Kannada

Fact Check: ವಕ್ಫ್‌ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್​ಗೆ ರೈತರು ಥಳಿಸಿರುವುದು ನಿಜವೇ?

ಸದ್ಯ ರಾಜ್ಯದಲ್ಲಿ ವಕ್ಫ್ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹಮದ್ ಅವರಿಗೆ ರೈತರು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ.

Vinay Bhat

ರಾಜ್ಯಾದ್ಯಂತ ವಕ್ಫ್ ವಿವಾದ ತಾರಕಕ್ಕೇರುತ್ತಿದೆ. ವಕ್ಫ್ ಬೋರ್ಡ್ ಮೂಲಕ ರಾಜ್ಯದ ರೈತರು, ಬಡವರು, ಮಠಗಳ ಆಸ್ತಿಯನ್ನು ಅಕ್ರಮವಾಗಿ ತಮ್ಮದಾಸಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಕೇಳಿ ಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಜಮೀನು, ಮಠದ ಆಸ್ತಿ ಹಾಗೂ ಶಿಕ್ಷಣ ಸಂಸ್ಥೆಗಳ ಜಾಗಗಳ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಲಾಗಿದೆ.

ಸದ್ಯ ರಾಜ್ಯದಲ್ಲಿ ವಕ್ಫ್ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹಮದ್ ಅವರಿಗೆ ರೈತರು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. 1.32 ನಿಮಿಷಗಳ ಈ ವೀಡಿಯೊದಲ್ಲಿ ಜಮೀರ್ ಅಹಮದ್‌ ಅವರನ್ನು ತಳ್ಳಾಡುತ್ತಿರುವ ದೃಶ್ಯವಿದೆ. ಜೊತೆಗೆ ಪೊಲೀಸರು ಸಚಿವರನ್ನು ವಶಕ್ಕೆ ಪಡೆಯುವಂತೆ ಕಾಣುತ್ತಿದೆ.

ಎಕ್ಸ್ ಬಳಕೆದಾರರೊಬ್ಬರು ನವೆಂಬರ್ 8, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ರೈತರ ಏಟು ಹೇಗಿರುತ್ತೆ ಅಂತ ಜಮೀನು ಕಳ್ಳ ಜಮೀರಾನನಿಗೆ ಇವತ್ ಗೊತ್ತಾಯಿತು’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಮತ್ತೋರ್ವ ಬಳಕೆದಾರ, ‘‘ಕೊನೆಗೂ ಬಿತ್ತು ಜಮೀರ್ ಗೆ ಧರ್ಮದೇಟು. ರೈತರ ಆಸ್ತಿ ದೇಶದ ಸಂಪತ್ತು ಇವರ ಅಪ್ಪನ ಮನೆ ಆಸ್ತಿ ಅಂದ್ಕೊಂಡಿದ್ದ ತಿ***ಗೆ ಇನ್ಮೇಲಾದ್ರೂ ಬುದ್ದಿ ಬರ್ಬೇಕು’’ ಎಂದು ಹೇಳಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವೀಡಿಯೊ ವಕ್ಫ್ ವಿಚಾರಕ್ಕೆ ಸಂಬಂಧಿಸಿದ್ದೇ ಅಲ್ಲ. ಇದು 2020 ರ ವೀಡಿಯೊ ಆಗಿದ್ದು, ಸಿಎಎ ಕುರಿತಾಗಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ‘ಜಮೀರ್ ಅಹಮದ್, ಥಳಿತ, ರೈತ’ ಎಂಬ ಕೀವರ್ಡ್ ಮೂಲಕ ಸರ್ಚ್ ಮಾಡಿದ್ದೇವೆ. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಸುದ್ದಿಗಳು ಕಂಡುಬಂದಿಲ್ಲ. ಆ ಬಳಿಕ ‘ಜಮೀರ್ ಅಹಮದ್ ಪೊಲೀಸ್ ವಶಕ್ಕೆ’ ಎಂಬ ಕೀವರ್ಡ್  ಹಾಕಿ ಗೂಗಲ್ ನಲ್ಲಿ ಶೋಧಿಸಿದ್ದು, ಆಗ ಕೆಲ ವರದಿಗಳು ಲಭ್ಯವಾಗಿವೆ.

ಜನವರಿ 13, 2020ರಂದು ವಿಜಯ ಕರ್ನಾಟಕ ವರದಿಯಲ್ಲಿ, ‘‘ಶಾಸಕ ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ನಗರ ಪ್ರವೇಶ ಮಾಡುತ್ತಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರನ್ನು ಬಳ್ಳಾರಿಯ ಹೊರವಲಯದಲ್ಲಿ ಪೊಲೀಸರು ವಶಕ್ಕೆ ಪಡೆದರು. ಬಳ್ಳಾರಿಯಲ್ಲಿ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್‌ ರೆಡ್ಡಿ, ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ ಎಂಬುದಾಗಿ ಮುಸ್ಲಿಂ ಸಮುದಾಯದವರಿಗೆ ಎಚ್ಚರಿಕೆ ನೀಡಿದ್ದರು’’ ಎಂದು ಸುದ್ದಿ ಪ್ರಕಟವಾಗಿದೆ.

ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಆಗ ಜನವರಿ 13, 2020 ರಂದು ಟಿವಿ5 ಕನ್ನಡ ಯೂಟ್ಯೂಬ್‌ ಚಾನೆಲ್‌ ನಲ್ಲಿ ಪೊಲೀಸರ ವಶಕ್ಕೆ ಜಮೀರ್ ಅಹಮದ್ ಶೀರ್ಷಿಕೆಯಲ್ಲಿ ವೀಡಿಯೊ ಪ್ರಕಟಿಸಿರುವುದು ಸಿಕ್ಕಿದೆ. ಸಿಎಎ ಕುರಿತಂತೆ ಮುಸ್ಲಿಮರ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯವರ ಆಕ್ಷೇಪಾರ್ಹ ಮಾತುಗಳನ್ನು ಖಂಡಿಸಿ ಜಮೀರ್ ಅವರು ಬಳ್ಳಾರಿಯಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದು ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಇದರಲ್ಲಿ ಹೇಳಲಾಗಿದೆ. ಈ ವೀಡಿಯೊದಲ್ಲಿ ತೋರಿಸಲಾದ ದೃಶ್ಯಾವಳಿಗಳು ವೈರಲ್‌ ದೃಶ್ಯಕ್ಕೆ ಹೋಲಿಕೆಯಾಗುತ್ತಿದೆ.

ಹಾಗೆಯೆ ಜನವರಿ 13, 2020ರ ಸುವರ್ಣ ನ್ಯೂಸ್‌ ಯೂಟ್ಯೂಬ್‌ ಚಾನೆಲ್​ನಲ್ಲಿ ಕೂಡ ‘Zameer Ahmed Khan Detained By Ballari Cops For Trying To Stage Protest Against Somashekar Reddy’ ಶೀರ್ಷಿಕೆಯಡಿ, ಸೋಮಶೇಖರ ರೆಡ್ಡಿ ಅವರ ಬಳ್ಳಾರಿ ಮನೆ ಎದುರು ಜಮೀರ್ ಅವರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಟಿವಿ9 ಕನ್ನಡದ ಬಳ್ಳಾರಿ ವರದಿಗಾರ ವೀರೇಶ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಹೇಳಿರುವ ಪ್ರಕಾರ ಇದು ಸಚಿವ ಜಮೀರ್ ಅವರ ಹಳೆಯ ವೀಡಿಯೊ ಆಗಿದ್ದು, 2020 ರಲ್ಲಿ ಬಳ್ಳಾರಿಯಲ್ಲಿ ನಡೆದ ಘಟನೆ. ಸಿಎಎ ಕುರಿತಾಗಿ ಮುಸ್ಲಿಮರ ಬಗ್ಗೆ ಸೋಮಶೇಖರ ರೆಡ್ಡಿ ಅವರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಘಟನೆ ಎಂದು ಹೇಳಿದ್ದಾರೆ.

ಈ ಮೂಲಕ ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹಮದ್ ಅವರಿಗೆ ರೈತರು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ವೀಡಿಯೊ ಆಗುತ್ತಿರುವ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು 2020 ರ ವೀಡಿಯೊ ಆಗಿದ್ದು, ಸಿಎಎ ಕುರಿತಾಗಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದ್ದಾಗಿದೆ.

Fact Check: Communal attack on Bihar police? No, viral posts are wrong

Fact Check: പാക്കിസ്ഥാന്റെ വിസ്തൃതിയെക്കാളേറെ വഖഫ് ഭൂമി ഇന്ത്യയില്‍? പ്രചാരണത്തിന്റെ സത്യമറിയാം

Fact Check: உலகத் தலைவர்களில் யாருக்கும் இல்லாத வரவேற்பு அமைச்சர் ஜெய்சங்கருக்கு அளிக்கப்பட்டதா?

ఫ్యాక్ట్ చెక్: మల్లా రెడ్డి మనవరాలి రిసెప్షన్‌లో బీజేపీకి చెందిన అరవింద్ ధర్మపురి, బీఆర్‌ఎస్‌కు చెందిన సంతోష్ కుమార్ వేదికను పంచుకోలేదు. ఫోటోను ఎడిట్ చేశారు.

Fact Check: ಕೇರಳದಲ್ಲಿ ಮುಸ್ಲಿಂ ವ್ಯಕ್ತಿ ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಮಾರಾಟ ಮಾಡುತ್ತಿರುವುದು ನಿಜವೇ?