ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಿಹಾರ ಚುನಾವಣೆ ನಂತರ ಕಾಂಗ್ರೆಸ್ ನಾಯಕ ವಿದೇಶಕ್ಕೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಅಪರಿಚಿತ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.
ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಚುನಾವಣೆ ಬಂದಾಗ ಬಂದು. ಮುಗಿದ ತಕ್ಷಣ ವಿದೇಶಕ್ಕೆ ಮೋಜು ಮಾಡಲು ಹೋಗುವ ರಾಹುಲ್ ಭಯ್ಯಾನನ್ನು ನಂಬಿದ್ರೆ ಮಿತ್ರಪಕ್ಷಗಳಿಗೂ ಹೊಗೆ ಗ್ಯಾರಂಟಿ!’’ ಎಂದು ಬರೆದುಕೊಂಡಿದ್ದಾರೆ. (Archive)
ಬಿಹಾರ ಚುನಾವಣೆಗು ಮುಂಚಿನ ವೀಡಿಯೊ ಇದಾಗಿರುವುದರಿಂದ ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಅಲ್ಲದೆ, ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡ ಯುವತಿ ಅವರ ಸೋದರ ಸೊಸೆ ಮಿರಾಯಾ ವಾದ್ರಾ, ಪ್ರಿಯಾಂಕಾ ಗಾಂಧಿಯವರ ಮಗಳು.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಈ ವೀಡಿಯೊವನ್ನು ಅಕ್ಟೋಬರ್ 14, 2025 ರಂದು ಬೇರೆ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿರುವುದು ಸಿಕ್ಕಿತು. ಹೀಥ್ರೂ ವಿಮಾನ ನಿಲ್ದಾಣದಲ್ಲಿ ವ್ಲಾಗರ್ ಒಬ್ಬರು ರಾಹುಲ್ ಗಾಂಧಿಯನ್ನು ಭೇಟಿಯಾದರು ಮತ್ತು ಅವರು ವೀಡಿಯೊವನ್ನು ಹಂಚಿಕೊಂಡರು ಎಂಬ ವಿವರಣೆಯೊಂದಿಗೆ ಫೇಸ್‌ಬುಕ್‌ನಲ್ಲಿ ಈ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದೆ.
ನಂತರದ ತನಿಖೆಯಲ್ಲಿ ಈ ವೀಡಿಯೊವನ್ನು ಮೊದಲು ಸೆಪ್ಟೆಂಬರ್ 2025 ರಲ್ಲಿ UK Vibes-with-OM ಎಂಬ ಯೂಟ್ಯೂಬ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ಆದರೆ, ಈ ದೃಶ್ಯಾವಳಿ ಪ್ರಸ್ತುತ ಲಭ್ಯವಿಲ್ಲ. ಇದರಿಂದ ಪ್ರಸಾರವಾಗುತ್ತಿರುವ ದೃಶ್ಯಗಳು ಬಿಹಾರ ಚುನಾವಣೆಗೂ ಬಹಳ ಹಿಂದಿನವು ಎಂಬುದು ಸ್ಪಷ್ಟವಾಗುತ್ತದೆ.
ನಂತರ, ಚುನಾವಣಾ ಫಲಿತಾಂಶದ ಬಳಿಕ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆಯೇ ಎಂಬುದನ್ನು ಸಹ ಪರಿಶೀಲಿಸಿದ್ದೇವೆ. ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ಗಾಂಧಿ ನವೆಂಬರ್ 15, 2025 ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಸಭೆ ಎಂದು ಸಿಎನ್ಎನ್ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಾಹುಲ್ ಗಾಂಧಿ ಅವರು ಖರ್ಗೆ ಅವರ ದೆಹಲಿಯ ನಿವಾಸಕ್ಕೆ ಸಭೆಗೆ ಆಗಮಿಸುತ್ತಿರುವ ದೃಶ್ಯಗಳನ್ನು ಎಎನ್‌ಐ ಒದಗಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಿಹಾರ ಚುನಾವಣಾ ನಂತರ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುವುದನ್ನು ತೋರಿಸುವ ವೀಡಿಯೊ ಹಳೇಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.