ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ: ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಯಿತು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿದೆ. ಪ್ರೇಕ್ಷಕರು ಮಾತ್ರವಲ್ಲದೆ ಈ ಸಿನಿಮಾವನ್ನು ಭಾರತೀಯ ಚಿತ್ರರಂಗದ ಅನೇಕ ದಿಗ್ಗಜ ನಟರು ಕೂಡ ಪಾಸಿಟಿವ್ ವಿಮರ್ಶೆ ತಿಳಿಸಿದ್ದಾರೆ.
ಇದರ ಮಧ್ಯೆ ರಜನಿಕಾಂತ್ ಅವರ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರಜನಿ ಅವರು ಸಿನಿಮಾ ಥಿಯೇಟರ್ನಲ್ಲಿ ಕುಳಿತು, ‘‘ಮೈ ಗಾಡ್.. ಏನು ಮಾಡಿದ್ದೀರಿ ಸರ್, ಅದ್ಭುತ.. ಮೈಂಡ್ ಬ್ಲೋಯಿಂಗ್, ಸೂಪರ್.. ನನಗೂ ಕಣ್ಣೀರು ಬಂತು’’ ಎಂದು ಹೇಳುತ್ತಾರೆ. ಇದು ಕಾಂತಾರ ಚಾಪ್ಟರ್- 1 ಸಿನಿಮಾ ನೋಡಿ ರಜನೀಕಾಂತ್ ಅವರ ರಿಯಾಕ್ಷನ್ ಎಂದು ಹೇಳಲಾಗುತ್ತಿದೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. 2022 ರಲ್ಲಿ ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಎ ಆರ್ ರೆಹಮಾನ್ ಈ ಕ್ಲಿಪ್ ಹಂಚಿಕೊಂಡು ಶುಭ ಹಾರೈಸಿದ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಕಾಂತಾರ ಚಾಪ್ಟರ್ -1 ಸಿನಿಮಾ ಹಾಗೂ ರಜನಿಕಾಂತ್ ಎಂಬ ಕೀವರ್ಡ್ ಬಳಸಿ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಇತ್ತೀಚಿನ ಯಾವುದೇ ಸುದ್ದಿ ಕಂಡುಬಂದಿಲ್ಲ. ಅಲ್ಲದೆ ರಜನಿಕಾಂತ್ ಕಾಂತಾರ ಚಾಪ್ಟರ್- 1 ಸಿನಿಮಾ ವೀಕ್ಷಿಸಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿ ಸಿಕ್ಕಿಲ್ಲ.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೈರಲ್ ವಿಡಿಯೊದ ಪೂರ್ಣ ಆವೃತ್ತಿಯನ್ನು ಡಿಸೆಂಬರ್ 12, 2022 ರಂದು IBC Trends ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿರುವುದು ಸಿಕ್ಕಿದೆ. ‘‘ಎ ಆರ್ ರೆಹಮಾನ್ ನಿರ್ದೇಶನದ ಲೇ ಮಸ್ಕ್ ಚಿತ್ರ ವೀಕ್ಷಿಸುತ್ತಿರುವ ರಜನಿಕಾಂತ್..!’’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಈ ಮಾಹಿತಿಯನ್ನು ಪಡೆದು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ Times Of India ಡಿಸೆಂಬರ್ 12, 2022 ರಂದು ಸುದ್ದಿ ಪ್ರಕಟಿಸಿರುವುದು ಕಂಡುಬಂತು. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಡಿಸೆಂಬರ್ 12 ರಂದು ನಟ ರಜನಿಕಾಂತ್ ಅವರ ಹುಟ್ಟುಹಬ್ಬದಂದು ಸಂಗೀತ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಾಮಾಜಿಕ ಮಾಧ್ಯಮದ ಮೂಲಕ ಅವರಿಗೆ ಶುಭ ಹಾರೈಸಿದರು. ವೀಡಿಯೊ ಹಂಚಿಕೊಂಡ ಎ.ಆರ್. ರೆಹಮಾನ್, "ಹುಟ್ಟುಹಬ್ಬದ ಶುಭಾಶಯಗಳು ಸೂಪರ್ ಸ್ಟಾರ್ ರಜನಿಕಾಂತ್ ಜಿ. ಲೆ ಮಸ್ಕ್ ಅನುಭವದ ಬಗ್ಗೆ ನಿಮ್ಮ ದಯೆಯ ಮಾತುಗಳಿಗೆ ಧನ್ಯವಾದಗಳು" ಎಂದು ಬರೆದಿದ್ದಾರೆ. ಕೆಲವು ದಿನಗಳ ಹಿಂದೆ, ಎ.ಆರ್. ರೆಹಮಾನ್ ಅವರು ನಿರ್ದೇಶಿಸಿ ನಿರ್ಮಿಸಿದ ವರ್ಚುವಲ್ ರಿಯಾಲಿಟಿ ಥ್ರಿಲ್ಲರ್ ಚಿತ್ರ 'ಲೆ ಮಸ್ಕ್' ಅನ್ನು ರಜನಿಕಾಂತ್ ವೀಕ್ಷಿಸಿದ್ದರು.’’
‘ಲೆ ಮಸ್ಕ್’ 37 ನಿಮಿಷಗಳ ಚಲನಚಿತ್ರವಾಗಿದ್ದು, ಇದನ್ನು ಲಾಸ್ ಏಂಜಲೀಸ್ ಮತ್ತು ಟೊರೊಂಟೊದಲ್ಲಿ ಪ್ರದರ್ಶಿಸಲಾಗಿತ್ತು. ಸಂಗೀತಗಾರ ಜೂಲಿಯೆಟ್ ಮೆರ್ಡಿನಿಯನ್ ಕಥೆ ಈ ಸಿನಿಮಾದಲ್ಲಿದೆ.
Cinema Express ಕೂಡ ಡಿಸೆಂಬರ್ 22, 2022 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್. ರೆಹಮಾನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ರಜನಿಕಾಂತ್ ಅವರ ವರ್ಚುವಲ್ ರಿಯಾಲಿಟಿ ಚಲನಚಿತ್ರ ಲೆ ಮಸ್ಕ್ ಅನ್ನು ನೋಡಿ ಅನುಭವಿಸುತ್ತಿರುವ ವೀಡಿಯೊವನ್ನು ರೆಹಮಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಕಾಂತಾರ ಚಾಪ್ಟರ್- 1 ಸಿನಿಮಾ ನೋಡಿದ ಬಳಿಕ ರಜನಿಕಾಂತ್ ರಿಯಾಕ್ಷನ್ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೇಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.