ಬಾಂಗ್ಲಾದೇಶದಲ್ಲಿ ಹಿಂದೂ ವಿದ್ಯಾರ್ಥಿಯನ್ನು ಕಟ್ಟಿ ನದಿಗೆ ಎಸೆದಿದ್ದಾರೆ ಎಂಬ ಹೇಳೀಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ವ್ಯಕ್ತಿಯೋರ್ವ ನೆಲದ ಮೇಲೆ ಪ್ರಜ್ಞೆ ಇಲ್ಲದೆ ಮಲಗಿದ್ದಾನೆ, ಆತನ ಕೈ-ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಲಾಗಿದೆ. ಕೆಂಪು ಶರ್ಟ್ ಧರಿಸಿದ ವ್ಯಕ್ತಿಯೋರ್ವ ಕೈ-ಕಾಲುಗಳಿಗೆ ಕಟ್ಟಿರುವ ಬಟ್ಟೆಯನ್ನು ಬಿಡಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಓವಿ ದಾಸ್ ಎಂಬ ಹಿಂದೂ ವಿದ್ಯಾರ್ಥಿಯನ್ನು ಕಟ್ಟಿ ನದಿಗೆ ಎಸೆದಿದ್ದು ಹೀಗೆ. ನಾನು ಮತ್ತೊಮ್ಮೆ ನಿಮ್ಮನ್ನು ಕೇಳುತ್ತಿದ್ದೇನೆ, ಭಾರತದಲ್ಲಿರುವ ಅಕ್ರಮ ಕಾಂಗ್ಲಸ್‌ಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕು.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಕಳೆದ ವರ್ಷದ ಜೂನ್ ತಿಂಗಳಿನದ್ದಾಗಿದ್ದು, ಮಾದಕ ವ್ಯಸನಿಯಾಗಿದ್ದ ಮಗನನ್ನು ಚಿತ್ರಹಿಂಸೆ ನೀಡಿ ತಂದೆಯೇ ಕೊಂದ ಘಟನೆ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜೂನ್ 17 2025 ರಂದು ಜಬೇದ್ ಅಹ್ಮದ್ ಜಬೇದ್ ಅಹ್ಮದ್ ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊ ಕಂಡುಬಂದಿದೆ. ಈ ವೀಡಿಯೊವನ್ನು ಮತ್ತೊಂದು ಆ್ಯಂಗಲ್ನಿಂದ ತೆಗೆಯಲಾಗಿದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿಕೊಂಡಿರುವಂತೆ, ‘‘ಜೂನ್ 17 ರಂದು ಫತುಲ್ಲಾ ಪೂರ್ವದ ಶಿಯಾಚಾರ್‌ನ ಲಾಲ್ಖಾ ಅಡ್ವಾನ್ಸ್ ಗಾರ್ಮೆಂಟ್ಸ್‌ನ ಮುಂಭಾಗದಲ್ಲಿರುವ ನೋಟುನ್ ರಾಸ್ತಾ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ರಸ್ತೆಬದಿಯ ಚರಂಡಿಯಿಂದ ಗೋಣಿಚೀಲದಲ್ಲಿ ತುಂಬಿದ ಶವವನ್ನು ಪತ್ತೆ ಹಚ್ಚಿದ ದೃಶ್ಯ ಇದು.’’ ಎಂದು ಬರೆದುಕೊಂಡಿದ್ದಾರೆ.
ಈ ಆಧಾರದ ಮೇಲೆ ಹುಡುಕಿದಾಗ, ಬಾಂಗ್ಲಾದೇಶದ ಮಾಧ್ಯಮ ಜಯಾ ಜಾಯೆದಿನ್ ವೆಬ್‌ಸೈಟ್‌ನಲ್ಲಿ ಜೂನ್ 17, 2025 ರಂದು "ಫತುಲ್ಲಾದಲ್ಲಿ ಚರಂಡಿಯಿಂದ ಚೀಲದಲ್ಲಿ ಯುವಕನ ಶವ ಪತ್ತೆ" ಎಂಬ ಶೀರ್ಷಿಕೆಯ ವರದಿ ಕಂಡುಬಂದಿದೆ.
‘‘ಜೂನ್ 17 ರಂದು ಬೆಳಿಗ್ಗೆ 11:30 ಕ್ಕೆ, ಫತುಲ್ಲಾದ ಪೂರ್ವ ಶಿಹಾಚಾರ್‌ನ ಲಾಲ್‌ಖಾನ್ ಪ್ರದೇಶದ ರಸ್ತೆಬದಿಯ ಚರಂಡಿಯಿಂದ ಜಾನಿ ಸರ್ಕಾರ್ (25) ಎಂಬ ಯುವಕನ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಬಹಿರಂಗಪಡಿಸುತ್ತದೆ. ಮೃತ ಜಾನಿ ಸರ್ಕಾರ್ ಸಿಲ್ಹೆಟ್ ಜಿಲ್ಲೆಯ ಜಮಲ್‌ಗಂಜ್ ಪೊಲೀಸ್ ಠಾಣೆಯ ಬಿಶನ್‌ಪುರ ಗ್ರಾಮದ ಕರುಣಾ ಸರ್ಕಾರ್ ಅವರ ಮಗ. ಅವರು ತಮ್ಮ ಕುಟುಂಬದೊಂದಿಗೆ ಫತುಲ್ಲಾದ ಲಾಲ್‌ಖಾನ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಫತುಲ್ಲಾ ಮಾದರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ (ತನಿಖೆ) ಅನ್ವರ್ ಹೊಸೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಜಾನಿ ಸರ್ಕಾರ್ ಅವರ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೈ ಮತ್ತು ಕಾಲುಗಳನ್ನು ಕಟ್ಟಿ ಚರಂಡಿಯಿಂದ ವಶಪಡಿಸಿಕೊಳ್ಳಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.
