ಡಿಸೆಂಬರ್ 16, 2022 ರಂದು ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಜುಲೈ 15 ರಂದು ಲಕ್ನೋ ನ್ಯಾಯಾಲಯವು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸೈನಿಕರು ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸಿದ್ದಾರೆ ಎಂಬ ರಾಹುಲ್ ಹೇಳಿಕೆ ಭಾರತೀಯ ಸೇನೆಗೆ ಕಳಂಕ ತಂದಿದೆ ಎಂದು ಆರೋಪಿಸಿ ಮಾಜಿ ಬಿಆರ್‌ಒ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಈ ಪ್ರಕರಣವನ್ನು ದಾಖಲಿಸಿದ್ದರು. ಆಗಸ್ಟ್ 13 ರಂದು ಮುಂದಿನ ವಿಚಾರಣೆ ನಡೆಯಲಿದೆ.
ಈ ಸಂದರ್ಭದಲ್ಲಿ, ನ್ಯಾಯಾಲಯದ ಕೋಣೆಯಿಂದ ಒಂದು ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಪ್ಪು ಕೋಟ್ ಧರಿಸಿದ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು, ಫ್ರೇಮ್‌ನಲ್ಲಿ ರಾಹುಲ್ ಗಾಂಧಿ ಮತ್ತು ಇತರರು ಇರುವುದನ್ನು ತೋರಿಸಲಾಗಿದೆ. ರಾಹುಲ್ ಗಾಂಧಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ವಿರೋಧ ಪಕ್ಷದ ನಾಯಕನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘5 ಸಮನ್ಸ್ ಕಳುಹಿಸಿದ ನಂತರ, ರಾಹುಲ್ ಗಾಂಧಿ ಅಂತಿಮವಾಗಿ ಲಕ್ನೋ ನ್ಯಾಯಾಲಯದಲ್ಲಿ ಭಾರತೀಯ ಸೇನೆಯ ಬಗ್ಗೆ ತನ್ನ ಅವಹೇಳನಕಾರಿ ಹೇಳಿಕೆಗಳ ಕುರಿತಾದ ಅಪರಾಧದ ಕೇಸಲ್ಲಿ ಶರಣಾಗುತ್ತಾನೆ. ಇದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ. ಇಲ್ಲಿ ನೋಡಿದರೆ ಜಾಮೀನಿಗೆ ಅರ್ಜಿ ಸಲ್ಲಿಸಿದ ಕ್ರಿಮಿನಲ್ ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಜಡ್ಜ್ ಸಾಹೇಬರು. ಈಗ ನಿಮಗೆ ತಿಳಿಯಬಹುದು ಈ ಜಡ್ಜ್ ರಾಹುಲ್ ಗಾಂಧಿಗೆ ಖಂಡಿತವಾಗಿಯೂ ಜಾಮೀನು ನೀಡುತ್ತಾರೆ ಅಂತ.’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋದಲ್ಲಿ ಇರುವುದು ರಾಹುಲ್ ಪ್ರಕರಣವನ್ನು ಆಲಿಸುತ್ತಿರುವ ನ್ಯಾಯಾಧೀಶರಲ್ಲ, ಬದಲಾಗಿ ಹಿಂಬದಿಯ ಕೋಟ್ ಧರಿಸಿರುವ ವ್ಯಕ್ತಿ ವಕೀಲರಾಗಿರುವುದರಿಂದ ಈ ಹೇಳಿಕೆ ಸುಳ್ಳಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಹುಡುಕಾಟ ನಡೆಸಿದಾಗ, ಜುಲೈ 15 ರಂದು ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ ಪೋಸ್ಟ್ ಮಾಡಿದ ಟ್ವೀಟ್‌ಗಳ ಸಾಲು ಕಂಡುಬಂದಿದೆ. ಇದು ರಾಹುಲ್ ಗಾಂಧಿ ಅವರ ಲಕ್ನೋ ನ್ಯಾಯಾಲಯದ ವಿಚಾರಣೆಯನ್ನು ಒಳಗೊಂಡಿದೆ. ಪೋಸ್ಟ್‌ಗಳ ಪ್ರಕಾರ, ಪ್ರಕರಣವನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು ವಿಚಾರಣೆ ನಡೆಸಿದರು.
