆ ಈ ವೀಡಿಯೊ ಕಳುಹಿಸಿ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ, ಇದು ಯಾವುದೇ ನೈಜ ಘಟನೆಯದ್ದಲ್ಲ ಬದಲಾಗಿ ಇದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ ಎಂಬುದು ತಿಳಿದುಬಂದಿದೆ.
ಮೊದಲ ನೋಟದಲ್ಲೇ, ಈ ವೀಡಿಯೊ ನೈಜ್ಯತೆಗೆ ದೂರವಾದಂತೆ ಕಾಣುತ್ತದೆ. ಹುಡುಗಿ ಈ ರೀತಿ ಗೋಡೆ ಹತ್ತುವುದು ಅಸಾಧ್ಯ. ಇದಲ್ಲದೆ, ಇದು AI ಬಳಸಿ ರಚಿಸಲಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುವ ಹಲವಾರು ದೋಷಗಳನ್ನು ಒಳಗೊಂಡಿದೆ. ಉದಾಹರಣೆಗೆ, ವೀಡಿಯೊದಲ್ಲಿ ಕಂಡುಬರುವ ಗೋಡೆಯ ಗಡಿಯಾರದ ಸಂಖ್ಯೆಗಳು ವಿಚಿತ್ರ ಮತ್ತು ಅಸ್ಪಷ್ಟವಾಗಿ ಕಾಣುತ್ತವೆ. ವೀಡಿಯೊದ ಆರಂಭದಲ್ಲಿ, ಹಾಸಿಗೆಯ ಮೇಲೆ ಮಲಗಿರುವ ಹುಡುಗಿಯ ಕೈಗಳು ತಲೆಕೆಳಗಾಗಿರುವಂತೆ ಕಾಣುತ್ತದೆ. ಅವಳ ಸುತ್ತಲಿನ ಜನರ ಕೈಗಳು ಮತ್ತು ಬಾಯಿಗಳು ಸಹ ವಿಚಿತ್ರವಾಗಿ ಕಾಣುತ್ತವೆ. ಇದೆಲ್ಲ ಎಐ ವೀಡಿಯೊದ ಅಂಶಗಳಾಗಿವೆ.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಸುಮನ್ ಕಟ್ವಾಲ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೀಡಿಯೊ ಕಂಡುಬಂದಿದೆ. ಈ ಖಾತೆಯು ಹಲವಾರು AI- ರಚಿತ ವೀಡಿಯೊಗಳನ್ನು ಒಳಗೊಂಡಿದೆ. ಅಲ್ಲದೆ ವೈರಲ್ ವೀಡಿಯೊದ ರೀತಿಯಲ್ಲೇ ಮತ್ತೊಂದು ವೀಡಿಯೊ ಕೂಡ ಇದರಲ್ಲಿ ಹಂಚಿಕೊಳ್ಳಲಾಗಿದೆ.
ಖಾತೆಯ ಬಯೋ ವಿಭಾಗವು ಸುಮನ್ ಒಬ್ಬ ಡಿಜಿಟಲ್ ಸೃಷ್ಟಿಕರ್ತ ಮತ್ತು AI ವೀಡಿಯೊಗಳನ್ನು ಸಹ ರಚಿಸುತ್ತಾರೆ ಎಂದು ಹೇಳುತ್ತದೆ. ಪುಟವು ವೈರಲ್ ವೀಡಿಯೊದಂತೆಯೇ ಹಲವಾರು AI- ರಚಿತ ವೀಡಿಯೊಗಳನ್ನು ಒಳಗೊಂಡಿದೆ. ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ನಂತರ ನಾವು AI ಡಿಟೆಕ್ಟರ್ ಪರಿಕರಗಳನ್ನು ಬಳಸಿಕೊಂಡು ವೈರಲ್ ವೀಡಿಯೊವನ್ನು ಪರೀಕ್ಷಿಸಿದ್ದೇವೆ. ಹೈವ್ ಮಾಡರೇಶನ್ ಈ ವೀಡಿಯೊ AI ನಿಂದ ರಚಿಸಲ್ಪಟ್ಟಿರುವ ಸಾಧ್ಯತೆ ಶೇ. 99 ಪ್ರತಿಶತ ಇದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಮಹಿಳೆಗೆ ದೆವ್ವ ಹಿಡಿದಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು, ಇದು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.