ಜೂನ್ 19 ರಂದು, ಘಟನೆಯ ಕುರಿತು ಪೊಲೀಸ್ ಹೇಳಿಕೆಯು ಪ್ರೋಥೋಮ್ ಅಲೋ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಸಿಕ್ಕಿತು. "ಪೋಷಕರು ಮಾದಕ ವ್ಯಸನಿ ಮಗನನ್ನು ಚಿತ್ರಹಿಂಸೆ ನೀಡಿದ ನಂತರ ಕೊಂದರು" ಎಂಬ ಶೀರ್ಷಿಕೆ ನೀಡಲಾಗಿದೆ. ಜೂನ್ 19 ರಂದು, ನಾರಾಯಣಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸರ್ಕಲ್ ಕೆ) ಮೊಹಮ್ಮದ್ ಹಸಿನುಜ್ಜಮಾನ್ ಅವರು, ತನಿಖೆಯ ಸಮಯದಲ್ಲಿ, ತಂದೆ ಕರುಣಾ ಸರ್ಕಾರ್ ಅವರ ಮಗನ ಕೊಲೆಯಲ್ಲಿ ಭಾಗಿಯಾಗಿರುವುದು ಪೊಲೀಸರು ಕಂಡುಕೊಂಡರು. ನಂತರ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದಾಗ ತಂದೆಯ ಭಾಗಿಯಾಗಿರುವುದು ದೃಢಪಟ್ಟಿತು. ಆರಂಭಿಕ ವಿಚಾರಣೆಯಲ್ಲಿ, ಮಗ ಮಾದಕ ವ್ಯಸನಿಯಾಗಿದ್ದಾನೆ ಎಂದು ಅವರು ಹೇಳಿದರು. ಹಣಕ್ಕಾಗಿ ಅವನು ಆಗಾಗ್ಗೆ ಮನೆಯಲ್ಲಿ ಜಗಳ ಮಾಡುತ್ತಿದ್ದನು. ಅವನು ತನ್ನ ಹೆತ್ತವರನ್ನು ಸಹ ಹೊಡೆಯುತ್ತಿದ್ದನು. ತನ್ನ ಮಗನಿಂದ ದೀರ್ಘಕಾಲ ಚಿತ್ರಹಿಂಸೆಗೊಳಗಾದ ನಂತರ ಆತನ ತಂದೆ, ನಿದ್ರೆಯಲ್ಲಿದ್ದಾಗ ಬ್ರೆಡ್ ರೋಲಿಂಗ್ ಪಿನ್‌ನಿಂದ ತಲೆಗೆ ಹೊಡೆದು ಆತನನ್ನು ಕೊಂದನು. ತಾಯಿ ಅಸಿತಾ ರಾಣಿ ಸರ್ಕಾರ್ ತನ್ನ ಪತಿಗೆ ಸಹಾಯ ಮಾಡಿದರು ಎಂಬ ಮಾಹಿತಿ ಇದರಲ್ಲಿದೆ.
ಇದಲ್ಲದೆ, ನಾರಾಯಣಗಂಜ್ ಜಿಲ್ಲಾ ಪೊಲೀಸರ ಫೇಸ್‌ಬುಕ್ ಪುಟದಲ್ಲೂ ವೈರಲ್ ವೀಡಿಯೊದ ಫೋಟೋದೊಂದಿಗೆ ಇದೇ ಮಾಹಿತಿ ಇರುವುದು ಕಂಡುಕೊಂಡಿದ್ದೇವೆ.
ಇನ್ನು ಬಾಂಗ್ಲಾದೇಶದಲ್ಲಿ ಓವಿ ದಾಸ್ ಎಂಬ ಹಿಂದೂ ವಿದ್ಯಾರ್ಥಿಯನ್ನು ಕಟ್ಟಿ ನದಿಗೆ ಎಸೆದ ಬಗ್ಗೆ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ವೈರಲ್ ಹೇಳಿಕೆಗೆ ಸಂಬಂಧಿಸಿದಂತೆ ಒಂದೇ ಒಂದು ವರದಿ ನಮಗೆ ಕಂಡುಬಂದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದೇಶದಲ್ಲಿ ಹಿಂದೂ ವಿದ್ಯಾರ್ಥಿಯನ್ನು ಕಟ್ಟಿ ನದಿಗೆ ಎಸೆದಿದ್ದಾರೆ ಎಂಬ ಹೇಳೀಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.