ದೇಶದ ವಿವಿಧ ದೇವಾಲಯಗಳಲ್ಲಿ ರಾಮನವಮಿ ಪ್ರಯುಕ್ತ ದುರ್ಗಾ ದೇವಿಯನ್ನು ಪೂಜಿಸಲಾಗುತ್ತಿದೆ. ವಿದೇಶಗಳಲ್ಲಿಯೂ ಸಹ ವಿವಿಧೆಡೆ ದುರ್ಗಾಪೂಜೆಯನ್ನು ಆಚರಿಸುತ್ತಿರುವುದು ಕಂಡು ಬಂದಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ದುರ್ಗಾ ಮಾತೆಯ ಮೂರ್ತಿ ಸೇರಿದಂತೆ ಪೂಜಾ ಮಂಟಪವು ಸಂಪೂರ್ಣ ಧ್ವಂಸವಾಗಿರುವುದು ಕಾಣಬಹುದು. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಮರು ಈ ಕೃತ್ಯ ಎಸೆಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಅನೇಕರು ಪೋಸ್ಟ್ ಮಾಡುತ್ತಿದ್ದಾರೆ.
ಅಕ್ಟೋಬರ್ 12, 2024 ರಂದು ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮ ನಾಶ ನಿಶ್ಚಿತ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ದುರ್ಗಾ ದೇವಿಯ ಮೂರ್ತಿ ಸೇರಿದಂತೆ ಪೂಜಾ ಮಂಟಪವು ಧ್ವಂಸವಾಗಿರುವ ಘಟನೆ ಹಿಂದೆ ಯಾವುದೇ ಕೋಮು ಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಅಕ್ಟೋಬರ್ 12, 2024 ರಂದು ಎಎನ್‌ಐ ಈ ಘಟನೆಯ ಕುರಿತು ಸುದ್ದಿಯನ್ನು ಪ್ರಸಾರ ಮಾಡಿರುವುದು ನಮಗೆ ಸಿಕ್ಕಿದೆ.
ಪೊಲೀಸರು ನೀಡಿರುವ ಮಾಹಿತಿ ಇದರಲ್ಲಿದ್ದು, ‘ಬೆಳಗ್ಗೆ 6 ಗಂಟೆ ಸುಮಾರಿಗೆ ನಮಗೆ ಫೋನ್‌ನಲ್ಲಿ ದೂರು ಬಂದಿದೆ. ನಾವು ಅಲ್ಲಿಗೆ ತಲುಪಿದಾಗ ಮೈದಾನದಲ್ಲಿ ಇರಿಸಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯ ಬಲಗೈಗೆ ಹಾನಿಯಾಗಿದ್ದು, ಪ್ರತಿಮೆಯ ಬುಡದಲ್ಲಿ ಹಾಕಲಾಗಿದ್ದ ಪ್ರಸಾದ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ನಾವು ತ್ವರಿತವಾಗಿ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ರಾತ್ರಿ 8:15 ರ ಸುಮಾರಿಗೆ ಬಂಧಿಸಿದ್ದೇವೆ. ಆರೋಪಿಯ ಹೆಸರು ಕೃಷ್ಣಗೌಡ, ಆತ ಮಾನಸಿಕ ಅಸ್ವಸ್ಥ. ಬೆಳಿಗ್ಗೆ ಹಸಿವಿನಿಂದಾಗಿ ಈ ಪೂಜಾ ಮಂಟಪಕ್ಕೆ ಬಂದಿದ್ದರು’ ಎಂದು ಡಿಸಿಪಿ ಅಕ್ಷಯ್ ಯಾದವ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
Siasat.com ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘ನಗರದ ನುಮಾಯಿಷ್ ಮೈದಾನದಲ್ಲಿ ಗುರುವಾರ ರಾತ್ರಿ ದುರ್ಗಾ ವಿಗ್ರಹಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಬೇಗಂ ಬಜಾರ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣಯ್ಯಗೌಡ ಮಾನಸಿಕ ಅಸ್ವಸ್ಥನಾಗಿದ್ದು, ನಾಗರಕರ್ನೂಲ್ ಜಿಲ್ಲೆಯವನಾಗಿದ್ದಾನೆ. ಮಂಗಳವಾರ ರಾತ್ರಿ 10 ಗಂಟೆಗೆ ನುಮೈಸ್ ಮಲಾದ ದುರ್ಗಾ ಪೂಜಾ ಮಂಟಪವನ್ನು ಈತ ಧ್ವಂಸಗೊಳಿಸಿದ್ದ’ ಎಂದು ವರದಿಯಲ್ಲಿದೆ.
ತೆಲಂಗಾಣ ಟುಡೇ ಕೂಡ ಈ ಸುದ್ದಿಯನ್ನು ಪ್ರಕಟಿಸಿದ್ದು, ಈ ಘಟನೆಯಲ್ಲಿ ಕೃಷ್ಣಗೌಡ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಹೀಗಾಗಿ ನುಮೈಸ್ ಮೈದಾನದಲ್ಲಿನ ದುರ್ಗಾ ಪೂಜಾ ಮಂಟಪದ ಧ್ವಂಸದಲ್ಲಿ ಯಾವುದೇ ಧಾರ್ಮಿಕ ಕೋನವಿಲ್ಲ ಇಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ದುರ್ಗಾ ಮಾತೆಯ ಪ್ರತಿಮೆಗೆ ಹಾನಿ ಮಾಡಿದ್ದಾರೆ ಮತ್ತು ಈತ ಹಿಂದೂ ಆಗಿದ್ದಾರೆ.