ಈ ಸುಳಿವು ಪಡೆದು, ನಾವು ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರನ್ನು ಹುಡುಕಿದಾಗ, ಅಲಹಾಬಾದ್ ಹೈಕೋರ್ಟ್ ಮತ್ತು ಲಕ್ನೋದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವೆಬ್‌ಸೈಟ್‌ಗಳಲ್ಲಿ ಅವರ ವಿವರಗಳು ಕಂಡುಬಂದವು. ಈ ಮೂಲಗಳ ಪ್ರಕಾರ, ವರ್ಮಾ ಹಿರಿಯ ವಿಭಾಗದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ಹೊಂದಿದ್ದಾರೆ. ಈ ವೆಬ್‌ಸೈಟ್‌ಗಳು ಬಳಸಿರುವ ವರ್ಮಾ ಅವರ ಫೋಟೋ ವೈರಲ್ ಚಿತ್ರದಲ್ಲಿ ಕಪ್ಪು ಕೋಟ್ ಧರಿಸಿದ ವ್ಯಕ್ತಿಗೆ ಹೊಂದಿಕೆಯಾಗುವುದಿಲ್ಲ.
ಕಪ್ಪು ಕೋಟು ಧರಿಸಿ ಸೆಲ್ಫಿ ಕ್ಲಿಕ್ಕಿಸುತ್ತಿರುವ ವ್ಯಕ್ತಿ ಯಾರು?
ಜುಲೈ 15 ರಂದು ಪೋಸ್ಟ್ ಮಾಡಲಾದ ಯುಪಿ ತಕ್ ಅವರ ವೀಡಿಯೊ ವರದಿಯನ್ನು ನಾವು ಕಂಡುಕೊಂಡಿದ್ದೇವೆ, ಇದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವ್ಯಕ್ತಿ ನ್ಯಾಯಾಧೀಶರಲ್ಲ ಎಂದು ಸ್ಪಷ್ಟಪಡಿಸಿದೆ. ಅವರನ್ನು ವಕೀಲ ಸೈಯದ್ ಮಹಮೂದ್ ಹಸನ್ ಎಂದು ಗುರುತಿಸಲಾಗಿದೆ.
ನ್ಯೂಸ್ 24 ಜೊತೆ ಮಾತನಾಡಿದ ಹಸನ್, "ರಾಹುಲ್ ಗಾಂಧಿ ಬಂದಾಗ ನಾನು ನನ್ನ ಸ್ವಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದೆ. ಅನೇಕ ಜನರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ನನ್ನ ಸ್ನೇಹಿತರೊಬ್ಬರು ನನ್ನ ಫೋಟೋ ಕ್ಲಿಕ್ಕಿಸಿ ನಂತರ ಅದನ್ನು ನನಗೆ ಕಳುಹಿಸಿದರು, ಅದನ್ನು ನಾನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೇನೆ. ನಾನು ರಾಹುಲ್ ಗಾಂಧಿಯವರ ವಕೀಲನೂ ಅಲ್ಲ ಅಥವಾ ನ್ಯಾಯಾಧೀಶನೂ ಅಲ್ಲ. ನನ್ನ ಸ್ವಂತ ಕಾನೂನು ಕೆಲಸಕ್ಕಾಗಿ ನ್ಯಾಯಾಲಯದಲ್ಲಿದ್ದೆ" ಎಂದು ಸ್ಪಷ್ಟಪಡಿಸಿದರು.
ಆದ್ದರಿಂದ, ವೈರಲ್ ಆಗಿರುವ ಚಿತ್ರವು ರಾಹುಲ್ ಗಾಂಧಿಯವರ ಪ್ರಕರಣವನ್ನು ಆಲಿಸುವ ನ್ಯಾಯಾಧೀಶರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ತೋರಿಸುತ್ತಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ. ಈ ಹೇಳಿಕೆ ಸುಳ್ಳು.